Advertisement

ಜನಸ್ನೇಹಿ ನೈಟ್‌ಬೀಟ್‌ಗೆ ಚಿಂತನೆ: ಬೊಮ್ಮಾಯಿ

09:59 AM Oct 26, 2019 | Team Udayavani |

ಬಂಟ್ವಾಳ: ಜನರ ಜತೆಗೆ ಪೊಲೀಸರ ಸಂಬಂಧವನ್ನು ವೃದ್ಧಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ನೈಟ್‌ಬೀಟ್‌(ರಾತ್ರಿ ಪಾಳಿ)ಗೆ ಜನಸ್ನೇಹಿ ಯೋಜನೆಯನ್ನು ತರಲು ಚಿಂತಿಸ ಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ಗುರುವಾರ ಬಂಟ್ವಾಳದ ನಿರೀಕ್ಷಣ ಮಂದಿರದಲ್ಲಿ ಪಶ್ಚಿಮ ವಲಯ ಮತ್ತು ಮಂಗಳೂರಿನ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ರಾತ್ರಿ ಪಾಳಿಗಳಲ್ಲಿ ಕೆಲಸ ನಿರ್ವಹಿಸುವ ಪೊಲೀಸರ ಜತೆಗೆ ಜನರ ಸಹಕಾರವೂ ದೊರೆತಾಗ ಜನರು ಮತ್ತು ಪೊಲೀಸರ ಸಂಬಂಧಗಳು ವೃದ್ಧಿಯಾಗುತ್ತವೆ. ಈ ಕುರಿತು ಶೀಘ್ರ ಜನಸ್ನೇಹಿ ಯೋಜನೆ ಜಾರಿಗೆ ಬರಲಿದೆ.

ಇಂದಿನ ಸಭೆಯಲ್ಲಿ ಕರಾವಳಿ ಭಾಗದ ಕರಾವಳಿಯ ಭದ್ರತಾ ಪಡೆಯನ್ನು ಬಲವರ್ಧನೆಗೊಳಿಸಿ ಹೆಚ್ಚಿನ ಸವಲತ್ತುಗಳನ್ನು ಕೊಡುವ ನಿಟ್ಟಿನಲ್ಲಿ ಚರ್ಚಿಸಲಾಗಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ‌ವನ್ನು ತನ್ನ ಮುಂದಿಟ್ಟಿದ್ದು, ಅದರ ಕುರಿತು ಗಮನ ಹರಿಸಲಾಗುತ್ತದೆ. ಬಂಟ್ವಾಳ ನಗರ ಮತ್ತು ಗ್ರಾಮಾಂತರಕ್ಕೆ ಪ್ರತ್ಯೇಕ ಇನ್‌ಸ್ಪೆಕ್ಟರ್‌ಗಳನ್ನು ನೇಮಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.

ಎಸ್‌ಪಿ ಕಚೇರಿ ಪುತ್ತೂರಿಗೆ: ಸಭೆ ನಡೆಸಿ ತೀರ್ಮಾನ
ದ.ಕ. ಜಿಲ್ಲಾ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಕುರಿತು ಬೆಂಗಳೂರಿನಲ್ಲಿ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇಲಾಖೆಯ ಸಿಬಂದಿ ನೇಮಕಾತಿ ಸಂದರ್ಭದಲ್ಲಿ ಸೂಕ್ತ ಸ್ಪಂದನೆ ಸಿಗದೆ ಇರುವುದರಿಂದ ಅದರ ಕುರಿತು ಜಾಗೃತಿ ಅಭಿಯಾನಕ್ಕಾಗಿ ಸೂಚನೆ ನೀಡಲಾಗಿದೆ ಎಂದರು.

ಹುಬ್ಬಳ್ಳಿ ಸ್ಫೋಟದ ಬಳಿಕ ಉಗ್ರರ ಆತಂಕ ಹೆಚ್ಚಿದ್ದು, ಕರಾವಳಿಯ ಸಮುದ್ರ ತೀರ, ರೈಲ್ವೇ ಸೇರಿದಂತೆ ಎಲ್ಲ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. ದೇಶದಲ್ಲಿ ಅತಿ ಹೆಚ್ಚಿನ ಪೊಲೀಸ್‌ ವಸತಿ ಗೃಹಗಳಿರುವ ರಾಜ್ಯ ಕರ್ನಾಟಕವಾಗಿದ್ದು, ಶೇ.60 ಇರುವ ಮನೆಗಳನ್ನು ಶೇ.80ಕ್ಕೆ ಏರಿಸುವ ಗುರಿ ಹೊಂದಲಾಗಿದೆ.

Advertisement

ಮುಂದೆ ಅಗತ್ಯ ಇರುವ ಭಾಗದಲ್ಲಿ ವಸತಿ ವ್ಯವಸ್ಥೆಗಾಗಿ ಪ್ರಸ್ತಾವನೆಯನ್ನು ಪಡೆದು ಮುಂದಿನ ಬಜೆಟ್‌ನಲ್ಲಿ ಘೋಷಿಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಗೃಹರಕ್ಷಕ ದಳ ವೇತನ ಗೊಂದಲ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಕುರಿತು ಡಿಜಿಯ ವರು ಅಧ್ಯಯನ ನಡೆಸು ತ್ತಿದ್ದಾರೆ ಎಂದರು. ಶಾಸಕ ರಾಜೇಶ್‌ ನಾೖಕ್‌ ನೇತೃತ್ವದಲ್ಲಿ ಸಚಿವರನ್ನು ಸ್ವಾಗತಿಸಲಾಯಿತು. ನಿರೀಕ್ಷಣ ಮಂದಿರದಲ್ಲಿ ಪೊಲೀಸ್‌ ಗೌರವ ವಂದನೆ ಸಲ್ಲಿಸಲಾಯಿತು.

ಅಧಿಕಾರಿಗಳ ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌, ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್‌, ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್‌, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಸಹಿತ ಉನ್ನತ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದರು.

“ನಿರಾಶ್ರಿತರಿಗೆ ಸೂಕ್ತ ಪರಿಹಾರ’
ಮಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಸಂಭವಿಸಿದ ನೆರೆ ಹಾವಳಿ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಈ ಹಿಂದೆ ನೀಡಿದ ಮಾದರಿಯಲ್ಲೇ ಪರಿಹಾರವನ್ನು ಎಲ್ಲ ನೆರೆಪೀಡಿತರಿಗೆ ನೀಡಲಾಗುವುದು. ಸುಮಾರು 5 ಸಾವಿರ ಮನೆ ಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿಯಿದೆ. ಎ ಮತ್ತು ಬಿ ವಿಭಾಗ ಮಾಡಿ ಪರಿಹಾರವನ್ನು ತಲಾ 5 ಲಕ್ಷ ರೂ. ಮತ್ತು ಭಾಗಶಃ ಹಾನಿಯಾ ದವರಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು. ರಾಜ್ಯದ 12 ಜಿಲ್ಲೆಗಳಲ್ಲಿ ಬೆಳೆ ಹಾನಿಯಾಗಿದೆ. ಎಲ್ಲರಿಗೂ ಪರಿಹಾರ ನೀಡಲಿದ್ದೇವೆ ಎಂದರು.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಮರಾವತಿ ಎಕ್ಸ್‌ಪ್ರೆಸ್‌ನಲ್ಲಿ ನಿಂಬೆ ಹಣ್ಣಿನ ಮಾದರಿಯ ಸ್ಫೋಟಕ ಇತ್ತು. ಅಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸ್‌ ಸಂಪರ್ಕ ಹೊಂದಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಉಗ್ರ ಸಂಘಟನೆಗಳ ಕೈವಾಡದ ಬಗ್ಗೆ ತನಿಖೆಯಿಂದ ಗೊತ್ತಾಗಲಿದೆ ಎಂದರು.

ಕುಮಾರಸ್ವಾಮಿ ಮನೆಗೆ ಐಟಿ ದಾಳಿಯಾದರೆ ಯಡಿಯೂರಪ್ಪ ಅವರ ದಾಖಲೆ ಸಿಗಲಿದೆ ಎಂಬ ಎಚ್‌ಡಿಕೆ ಹೇಳಿಕೆ ಬಗ್ಗೆ ಉತ್ತರಿಸಿ, ಅವರು ಏನೇನೋ ಹೇಳುತ್ತಾರೆ. ಹಾಗಾದರೆ ಯಡಿಯೂರಪ್ಪ ಅವರ ದಾಖಲೆಗಳನ್ನು ಕುಮಾರಸ್ವಾಮಿ ಅವರು ಇರಿಸಿಕೊಂಡ ಹಾಗಾಗಿದೆ. ಹೀಗಾಗಿ ಇಂತಹ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ತಮ್ಮ ವಿಚಾರಗಳನ್ನು ಮುಚ್ಚಿಡಲು ಹೀಗೆಲ್ಲ ಆರೋಪ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next