Advertisement

180ಕ್ಕೂ ಅಧಿಕ ಕಡೆ ಮುನ್ಸೂಚನಾ ಸೆನ್ಸರ್‌ಗೆ ಚಿಂತನೆ

12:17 PM Aug 17, 2020 | Suhan S |

ಬೆಂಗಳೂರು: ನಗರದ 27 ಕಡೆ ಅಳವಡಿಸಿದ್ದ ಸೆನ್ಸರ್‌ ಆಧಾರಿತ ನೆರೆ ಮುನ್ಸೂಚನಾ ಯಂತ್ರಗಳ ಪ್ರಯೋಗ ಫ‌ಲ ನೀಡಿದ ಹಿನ್ನೆಲೆಯಲ್ಲಿ 180ಕ್ಕೂ ಹೆಚ್ಚು ಕಡೆ ಈ ಯಂತ್ರಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

Advertisement

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ವು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಸೆನ್ಸರ್‌ ಆಧಾರಿತ ಯಂತ್ರಗಳನ್ನು ಅಳವಡಿಸಿದೆ. ಇವು ಕನಿಷ್ಠ 15 ನಿಮಿಷ ಮುಂಚಿತವಾಗಿ ನೆರೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಲರ್ಟ್‌ ಸಂದೇಶ ರವಾನಿಸುತ್ತಿವೆ. ಇದೇ ಮಾದರಿಯನ್ನು ನೆರೆಗೆ ಆಗಾಗ್ಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ, ಅಳವಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಕೆಎಸ್‌ಎನ್‌ಡಿಎಂಸಿ ತಾಂತ್ರಿಕ ಸಮೀಕ್ಷೆ ನಡೆಸಿದ್ದು, ಪಾಲಿಕೆ ಜತೆಗೆ ಜಂಟಿಯಾಗಿ ಭೌತಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆದಿದೆ. ಈ ವೇಳೆ ನೆರೆ ಉಂಟಾಗಬಹುದಾದ ಪ್ರದೇಶ, ಹತ್ತಿರದಲ್ಲಿರುವ ಮಳೆ ನೀರುಗಾಲುವೆ, ಅದಕ್ಕೆ ತಡೆಗೋಡೆ ಮತ್ತು ಫೆನ್ಸಿಂಗ್‌ ಒಳಗೊಂಡಂತೆ ಮತ್ತಿತರ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ತಲಾ ಸೆನ್ಸರ್‌ಗೆ ಸುಮಾರು 35- 40 ಸಾವಿರ ರೂ. ಖರ್ಚಾಗುತ್ತದೆ. ಯೋಜನೆ ವರದಿ ಸಿದ್ಧಪಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿಯಂತ್ರಣದಡಿ ಅನುದಾನ ಕೋರಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮಳೆ ನೀರುಗಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆ ತಕ್ಷಣ ರಿಸೀವರ್‌ಗೆ ರವಾನೆಯಾಗುತ್ತದೆ. ಅಲ್ಲಿಂದ ನಿಯಂತ್ರಣ ಕೊಠಡಿಗೆ ಹೋಗುತ್ತದೆ. ಆ ಮೂಲಕ ಉಳಿದೆಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ತಲುಪುತ್ತದೆ. ಇವೆಲ್ಲವೂ ಕೆಲವೇ ಸೆಕೆಂಡ್‌ ಗಳಲ್ಲಿ ಆಗುತ್ತದೆ.

ಏನು ಉಪಯೋಗ? :  ಸೆನ್ಸರ್‌ಗಳು 10 ಮಿ.ಮೀ.ನಷ್ಟು ನೀರು ನಿಲುಗಡೆ ಆಗಿರುವುದನ್ನೂ ಪತ್ತೆಹಚ್ಚಿ, ಮಾಹಿತಿ ರವಾನೆ ಮಾಡುತ್ತವೆ. ಹೀಗಾಗಿ, ಮುನ್ಸೂಚನೆಯ ನಿಖರತೆ ಹೆಚ್ಚಲಿದೆ. ಹೀಗೆ ಮುನ್ಸೂಚನೆ ದೊರೆಯುತ್ತಿದ್ದಂತೆ, ಆ ಪ್ರದೇಶದಲ್ಲಿರುವ ನೆರೆ ಉಂಟಾಗಬಹುದಾದ ಭಾಗವನ್ನು ಗುರುತಿಸಿ, ಜನರನ್ನು ತೆರವುಗೊಳಿಸಬಹುದು. ಆಗುವ ಅನಾಹುತ ತಪ್ಪಿಸಬಹುದು ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿಯೊಬ್ಬರು ತಿಳಿಸುತ್ತಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಮುಂದುವರಿದ ತಂತ್ರಜ್ಞಾನಗಳನ್ನು ಬಳಸಿ, ಕೆರೆಗಳು, ಮಳೆ ನೀರುಗಾಲುವೆಗಳ ಜಾಲಗಳನ್ನು ವ್ಯವಸ್ಥಿತಗೊಳಿಸಿ, ವ್ಯರ್ಥವಾಗಿ ಹೋಗುವ ನೀರನ್ನು ಕೂಡ ಸಂಪನ್ಮೂಲವಾಗಿ ಪರಿವರ್ತಿಸಬಹುದು ಎನ್ನಲಾಗಿದೆ. ಒಟ್ಟಾರೆ 209 ಕಡೆಗಳಲ್ಲಿ ಅಳವಡಿಸುವ ಗುರಿ ಇದ್ದು, ಈ ಪೈಕಿ 27 ಕಡೆ ಈಗಾಗಲೇ ಸೆನ್ಸರ್‌ಗಳನ್ನು ಹಾಕಲಾಗಿದೆ. ಈ ತಂತ್ರಜ್ಞಾನದಲ್ಲಿ ಮಳೆ ನೀರುಗಾಲುವೆಗಳಲ್ಲಿ ನಿರ್ದಿಷ್ಟ ನೀರಿನಮಟ್ಟ ಸೂಚಿಸಲಾಗಿರುತ್ತದೆ. ಆ ಮಟ್ಟ ತಲುಪುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ಬರುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next