Advertisement
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತು ಹಾಕಿದಾಗ ಕಂಡುಬಂದ ಚಿತ್ರಣವೆಂದರೆ ಮೌನವಷ್ಟೇ. ಕಡಲ ತಡಿಯಲ್ಲಿ ಚಾಚಿಕೊಂಡಿರುವ ಈ ಕ್ಷೇತ್ರ ಜಿಲ್ಲಾ ಕೇಂದ್ರದ ಬಹುತೇಕ ಭಾಗವನ್ನು ಹೊಂದಿದೆ. ಶಿಕ್ಷಣ, ವಾಣಿಜ್ಯ, ಔದ್ಯೋಗಿಕವಾಗಿ ಇತರ ಕ್ಷೇತ್ರಗಳಿಂತ ಮುಂಚೂಣಿಯಲ್ಲಿದೆ. ವಿದ್ಯಾವಂತ ಮತದಾರರು ಹೆಚ್ಚಿರುವ ಇಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಂಡುಬಂದಿದ್ದ ಚುನಾವಣ ರಂಗು ಈ ಬಾರಿ ಗೋಚರಿಸುತ್ತಿಲ್ಲ.
ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಚುನಾವಣೆ ಸಪ್ಪೆ ಎಂಬುದು ಹಲವು ಮತದಾರರಿಂದ ವ್ಯಕ್ತವಾದ ಅಭಿಪ್ರಾಯ. “ಈ ಹಿಂದೆ ಬಹಿರಂಗ ಪ್ರಚಾರ ಸಭೆಗಳು ನಡೆಯುತ್ತಿದ್ದವು. ಈ ಬಾರಿ ಕಾರ್ಯಕರ್ತರು ಮನೆಗೆ ಬಂದು ಮತ ಕೇಳಿ ಹೋಗಿದ್ದಾರೆ’ ಎನ್ನುತ್ತಾರೆ ಉರ್ವಾದ ಮಹೇಶ್. ಕ್ಷೇತ್ರದ ಬೋಳೂರು, ಬಂದರು, ಬೋಳಾರ, ಮಂಗಳಾದೇವಿ, ಜೆಪ್ಪು, ಪಡೀಲ್, ಬಜಾಲ್ ಸೇರಿ ದಂತೆ ಬಹುತೇಕ ಕಡೆ ಅಭಿಮತ ಇದೇ. ಈ ಹಿಂದೆ ಮತದಾರರು ಮುಕ್ತವಾಗಿ ಮಾತನಾಡುತ್ತಿದ್ದರು. ಮತ ಯಾರಿಗೆ ಹಾಕುವುದಿದ್ದರೂ ಕೊಂಚ ಒಲವಾದರೂ ವ್ಯಕ್ತವಾಗುತ್ತಿತ್ತು. ಈ ಬಾರಿ ಅಲ್ಲೂ ತಮ್ಮ ನಿರ್ಧಾರದ ಗುಟ್ಟು ಬಿಟ್ಟುಕೊಡುತ್ತಿಲ್ಲ. ಹೆಸರು ಉಲ್ಲೇಖೀಸಬೇಡಿ ಎನ್ನುತ್ತಲೇ ಮಾತು ಆರಂಭ. ಬಂದರು ಕುದ್ರೋಳಿಯ ವ್ಯಾಪಾರಿಯೊಬ್ಬರಲ್ಲಿ ಈ ಬಾರಿ ಇಲ್ಲಿ ಟ್ರೆಂಡ್ ಹೇಗಿದೆ ಎಂದು ಕೇಳಿದರೆ, “ಎರಡೂ ಪಕ್ಷಗಳಿಗೂ ಉತ್ತಮವಾಗಿದೆ’ ಎಂಬ ಜಾಣ ಉತ್ತರ ನೀಡಿದರು. ಇನ್ನೂ ಮಾತಿಗೆಳೆದಾಗ,”ಎರಡೂ ಪಕ್ಷಗಳ ಅಭ್ಯರ್ಥಿಗಳು ಒಳ್ಳೆಯವರೇ. ಆದರೂ ಓಟು ಹಾಕುವಾಗ ಕೆಲವು ವಿಷಯಗಳನ್ನು ಗಮನಿಸಿ ಹಾಕಬೇಕಲ್ಲ?’ ಎಂದಷ್ಟೇ ಹೇಳಿದರು.
Related Articles
Advertisement
ದಕ್ಕೆಯಲ್ಲಿ ಹಮೀದರದ್ದು ಚುನಾವಣೆಗಿಂತ ಒಟ್ಟು ಆಡಳಿತ ವ್ಯವಸ್ಥೆಯ ಬಗ್ಗೆಯೇ ಅಸಮಾಧಾನ. ಅಲ್ಲೇ ಮಾತಿಗೆ ಸಿಕ್ಕ ರಮೇಶ್ ಎಂಬವರು, “ಸಮಸ್ಯೆ ಬಹಳಷ್ಟಿವೆ. ಓಟು ಬಂದಾಗ ಎಲ್ಲರೂ ನಮ್ಮ ಬಳಿಗೆ ಬರುತ್ತಾರೆ. ಬಳಿಕ ಎಲ್ಲಿರುತ್ತಾರೋ ಗೊತ್ತಿರದು. ಆದರೆ ಓಟು ಹಾಕದೆ ಇರಲಾಗದು. ಸ್ವಲ್ಪ ಯೋಚಿಸಿ ಹಾಕಬೇಕಷ್ಟೇ’ ಎಂದರು.ಮೀನು ಮಾರಾಟ ಮಹಿಳೆಯೊಬ್ಬರು, “ಎಂಕ್ಲೆ ಇಲ್ಲಗ್ ಏರ್‌ಲಾ ಓಟ್ ಕೇನರೆ ಬಯಿಜೆರ್. ಓಟು ಉಂಡುಂದ್ ಗೊತ್ತೇ ಆಪುಜಿ’ (ನಮ್ಮ ಮನೆಗೆ ಯಾರೂ ಬಂದಿಲ್ಲ. ಚುನಾವಣೆ ಇದೆಯೆಂದು ಗೊತ್ತಾಗೋದೇ ಇಲ್ಲ) ಎಂದರು ನಸುನಗುತ್ತ. ಈ ಬಾರಿ ನಿಮ್ಮ ಮತ ಯಾರಿಗೆ ಎಂದು ಪ್ರಶ್ನಿಸಿದರೆ, ಜಾಗೃತ ಮತದಾರರಂತೆ, “ಅವು ಇತ್ತೆ ಪನಿಯರೆ ಆಪುಜಿ. ಎಲ್ಲಂಜಿ ಅವುಲೆ ನಿರ್ಧಾರ’ (ಅದು ಈಗ ಹೇಳಲು ಆಗುವುದಿಲ್ಲ. ನಾಡಿದ್ದು ಅಲ್ಲೇ ನಿರ್ಧಾರ) ಎನ್ನುತ್ತಾ ವ್ಯಾಪಾರದತ್ತ ಗಮನಹರಿಸಿದರು. ಬಜಾಲ್‌ನಲ್ಲಿ ಭೇಟಿಯಾದ ಹಿರಿಯ ನಾಗರಿಕ ರೊಬ್ಬರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರ ಬಗ್ಗೆಯೂ ಅಸಮಾಧಾನ. ಆದರೂ, “ಪ್ರತಿ ಚುನಾವಣೆಯಲ್ಲೂ ಓಟು ಹಾಕುತ್ತಾ ಬಂದಿದ್ದೇನೆ. ಈ ಬಾರಿಯೂ ಹಾಕುತ್ತೇನೆ’ ಎನ್ನಲು ಮರೆಯಲಿಲ್ಲ. ಪಡೀಲ್‌ನಲ್ಲಿ ವರ್ಕ್‌ಶಾಪ್ ಒಂದರ ಉದ್ಯೋಗಿ, “ನನ್ನ ಹೆಸರು ಹಾಕಬೇಡಿ. ಈ ಬಾರಿಯ ಚುನಾವಣೆ ಹಿಂದಿನಂತೆ ಅಲ್ಲ. ಯೋಚನೆ ಮಾಡಿ ಓಟು ಹಾಕಬೇಕು’ ಎಂದಷ್ಟೇ ಹೇಳಿದರು ಜಾಣನಂತೆ. ಸ್ಥಳೀಯ ಸಮಸ್ಯೆಗಳ ಪ್ರಸ್ತಾವ
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾವಿಸುತ್ತಿದ್ದಾರೆ. ಮುಖ್ಯವಾಗಿ ಪಂಪ್‌ವೆಲ್ ಸರ್ಕಲ್, ತೊಕ್ಕೊಟ್ಟು ಫ್ಲೆ$çಓವರ್, ನೀರು, ಒಳಚರಂಡಿ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಾರೆ. ಕಳೆದ ಮಳೆಗಾಲದಲ್ಲಿ ನಗರ ಎದುರಿಸಿದ ಕೃತಕ ನೆರೆ ನೆನಪಿನಲ್ಲಿದೆ. ಸ್ಥಳೀಯ ಸಮಸ್ಯೆ ಈ ಚುನಾವಣೆಯಲ್ಲಿ ನೋಡಲಾಗದು. ರಾಷ್ಟ್ರಹಿತ ಮುಖ್ಯ ಎಂಬ ಅಭಿಮತ ಕೆಲವರದು; ಇನ್ನು ಕೆಲವರು, ಈ ಸಲ ಪರಿವರ್ತನೆ ಬೇಕು ಎಂದಿದ್ದಾರೆ. ಈ ವಾತಾವರಣ ಸದಾ ಇರಲಿ!
ಕ್ಷೇತ್ರ ಚುನಾವಣ ಫ್ಲೆಕ್ಸ್‌ಗಳಿಂದ ಮುಕ್ತ ವಾಗಿದೆ. ಪಕ್ಷಗಳು, ಅಭ್ಯರ್ಥಿಗಳು ಫ್ಲೆಕ್ಸ್, ಧ್ವಜ, ಬ್ಯಾನರ್ ಹಾಕುವ ಗೋಜಿಗೆ ಹೋಗಿಲ್ಲ. ಇದಕ್ಕೆ ಅನುಮತಿ ಪಡೆಯುವ ಕಿರಿಕಿರಿ ಒಂದೆಡೆಯಾದರೆ ಇದರ ಖರ್ಚು ಅಭ್ಯರ್ಥಿ ಲೆಕ್ಕಕ್ಕೆ ಜಮೆಯಾಗುವುದು ಇನ್ನೊಂದು ಸಮಸ್ಯೆ. ಈ ಹಿನ್ನೆಲೆಯಲ್ಲಿ ನಗರ ಫ್ಲೆಕ್ಸ್, ಧ್ವಜಗಳು ಗೋಚರಿಸುತ್ತಿಲ್ಲ. ಇದೇ ರೀತಿಯ ವಾತಾವರಣ ನಗರದಲ್ಲಿ ಎಂದೆಂದೂ ಇರಲಿ ಎಂದು ನಾಗರಿಕರೊಬ್ಬರು ಹಾರೈಸುತ್ತಿರುವುದು ಕೇಳಿಬಂತು. ಚಿತ್ರ: ಸತೀಶ್ ಇರಾ