Advertisement
ಶಾಸಕ ಸಂಜೀವ ಮಠಂದೂರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಈ ರಸ್ತೆಗೆ 80 ಲಕ್ಷ ರೂ. ಅನುದಾನ ಇರಿಸಿದ್ದರು. ಟೆಂಡರ್‌ಗೂ ಮುಂಚಿತವಾಗಿ ರಸ್ತೆಯ ಡಾಮರು ಅಗೆದು, ದೊಡ್ಡ ಹೊಂಡ ಮುಚ್ಚುವ ಕಾರ್ಯ ನಡೆದಿದೆ. ಇದರಿಂದ ದ್ವಿಚಕ್ರ ವಾಹನ ಹಾಗೂ ಆಟೋ ಚಾಲಕರು ಸಂಚರಿಸಲು ಹರಸಾಹಸ ಮಾಡುವಂತಾಗಿದೆ.
Related Articles
Advertisement
ರಸ್ತೆ ಅಭಿವೃದ್ಧಿಗೆ ಹೋರಾಟ
ಈ ರಸ್ತೆ ಅಭಿವೃದ್ಧಿಪಡಿಸುವಂತೆ ಬಡಗನ್ನೂರು ಹಿತರಕ್ಷಣ ಸಮಿತಿ ವತಿಯಿಂದ ಒಂದು ದಿನ ರಸ್ತೆ ತಡೆ ಮಾಡಿ ಶಾಂತಿಯುತ ಪ್ರತಿಭಟನೆ, ಆ ಬಳಿಕ ಒಂದು ವಾರ ಆಹೋರಾತ್ರಿ ಸತ್ಯಾಗ್ರಹ, ಕೌಡಿಚ್ಚಾರು ಬಳಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ 5 ನಿಮಿಷ ಕಾಲ ರಸ್ತೆ ತಡೆ, ಶಾಸಕರ ಕಚೇರಿ, ಎ.ಸಿ. ಕಚೇರಿ ಎದುರು ಪ್ರತಿಭಟನೆ, ಉಸ್ತುವಾರಿ ಸಚಿವ, ಲೋಕಸಭಾ ಸದಸ್ಯರ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಎಲ್ಲದರ ಫಲವಾಗಿ ಮುಡಿಪಿನಡ್ಕ- ಸುಳ್ಯಪದವು ಸುಮಾರು 7 ಕಿ.ಮೀ. ರಸ್ತೆಯಲ್ಲಿ ಸುಮಾರು 5.5 ಕಿ.ಮೀ. ಅಭಿವೃದ್ಧಿಗೊಂಡಿದೆ. ಉಳಿದ ಸುಮಾರು 1.5 ಕಿ.ಮೀ. ಅಭಿವೃದ್ಧಿ ಮೀನ-ಮೇಷ ಎಣಿಸುತ್ತಿದೆ.
ಸರಕಾರಿ ಬಸ್ ಸಂಚಾರ
ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ವರೆಗೆ 10 ಬಾರಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ, 8 ಬಾರಿ ಖಾಸಗಿ ಬಸ್ ಸಂಚಾರ, ಇದರ ನಡುವೆ ಮೂರು ಖಾಸಗಿ ಅಂಗ್ಲ ಮಾಧ್ಯಮ ಸ್ಕೂಲ್ ಬಸ್‌ಗಳು, ಇತರ ವಾಹನಗಳು ಎಡೆಬಿಡದೆ ಸಂಚಾರ ಮಾಡುತ್ತಿವೆ.
ರಸ್ತೆ ಕಾಮಗಾರಿಗೂ ಮುನ್ನ ದ್ವಿಚಕ್ರ ವಾಹನ ಸವಾರರಿಗೆ ಅಂಥ ಸಮಸ್ಯೆ ಇರಲಿಲ್ಲ. ಘನ ವಾಹನ ಸಂಚಾರಕ್ಕೆ ಮಾತ್ರ ತೊಂದರೆಯಿತ್ತು. ಆದರೆ ರಸ್ತೆ ಡಾಮರು ಅಗೆದ ಸ್ಥಿತಿ ಅದಲುಬದಲಾಗಿದೆ. ಜಲ್ಲಿ ಕಲ್ಲುಗಳು ರಸ್ತೆಯ ಮಧ್ಯ ಭಾಗದಲ್ಲಿ ರಾಶಿ ಬಿದ್ದು ದ್ವಿಚಕ್ರ ವಾಹನ ಹಾಗೂ ಆಟೋ ಚಾಲಕರು ಕಷ್ಟ ಪಡುತ್ತಿದ್ದಾರೆ. ಘನ ವಾಹನ ಚಲಿಸುವ ಸಂದರ್ಭ ದೊಡ್ಡ ಕಲ್ಲುಗಳು ರಭಸದಿಂದ ಸಿಡಿಯುತ್ತಿದ್ದು, ಪಾದಚಾರಿಗಳಿಗೂ ಅಪಾಯವಿದೆ.
– ದಿನೇಶ್ ಪೇರಾಲು