Advertisement

ದೇವರೇ ಅಡ್ಡ ಬಂದರೂ ರಾಯಣ್ಣ ಬ್ರಿಗೇಡ್‌ ಬಿಡಲ್ಲ: ಈಶ್ವರಪ್ಪ ಶಪಥ

03:45 AM Jan 01, 2017 | |

ಮೈಸೂರು: ಆ ದೇವರೇ ಅಡ್ಡ ಬಂದರೂ ಬ್ರಿಗೇಡ್‌ ಕೈಬಿಡುವುದಿಲ್ಲ. ಪಕ್ಷದ ಹಿರಿಯರ ಸಮ್ಮುಖದಲ್ಲಿಯೇ ಇದನ್ನು ಸ್ಪಷ್ಟಪಡಿಸಿದ್ದೇನೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಜ.26ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಬೃಹತ್‌ ಸಮಾವೇಶದಲ್ಲಿ ಕನಿಷ್ಠ 3 ಲಕ್ಷ ಜನರನ್ನು ಸೇರಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ನಡೆದ ಮೈಸೂರು-ಚಾಮರಾಜನಗರ ಜಿಲ್ಲೆಯ ಬ್ರಿಗೇಡ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು, ಹಿಂದುಳಿದವರು ಮತ್ತು ದಲಿತರಿಗೆ ನ್ಯಾಯ ದೊರಕಿಸುವುದು ಬ್ರಿಗೇಡ್‌ನ‌ ಮೂಲ ಉದ್ದೇಶ. ಬ್ರಿಗೇಡ್‌ನಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಹೀಗಾಗಿ, ಆ ದೇವರೇ ಅಡ್ಡ ಬಂದರೂ ಬ್ರಿಗೇಡ್‌ ಕೈಬಿಡುವುದಿಲ್ಲ. ಪಕ್ಷದ ಹಿರಿಯರ ಸಮ್ಮುಖದಲ್ಲಿಯೇ ಇದನ್ನು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.

ಬ್ರಿಗೇಡ್‌ ಬಗ್ಗೆ ಯಡಿಯೂರಪ್ಪಗೆ ಇನ್ನೂ ಸ್ವಲ್ಪ ಅಸಮಾಧಾನವಿದೆ. ಅದನ್ನು ಬಗೆಹರಿಸಲಾಗುವುದು. ತಮ್ಮಿಬ್ಬರ ನಡುವಿನ ಜಗಳ ಗಂಡ-ಹೆಂಡಿರ ನಡುವಿನ ಜಗಳವಿದ್ದಂತೆ. ಹೆಚ್ಚು ದಿನ ಮುಂದುವರಿಯಲ್ಲ ಎಂದರು. ಬರ ಅಧ್ಯಯನ ತಂಡದಿಂದ ತಮ್ಮನ್ನು ಕೈಬಿಟ್ಟಿರುವ ವಿಷಯವನ್ನು ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇನೆ. ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಜ.26ರಂದು ಕೂಡಲಸಂಗಮದಲ್ಲಿ ಬೃಹತ್‌ ಬ್ರಿಗೇಡ್‌ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಕನಿಷ್ಠ 3 ಲಕ್ಷ ಜನರನ್ನು ಸೇರಿಸಲಾಗುವುದು. ನಂತರ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಕನಿಷ್ಠ 2 ಸಾವಿರ ಜನರನ್ನು ಸೇರಿಸಿ ಸಮಾವೇಶ ನಡೆಸಲಾಗುವುದು ಎಂದರು. ಶ್ರೀಕೃಷ್ಣನ ಹುಟ್ಟಿನಿಂದ ಕಂಸನ ವಧೆ ಆಯಿತು. ಅದೇ ರೀತಿ ಬ್ರಿಗೇಡ್‌ನಿಂದ ಇನ್ನು ತಮಗೆ ಉಳಿಗಾಲವಿಲ್ಲ ಎಂಬುದನ್ನು ತಿಳಿದು 70 ವರ್ಷಗಳಿಂದ ಆಡಳಿತ ನಡೆಸಿದವರು ಗಡಗಡ ನಡುಗುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ್ನು ಕುಟುಟಕಿದರು.

Advertisement

Udayavani is now on Telegram. Click here to join our channel and stay updated with the latest news.

Next