ಇಷ್ಟು ಚೆಂದದ ತಾಣ ಇಲ್ಲೇ ಇತ್ತಲ್ಲ ? ನೋಡದೆ ಹೋದೆನಲ್ಲ ಅಂತ ಅನ್ನಿಸೀತು ಆ ತಾಣ ತಲುಪಿದಾಗ. ಅದುವೇ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಕೇವಲ 28 ಕಿ.ಮೀ. ದೂರದಲ್ಲಿರುವ ತೊಟ್ಟಿಕಲ್ಲು ಜಲಪಾತ.
ರಾಷ್ಟ್ರೀಯ ಹೆದ್ದಾರಿ 209 ಆದ ಬೆಂಗಳೂರು- ಕನಕಪುರ ರಸ್ತೆ ಹಿಡಿದು 23 ಕಿ.ಮೀ. ದೂರದಲ್ಲಿರುವ ಕಗ್ಗಲಿಪುರ ತಲಪಲು ರಾಜ್ಯ ಸಾರಿಗೆ/ ಸಿಟಿ ಬಸ್ ಸೌಕರ್ಯಕ್ಕೆ ಕೊರತೆ ಇಲ್ಲ. ಅಲ್ಲಿ ಎಡಕ್ಕೆ ಹರಿಯುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಗುಳಕಮಲೆ ಗ್ರಾಮ. ತುಸು ಮುಂದೆ ಕ್ಯಾಡ್ ಬಾಮ್ ಆಸ್ಪತ್ರೆ ಬಳಿ ಎಡಕ್ಕೆ ಸಾಗುತ್ತಲೇ ಜಲ್ಲಿ ರಸ್ತೆಯೊಂದು ನಿಮ್ಮ ಗಮನ ಸೆಳೆಯುತ್ತದೆ. ಇಲ್ಲಿಂದ ಮುಂದಕ್ಕೆ ನೀವು ಎರಡು ಕಿ.ಮೀ. ಸಹಿಸಿಕೊಂಡರಾಯಿತು. ನಿಮ್ಮನ್ನು ಜಲಪಾತಕ್ಕೆ ಮುಟ್ಟಿಸುವ ಹೊಣೆ ನನ್ನದು ಎಂದಿರುತ್ತದೆ ಅದು. ಬೈಕ್‌ಗೆ ಸಲೀಸು. ಆದರೆ ನಡಿಗೆಯೆ ಆಪ್ಯಾಯಮಾನ. ಕಾರು, ವ್ಯಾನ್‌ಗೆ ಸುತ್ತು ದಾರಿಯೂ ಇದೆಯೆನ್ನಿ.
Advertisement
ಕಡಿದಾದ ಬಂಡೆಗಳುಜಲಧಾರೆ ವೀಕ್ಷಿಸಲು ಕಡಿದಾದ ಬಂಡೆಗಳನ್ನೇರಬೇಕು. ಮೆಟ್ಟಿಲುಗಳಿಲ್ಲ. ವೃದ್ಧರು ಬಹುತೇಕ ಇನ್ನು ಸಾಕೆಂದು ಬಂದ ಹಾದಿಯತ್ತ ದಿಟ್ಟಿಸುವುದಿದೆ. ನೀವು ಯೋಗಪಟುವಾದರೆ ಆರೋಹಣ ಸರಾಗ. ಅಂದಹಾಗೆ, ಜಲಪಾತಕ್ಕೆ ಮಳೆಗಾಲದಲ್ಲಷ್ಟೇ ಪೂರ್ಣ ಕಳೆ.
ಜಲಧಾರೆಯ ಮೂಲ ಬನ್ನೇರುಘಟ್ಟದ ಸುವರ್ಣಮುಖೀ ನದಿ. ವರ್ಷದ ಉಳಿದ ಅವಧಿಯಲ್ಲಿ ಕೇವಲ ತೊಟ್ಟಿಕ್ಕುವ ಕಲ್ಲಿನಂತೆ ಕಾಣುತ್ತದೆ. ನಿಜಕ್ಕೂ ಅಲ್ಲಿ ಜಲಪಾತವುಂಟೇ ಅನ್ನಿಸುತ್ತದೆ. ಚಾರಣವನ್ನು ಬೇಗ ಮುಗಿಸಿ ಹೊರಟರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಬಹುದು.
Related Articles
Advertisement
ಮುನೇಶ್ವರ ಸ್ವಾಮಿಯೂ ನೆಲೆಯಾಗಿದ್ದಾನೆಪಕ್ಕದಲ್ಲಿ ಮುನೇಶ್ವರ ಸ್ವಾಮಿ ದೇವಾಲಯವಿದೆ. ಹಸುರು ಪರಿಸರದ ಮಧ್ಯೆ ಇರುವ ಈ ದೇವಾಲಯ ಅತ್ಯಂತ ಪುರಾತನ ದೇಗುಲವೂ ಹೌದು. ಈ ಜಲಪಾತ ವೀಕ್ಷಣೆಗೆ ಬರುವ ಹೆಚ್ಚಿನ ಮಂದಿ ಇಲ್ಲಿ ದೇವರ ದರ್ಶನ ಪಡೆದೇ ಮನೆಗೆ ಮರಳುತ್ತಾರೆ. ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸಕ್ಕೆ ತೊಟ್ಟಿಕಲ್ಲು ಜಲಪಾತ ಸೂಕ್ತ. ಅಲ್ಲಿ ಯಾವುದೇ ಫಲಾಹಾರ ಮಂದಿರವಾಗಲಿ, ಖಾನಾವಳಿಯಾಗಲಿ ಇಲ್ಲ. ಕುಡಿಯುವ ನೀರು ಸಮೇತ ಅಗತ್ಯ ಪ್ರಮಾಣದಷ್ಟು ಬುತ್ತಿ ಒಯ್ದರೆ ಸರಿ. ಭದ್ರತೆಯ ಕೊರತೆಯೂ ಇದೆ ಅನ್ನೋ ಎಚ್ಚರಿಕೆ ಚಾರಣ ಹೋಗುವವರಿಗೆ ಇರಲಿ. ಜಲಪಾತಕ್ಕೂ ಮಿಗಿಲಾಗಿ ಅದನ್ನು ತಲುಪಿಸುವ ಹಾದಿ ಸೊಗಸು. ನೀರವತೆ. ಇಕ್ಕೆಲದಲ್ಲೂ ಕಣ್ಣಿಗೆ ತಂಪೆರೆಯುವ ಹೊಲ, ಗದ್ದೆ, ಗಿಡಮರಗಳು. ಅಲ್ಲಲ್ಲಿ ಕೆರೆ, ಕುಂಟೆ. ದೂರದಲ್ಲಿ ಹಸುರು ಹೊದ್ದ ಗಿರಿಸಾಲು. ಗುಡಿಸಲು, ಜಾನುವಾರು ….. ಒಟ್ಟಾರೆ ಸುತ್ತಮುತ್ತಲೂ ಅಪ್ಪಟ ದೇಸಿ ವಾತಾವರಣ. ಈ ಹಿತಕರ ಪರಿಸರ ಕಂಡಾಗಲೇ ನಮ್ಮ ಯಾತ್ರೆ ಫಲಪ್ರದ ಎಂಬ ಸಾರ್ಥಕ ಭಾವ ಜತೆಯಾಗುತ್ತದೆ. ಬನ್ನೇರುಘಟ್ಟ ಸೇರಿ ಅಲ್ಲಿನ ಪೊಲೀಸ್ ಠಾಣೆ ಎದುರಿನ ಕಿರು ರಸ್ತೆಯಲ್ಲಿ 15 ಕಿ.ಮೀ. ಪ್ರಯಾಣಿಸಿ. ಅಲ್ಲಿಂದ 15 ನಿಮಿಷಗಳ ಕಾಲ ನಡೆದರೆ ಜಲಪಾತ ಸಿಗುತ್ತದೆ. ಚಾರಣಕ್ಕೆ ಈ ಹಾದಿ ಚೇತೋಹಾರಿ. ರೂಟ್‌ಮ್ಯಾಪ್
. ಬೆಂಗಳೂರು ಮೆಜೆಸ್ಟಿಕ್ ನಿಂದ 28 ಕಿ.ಮೀ. ದೂರದಲ್ಲಿದೆ ತೊಟ್ಟಿಕಲ್ಲು ಜಲಪಾತ. .ಬಸ್ ಸೌಕರ್ಯವಿದೆ. ಬೈಕ್‌ನಲ್ಲಿ ಆರಾಮವಾಗಿ ಜಲಪಾತದವರೆಗೂ ತೆರಳಬಹುದು. .ಹತ್ತಿರದಲ್ಲೇ ಇದೆ ಮುನೇಶ್ವರ ಸ್ವಾಮಿ ದೇವಸ್ಥಾನ. .ಊಟ, ವಸತಿ ವ್ಯವಸ್ಥೆಯಿಲ್ಲ. ಹೀಗಾಗಿ ಇದಕ್ಕೆ ಸಿದ್ಧತೆ ಮಾಡಿಕೊಂಡೇ ತೆರಳಬೇಕು. ಬಿಂಡಿಗನವಿಲೆ ಭಗವಾನ್