Advertisement

ವರುಣಾಗೆ ತೋಟದಪ್ಪ ಬಸವರಾಜು ಬಿಜೆಪಿ ಅಭ್ಯರ್ಥಿ

12:42 PM Apr 25, 2018 | Team Udayavani |

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೋಟದಪ್ಪಬಸವರಾಜು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಪುತ್ರ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಬಿಂಬಿಸಲಾಗಿತ್ತಾದರೂ ಅಂತಿಮವಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಮಣೆ ಹಾಕಲಾಗಿದೆ.

ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಯಾವುದೇ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿದ್ದರೂ ಮೂರು ದಿನಗಳ ಹಿಂದೆಯೇ ಬಿಜೆಪಿ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದ ತೋಟದಪ್ಪ ಬಸವರಾಜು ಮಂಗಳವಾರ ಚುನಾವಣಾಧಿಕಾರಿಗೆ ಪಕ್ಷದ ಬಿ-ಫಾರಂ ಸಲ್ಲಿಸುವ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಇದರೊಂದಿಗೆ ವರುಣಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಸೋಮವಾರದಿಂದ ನಡೆದ ಹೈಡ್ರಾಮಾಕ್ಕೆ ತೆರೆಬಿದ್ದಿದೆ.

ಬೆಂಬಲಿಗರ ಆಕ್ರೋಶ: ಬಿ.ವೈ.ವಿಜಯೇಂದ್ರ ಸೋಮವಾರ ನಂಜನಗೂಡಿನಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರಾದರೂ ಸ್ವತಃ ಯಡಿಯೂರಪ್ಪಅವರೇ ವಿಜಯೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದರಿಂದ ಕಾರ್ಯಕರ್ತರು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ ಅಲ್ಲಿಗೇ ಮುಗಿಯಲಿಲ್ಲ. ಮೈಸೂರಿಗೂ ಬಂದ ವರುಣಾ ಕ್ಷೇತ್ರದ ಕಾರ್ಯಕರ್ತರು, ಯಡಿಯೂರಪ್ಪವಾಸ್ತವ್ಯ ಹೂಡಿದ್ದ ಖಾಸಗಿ ಹೋಟೆಲ್‌ ಎದುರು ಜಮಾಯಿಸಿ ವಿಜಯೇಂದ್ರರನ್ನೇ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದರಲ್ಲದೆ, ಪಕ್ಷದ ನಾಯಕರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಹೋಟೆಲ್‌ನ ಗಾಜು, ಹೂ ಕುಂಡಗಳನ್ನು ಒಡೆದು ದಾಂಧಲೆ ನಡೆಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದರು.

Advertisement

ಸುದೀರ್ಘ‌ ಚರ್ಚೆ: ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕಮಾಂಡ್‌ ಮಧ್ಯ ಪ್ರವೇಶಿಸುವ ಮೂಲಕ ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್‌, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾಬ್ಡೇಕರ್‌, ಸೋಮವಾರ ತಡರಾತ್ರಿಯೇ ಮೈಸೂರಿಗೆ ಆಗಮಿಸಿದ್ದರು.

ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿ.ಎಸ್‌.ಯಡಿಯೂರಪ್ಪಜೊತೆಗೆ ಕೆ.ಮುರಳೀಧರರಾವ್‌, ಪ್ರಕಾಶ್‌ ಜಾಬ್ಡೇಕರ್‌ ಸುಮಾರು ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು. ಬಳಿಕ ಮೈಸೂರು-ಚಾಮರಾಜನಗರ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳೊಂದಿಗೆ ಚರ್ಚಿಸಿದರು.

ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಪರಿಸ್ಥಿತಿಯನ್ನು ವಿವರಿಸಿದರು. ಆದರೆ, ಒತ್ತಡಕ್ಕೆ ಮಣಿಯದೆ ಪಕ್ಷದ ನಿಷ್ಠಾವಂತ, ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಹೋಟೆಲ್‌ನಿಂದ ಹೊರ ಬಂದ ಮೂವರು ನಾಯಕರು, ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ. ಈ ಕ್ಷೇತ್ರಕ್ಕೆ ಸಮರ್ಥ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದು ಪ್ರಕಟಿಸಿದರು.

ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಯಡಿಯೂರಪ್ಪಪ್ರಕಟಿಸುತ್ತಿದ್ದಂತೆ, ನೆರೆದಿದ್ದ ಬೆಂಬಲಿಗರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರ ಕೂಗಾಟದ ನಡುವೆಯೂ ಮೂವರು ನಾಯಕರು ಪೊಲೀಸರ ಬೆಂಗಾವಲಿನಲ್ಲಿ ಕಾರನ್ನೇರಿ ಹೊರಟರು.

ಲಾಠಿ ಪ್ರಹಾರ: ಯಡಿಯೂರಪ್ಪಸೇರಿದಂತೆ ಬಿಜೆಪಿ ನಾಯಕರುಗಳೆಲ್ಲಾ ತೆರಳಿದರೂ ಹೋಟೆಲ್‌ ಎದುರು ಪ್ರತಿಭಟನೆಗೆ ಕುಳಿತ, ವಿಜಯೇಂದ್ರ ಬೆಂಬಲಿಗರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ವಿಜಯೇಂದ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ: ಈ ಎಲ್ಲ ಬೆಳವಣಿಗೆಗಳ ನಡುವೆ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಸಮಾಧಾನಪಡಿಸಲಾಗಿದೆ. ಜತೆಗೆ ಲಿಂಗಾಯತ ಸಮಾಜದವರ ಕೋಪವನ್ನು ತಣಿಸಲು ಬಿಜೆಪಿ ಈ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ.

ವಿಶೇಷ ಕಾರಣಗಳಿಗಾಗಿ ವರುಣ ಕ್ಷೇತ್ರದಿಂದ ವಿಜಯೇಂದ್ರ ಸ್ಪ$ರ್ಧಿಸಲ್ಲ. ಆದರೂ 20 ದಿನಗಳ ಕಾಲ ಇಲ್ಲೇ ಇದ್ದು, ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ  ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಇದಕ್ಕೆ ವಿಜಯೇಂದ್ರ ಸಹ ಒಪ್ಪಿ$ದ್ದಾರೆ. ನಮ್ಮಲ್ಲಿ ಯಾವ ಗೊಂದಲ, ಅಸಮಾಧಾನವೂ ಇಲ್ಲ. ಕೇಂದ್ರದ ನಾಯಕರು ಈ ನಿರ್ಧಾರ ಮಾಡಿದ್ದಾರೆ.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿರುವುದು ವಿಜಯೇಂದ್ರ ಯುವ ನಾಯಕರಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ.
-ಪ್ರಕಾಶ್‌ ಜಾಬ್ಡೇಕರ್‌, ರಾಜ್ಯ ಚುನಾವಣಾ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next