ಲಕ್ನೋ: ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಲು ಹಿಂದೂಗಳು ಕಾರಣ ಅಲ್ಲ. 4 ಹೆಂಡತಿ, 40 ಮಕ್ಕಳನ್ನು ಹೊಂದಿರುವವರು ದೇಶದ ಜನಸಂಖ್ಯೆ ಹೆಚ್ಚಳವಾಗಲು ಕಾರಣ ಎಂದು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನೀಡಿರುವ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಸಾಕ್ಷಿ ಮಹಾರಾಜ್ ಹೇಳಿಕೆ ಬಗ್ಗೆ ಬಿಜೆಪಿ ಅಂತರ ಕಾಯ್ದುಕೊಂಡಿದೆ.
ಈ ವಿವಾದಾತ್ಮಕ ಹೇಳಿಕೆಗಾಗಿ ಸಾಕ್ಷಿ ಮಹಾರಾಜ್ ವಿರುದ್ಧ ಮೀರತ್‌ನಲ್ಲಿ ಐಪಿಸಿ ಸೆ.298 ಮತ್ತು ಇತರ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಿಸಲಾಗಿದೆ.
ಯಾವುದೇ ಜಾತಿ, ಧರ್ಮ, ಜನಾಂಗ, ಭಾಷೆಯ ಆಧಾರದ ಮೇಲೆ ಯಾವುದೇ ರಾಜಕೀಯ ಪಕ್ಷದ ನೇತಾರರಾಗಲಿ, ರಾಜಕೀಯ ಪಕ್ಷವಾಗಲಿ ಮತ ಯಾಚಿಸಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದ ಬೆನ್ನಲ್ಲೇ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುವ ಮೂಲಕ ಸಾಕ್ಷಿ ಮಹಾರಾಜ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಉತ್ತರಪ್ರದೇಶದ ಮೀರತ್ ನಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗಲು ಹಿಂದುಗಳು ಕಾರಣ ಅಲ್ಲ. ಯಾರು 4 ಪತ್ನಿ ಹಾಗೂ 40 ಮಕ್ಕಳನ್ನು ಹೆರುವ ಪದ್ಧತಿಯನ್ನು ಬೆಂಬಲಿಸುತ್ತಿದ್ದಾರೋ ಅವರು ಕಾರಣ ಎಂದು ಮುಸ್ಲಿಮ್ ಸಮುದಾಯದ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಹಾಗಾಗಿ ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.