Advertisement

ಅಭಿವೃದ್ಧಿಗೆ ಶ್ರಮಿಸಿದವರಿಗೆ ಸ್ಥಾನಮಾನ ಸಂದಿಲ್ಲ

02:16 PM Jul 31, 2019 | Suhan S |

ಮದ್ದೂರು: ಚರಿತ್ರೆ ಎನ್ನುವುದು ಅಕ್ಷರಗಳ ಗುಲಾಮ. ನಾಡಿನ ಅಭಿವೃದ್ಧಿಗೆ ಶ್ರಮಿಸಿದವರಿಗೆ ಸಿಗಬೇಕಾದ ಗೌರವ, ಸ್ಥಾನ-ಮಾನಗಳು ಸಂದಿಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಜಿಲ್ಲೆಯ ಅನ್ನದಾತ ಯಾರು ಎಂದು ಅವಲೋಕಿಸಿದರೆ ನಮಗೆ ಥಟ್ಟನೆ ನೆನಪಾಗುವವರು ಸರ್‌ ಎಂ.ವಿಶ್ವೇಶ್ವರಯ್ಯ. ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣಕ್ಕೆ ಅರಮನೆಯ ಚಿನ್ನವನ್ನು ಒತ್ತೆ ಇಟ್ಟು 2 ಕೋಟಿ ಹಣ ಕ್ರೋಢೀಕರಿಸಿಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್‌ ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಕಂಡುಬರುವುದೇ ಇಲ್ಲ. ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಕಾಣಬಹುದು ಎಂದು ಹೇಳಿದರು.

ನಾಲ್ವಡಿ ಜಿಲ್ಲೆಯ ಅನ್ನದಾತ: ವಿಶ್ವೇಶ್ವರಯ್ಯನವರ ಬಗ್ಗೆ ನಮಗೂ ಅಪಾರ ಗೌರವವಿದೆ. ಅವರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಅದೇ ಸಮಯದಲ್ಲಿ ನಾಡಿನ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರಿಗಿಂತಲೂ ಮಹತ್ವದ ಕೊಡುಗೆ ನೀಡಿದ ನಾಲ್ವಡಿಯವರನ್ನು ಇತಿಹಾಸ ಬರೆದವರು ಕಡೆಗಣಿಸಿದ್ದನ್ನಷ್ಟೇ ನಾವು ವಿರೋಧಿಸುತ್ತೇವೆ. ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯನವರ ಪ್ರತಿಮೆಗಳನ್ನು ಕಾಣುವ ರೀತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಗಳನ್ನು ಕಾಣಲು ಸಾಧ್ಯವೇ ಇಲ್ಲ. ನಾಲ್ವಡಿ ಜಿಲ್ಲೆಯ ನಿಜವಾದ ಅನ್ನದಾತ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ಕನ್ನಡ ಸಂರಕ್ಷಿಸಿ: ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಇತಿಹಾಸ ಬರೆದವರು ಇಲ್ಲಿಯವರೆಗೂ ನಮ್ಮನ್ನು ಯಾಮಾರಿಸಿಕೊಂಡೇ ಬಂದಿದ್ದಾರೆ. ಇನ್ನಾದರೂ ನಾವು ನಿಜವಾದ ಇತಿಹಾಸವನ್ನು ತಿಳಿಯುವ ಪ್ರಯತ್ನ ಮಾಡಬೇಕು. ಕನ್ನಡ ಶಾಲೆಗಳನ್ನು ಉಳಿಸುವ ಸಲುವಾಗಿ ಆಂಗ್ಲಭಾಷಾ ಮಾಧ್ಯಮವನ್ನು ಸರ್ಕಾರಿ ಶಾಲೆಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಜಾರಿಗೊಳಿಸಿದರು. ಆಂಗ್ಲಭಾಷೆಯನ್ನು ಮುಂದಿಟ್ಟುಕೊಂಡು ಕನ್ನಡವನ್ನು ಸಂರಕ್ಷಿಸಿ ಬೆಳೆಸುವುದು ಇದರ ಹಿಂದಿನ ಮೂಲ ಉದ್ದೇಶ ಎಂದು ತಿಳಿಸಿದರು.

ಶಾಸನಗಳ ಪತ್ತೆ: ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಪುಣ್ಯಕೋಟಿ ಕಾವ್ಯ ಜನ್ಮ ತಳೆದದ್ದು, ಬಾಹುಬಲಿ ಮೊದಲ ಬಾರಿಗೆ ತಲೆಎತ್ತಿ ನಿಂತಿದ್ದು ಮದ್ದೂರು ನೆಲದಲ್ಲಿ. ಆತಗೂರಿನಿಂದ ಅರೆತಿಪ್ಪೂರಿನವರೆಗೆ ಹಲವಾರು ಶಾಸನಗಳು ಬೆಳಕಿಗೆ ಬಂದಿದ್ದು ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ. ಇದು ಮದ್ದೂರಿನ ವೈಶಿಷ್ಟ್ಯ ಎಂದು ತಿಳಿಸಿದರು.

Advertisement

ವಿಶ್ವಮಟ್ಟದಲ್ಲಿ ಕನ್ನಡದ ಕಂಪು: ಕನ್ನಡದ ನೆಲದಲ್ಲಿ ಇಂಗ್ಲಿಷ್‌ ಕಲಿತು ಬೇರೆ ರಾಷ್ಟ್ರಗಳಲ್ಲಿ ಉದ್ಯೋಗ ನಡೆಸುತ್ತಿರುವವರು ಕನ್ನಡವನ್ನು ಮರೆತಿಲ್ಲ. ಕನ್ನಡ ಸಮಾವೇಶಗಳನ್ನು ನಡೆಸುವ ಮೂಲಕ ವಿಶ್ವಮಟ್ಟದಲ್ಲಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಇಂದಿನ ಮಕ್ಕಳು ಇಂಗ್ಲಿಷ್‌ ಕಲಿಯುವುದು ಅನಿವಾರ್ಯವಾಗಿದ್ದರೂ ಕನ್ನಡದ ಜೊತೆಯಲ್ಲೇ ಇಂಗ್ಲಿಷ್‌ ಕಲಿಯುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಪೂರ್ಣ ಪ್ರಮಾಣದಲ್ಲಿ ನಡೆದುಕೊಳ್ಳದಿದ್ದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದಿಲ್ಲ ಎಂದು ನುಡಿದರು.

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿ, ಸಾಹಿತ್ಯ ಪರಂಪರೆ, ಜಾನಪದ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ವಿಷಯಗಳು ಪ್ರಸ್ತಾಪವಾಗಿ ಸಾಹಿತ್ಯಾಸಕ್ತರಿಗೆ ಸ್ಫ್ಪೂರ್ತಿ ತುಂಬಿದಂತಾಗುತ್ತದೆ ಎಂದು ಪುರಸಭೆ ಸದಸ್ಯ ಪ್ರಸನ್ನಕುಮಾರ್‌ ಹೇಳಿದರು.

ಸಮ್ಮೇಳನದಲ್ಲಿ ಶಾಸಕ ತಮ್ಮಣ್ಣ ಅವರೊಂದಿಗೆ ಪುಸ್ತಕ ವೀಕ್ಷಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ತನ್ನದೇ ಆದ ಅಸ್ತಿತ್ವವಿದೆ. ಕಅ‌ನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸ ಬೇಕಾದ ಅವಶ್ಯಕತೆ ಇದೆ. ಇಂದಿನ ಯುವಜನತೆ ಗ್ರಾಮೀಣ ಸಂಸ್ಕೃತಿ, ಪರಂಪರೆ ಯನ್ನು ಬೆಳೆಸಬೇಕು. ಸಮಾಜದ ಅಭ್ಯುದಯಕ್ಕೆ ಗ್ರಾಮಗಳ ಸಮಗ್ರ ಅಭಿವೃದ್ಧಿ ತುಂಬಾ ಮುಖ್ಯ. ಅದಕ್ಕೆ ಗ್ರಾಮೀಣ ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next