Advertisement

ಕಾಸು ಬೇಕೆನ್ನುವವರು ಕಾಯಲು ಕಲಿಯಬೇಕು

09:12 AM Jul 23, 2019 | Sriram |

ಒಂದು ಕುತೂಹಲ, ಒಂದಷ್ಟು ಆಸೆ, ಸ್ವಲ್ಪ ಹೊಟ್ಟೆ ಉರಿ, ಏನಾದರೂ ಮಾಡಬೇಕು ಎಂಬ ಹಪಹಪಿ ಮನುಷ್ಯನಿಗೆ ಜೊತೆಯಾಗುವುದು, ನಮ್ಮ ನೆರೆಹೊರೆಯವರು, ಬಂಧುಗಳು ಅಥವಾ ಪ್ರತಿಸ್ವರ್ಧಿಗಳು ಒಂದಷ್ಟು ದುಡ್ಡು ಮಾಡಿಕೊಂಡರು ಎಂಬ ವಿಚಾರ ತಿಳಿದಾಗ. ಅದರಲ್ಲೂ, ಯಾರಾದರೂ ಕೆಲವೇ ತಿಂಗಳುಗಳಲ್ಲಿ ಅಥವಾ ಎರಡೇ ವರ್ಷದಲ್ಲಿ ಚೆನ್ನಾಗಿ ಹಣ ಮಾಡಿಕೊಂಡರು ಎಂದು ಗೊತ್ತಾದರೆ- “ಏನೇನೂ ತಿಳಿವಳಿಕೆ ಇಲ್ಲದ ಅಂಥವನೇ ಕಾಸು ಮಾಡಿದ ಅಂದಮೇಲೆ, ನನ್ನಿಂದ ಸಾಧ್ಯ ಆಗಲ್ವ?’ ಎಂಬ ಹಮ್ಮಿನಿಂದಲೇ ಹೊಸದೊಂದು ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ, ಅಂಥ ಪ್ರಯತ್ನದಲ್ಲಿ ಹೆಚ್ಚಿನವರು ಸೋಲು ಅನುಭವಿಸುತ್ತಾರೆ.

Advertisement

ಈ ಮಾತಿಗೆ ಉದಾಹರಣೆಯಾಗಿ ಒಂದೆರಡು ಸ್ಯಾಂಪಲ್‌ ಕೇಳಿ.
ಉಮೇಶ, ಯೋಗೇಶನಿಗೆ ದೂರದ ಸಂಬಂಧಿ. ಅವರಿಬ್ಬರೂ ವಾಸವಿದ್ದುದು ಬೇರೆ ಬೇರೆ ಊರುಗಳಲ್ಲಿ. ದೂರದ ಸಂಬಂಧ ಆದ್ದರಿಂದ ಅವರು ಪದೇ ಪದೆ ಭೇಟಿಯಾಗುತ್ತಲೂ ಇರಲಿಲ್ಲ. ಆದರೆ ಯಾವುದಾದರೂ ಮಾತಿನ ಸಂದರ್ಭದಲ್ಲಿ ಇವರ ಹೆಸರಿನ ಪ್ರಸ್ತಾಪ ಆಗುತ್ತಿತ್ತು. ಇಬ್ಬರಿಗೂ ಕೆಲಸವಿರಲಿಲ್ಲ. ಏನಾದರೂ ಬಿಸಿನೆಸ್‌ ಮಾಡಬೇಕು ಎಂದು ಇಬ್ಬರೂ ಯೋಚಿಸುತ್ತಿದ್ದರು. ಹೀಗಿದ್ದಾಗಲೇ, ಒಂದು ಜೆರಾಕ್ಸ್‌ ಅಂಗಡಿ ಓಪನ್‌ ಮಾಡಿ ಯೋಗೇಶ ಒಂದೇ ವರ್ಷದಲ್ಲಿ ಲಕ್ಷ ರುಪಾಯಿ ಲಾಭ ಮಾಡಿದನಂತೆ ಎಂಬ ಸುದ್ದಿ ಬಂಧುಗಳ ಮೂಲಕ ಉಮೇಶನನ್ನು ತಲುಪಿತು.

ಈ ಮಹರಾಯ ಹಿಂದೆ ಮುಂದೆ ಯೋಚಿಸಲೇ ಇಲ್ಲ: ಜೆರಾಕ್ಸ್‌ ಅಂಗಡಿ ತೆಗೆದರೆ ಅಲ್ಲಿ ಜೆರಾಕ್ಸ್‌ ಮಾಡಿಸಲು ಕಾಲೇಜು ವಿದ್ಯಾರ್ಥಿಗಳು ಸಾಲುಸಾಲಾಗಿ ಬರುತ್ತಾರೆ. ಹಾಗಾಗಿ, ಚೆನ್ನಾಗಿ ಸಂಪಾದನೆ ಮಾಡಬಹುದು ಎಂದು ಲೆಕ್ಕ ಹಾಕಿ, ಬ್ಯಾಂಕ್‌ ಲೋನ್‌ ಪಡೆದು ಅಂಗಡಿ ಶುರು ಮಾಡಿಯೇಬಿ. ಆದರೆ, ಅವನಿಗೆ ಅದರಿಂದ ದುಡ್ಡು ಮಾಡಲು ಸಾಧ್ಯವಾಗಲಿಲ್ಲ.

ಮೈಸೂರಿಗೆ ಸಮೀಪದಲ್ಲಿ ರಾಮಾಪುರ-ಕೆಂಪಾಪುರ ಎಂಬ ಊರುಗಳಿವೆ. ರಾಮಾಪುರದ ಸೋಮಪ್ಪ ತರಕಾರಿ ಬೆಳೆದು ವರ್ಷಕ್ಕೆ ಮೂರು ಲಕ್ಷ ಲಾಭ ಮಾಡಿದ ಎಂಬ ಸುದ್ದಿ ಪೇಪರ್‌, ಟಿ.ವಿಗಳಲ್ಲಿ ಬಂತು ಅದನ್ನು ಕಂಡು ಕೆಂಪಾಪುರದ ಭೀಮಪ್ಪನಿಗೆ ಆಸೆ ಮತ್ತು ಹೊಟ್ಟೆ ಉರಿ ಶುರುವಾಯಿತು. ತಾನೂ ಕೃಷಿ ಮಾಡಿ ಲಕ್ಷಾಧಿಪತಿ ಆಗಬೇಕೆಂದು ನಿರ್ಧರಿಸಿದ. ಐದಾರು ಕಡೆ ಸಾಲ ಮಾಡಿ, ಜಮೀನಿನಲ್ಲಿ ಕೋಸು, ಟೊಮೆಟೋ, ಬೀನ್ಸ್‌ ಬೆಳೆದ. ಬೆಳೆಯೂ ಚೆನ್ನಾಗಿಯೇ ಬಂತು. ಆದರೆ, ಭೀಮಪ್ಪನಿಗೆ ವ್ಯವಹಾರದಲ್ಲಿ ಲಾಸ್‌ ಆಯಿತು.

ಮೇಲಿನ ಎರಡೂ ಪ್ರಸಂಗಗಳಲ್ಲಿ ಉಮೇಶ್‌ ಮತ್ತು ಭೀಮಪ್ಪನ ಉದಾಹರಣೆ ಬಂತಲ್ಲ: ಅವರಂತೆಯೇ ಅವಸರದಲ್ಲಿ ಬಿಸಿನೆಸ್‌ ಮಾಡಲು ಹೋಗಿ ಲಾಸ್‌ ಮಾಡಿಕೊಂಡ ಮಂದಿ ಪ್ರತಿಯೊಂದು ಊರಲ್ಲೂ ಸಿಗುತ್ತಾರೆ. ಅವರಿಗೆ ಯಾಕೆ ಲಾಸ್‌ ಆಯಿತೆಂದರೆ, ಬಿಸಿನೆಸ್‌ ಯಾವುದೇ ಆಗಿರಲಿ: ಅದರಲ್ಲಿ ಲಾಭ ಮಾಡಬೇಕೆಂದರೆ ಒಂದು ಪೂರ್ವ ಸಿದ್ಧತೆ, ಪರಿಶ್ರಮ, ಸಣ್ಣ ಪುಟ್ಟ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಪರ್ಯಾಯ ಸಂಪಾದನೆಯ ಮಾರ್ಗವನ್ನೆಲ್ಲ ತಿಳಿದಿರಬೇಕಾಗುತ್ತದೆ.

Advertisement

ಸಾಮಾನ್ಯವಾಗಿ, ಎಲ್ಲರಿಗೂ ಗೊತ್ತಿರುವಂತೆ, ಬರೀ ಜೆರಾಕ್ಸ್‌ ಅಂಗಡಿ ಇಟ್ಟು ಕೊಂಡು ಲಕ್ಷಗಟ್ಟಲೆ ಲಾಭ ಮಾಡಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಜೆರಾಕ್ಸ್‌ ಅಂಗಡಿಯ ಮಾಲೀಕ ಮಾಡಿದ್ದೇನೆಂದರೆ, ಪುಟ್ಟ ಅಂಗಡಿಯೊಳಗೇ ನೋಟ್‌ಬುಕ್ಸ್‌ ಪೆನ್‌-ಪೆನ್ಸಿಲ್‌ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿದ್ದ ಎಲ್ಲ ವಸ್ತುಗಳ ಮಾರಾಟಕ್ಕೆ ಜಾಗ ಕಲ್ಪಿಸಿದ. ಪರಿಣಾಮ ಏನಾಯಿತೆಂದರೆ, ಜೆರಾಕ್ಸ್‌ ಮಾಡಿಸಲು ಬಂದವರು, ನೋಟ್‌ ಬುಕ್‌, ಪೆನ್‌-ಪೆನ್ಸಿಲ್‌ ಖರೀದಿಗೂ ಮುಂದಾದರು. ಜೆರಾಕ್ಸ್‌ ಮೆಷಿನ್‌ನಿಂದ ಹಾಕಿದ ಬಂಡವಾಳ ವಾಪಸ್‌ ಬಂತು ಅನ್ನುವಷ್ಟೇ ಬಿಸಿನೆಸ್‌ ಆದರೂ ಉಳಿದ ವ್ಯವಹಾರದಿಂದ ಲಾಭವಾದ ಕಾರಣ, ಯೋಗೇಶ ಇಡೀ ವರ್ಷ ದುಡಿದು ಲಕ್ಷ ರುಪಾಯಿ ಸಂಪಾದನೆ ಮಾಡಲು ಸಾಧ್ಯವಾಯಿತು. ಹೀಗೇನೂ ಮಾಡದೆ, ಜೆರಾಕ್ಸ್‌ ಮಾಡಿಯೇ ಸಂಪಾದನೆ ಮಾಡಬಹುದು ಎಂದು ಯೋಚಿಸಿದ ಉಮೇಶ ಲಾಸ್‌ ಮಾಡಿಕೊಂಡ!

ಭೀಮಪ್ಪನ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ರಾಮಪ್ಪ ಲಾಭ ಮಾಡಿಕೊಂಡ ಎಂಬುದನ್ನು ಮಾತ್ರ ಆತ ಕೇಳಿಸಿಕೊಂಡ. ಆತ ದೂರದೂರಿನ ಮಾರುಕಟ್ಟೆಗೆ ಹೋಗಿ ಅಲ್ಲಿ ತನ್ನ ಬೆಳೆಗೆ ಬೆಲೆ ಸಿಗುವಂತೆ ನೋಡಿಕೊಂಡ. ಲಾಭದ ಹಣ ಪಡೆಯಲು ಒಂದಿಡೀ ವರ್ಷ ಕಾದಿದ್ದ ಎಂಬ ಬಹುಮುಖ್ಯ ಸಂಗತಿ ಭೀಮಪ್ಪನ ಗಮನಕ್ಕೆ ಬರಲೇ ಇಲ್ಲ. ಹಳ್ಳಿಯ ಮಾರುಕಟ್ಟೆಯಲ್ಲಿ ಬೆಳೆಗೆ ಭರ್ಜರಿ ಬೆಲೆ ಸಿಗುವುದಿಲ್ಲ ಎಂಬ ಸೂಕ್ಷ್ಮ ಅವಸರದಲ್ಲಿ ಕಾಸು ಮಾಡಲು ಹೋದವನಿಗೆ ಗೊತ್ತಾಗಲಿಲ್ಲ.


Advertisement

Udayavani is now on Telegram. Click here to join our channel and stay updated with the latest news.

Next