ಕನ್ನಡದಲ್ಲಿ ಪ್ರತಿ ವಾರವೂ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ “ಅಸುರ ಸಂಹಾರ’ ಕೂಡ ಸೇರಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಪ್ರದೀಪ್ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ಇನ್ನು, ಹರಿ ಪ್ರಸಾದ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಣ ಕೂಡ ಅವರದೇ. ಇವರಿಗೂ ಇದು ಮೊದಲ ಅನುಭವ. ತಮ್ಮ ಸಿನಿಮಾ ಕುರಿತು ಹೇಳಲೆಂದೇ ತಂಡದೊಂದಿಗೆ ಪತ್ರಕರ್ತರ ಮುಂದೆ ಬಂದಿದ್ದರು ಪ್ರದೀಪ್.
ಮೊದಲು ಮಾತಿಗಿಳಿದ ನಿರ್ದೇಶಕ ಪ್ರದೀಪ್, “ಇದೊಂದು ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಕುರಿತಾದ ಕಥೆ ಹೊಂದಿದೆ. ನಿತ್ಯ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ, ಕಾನೂನು ಮಾತ್ರ ಕಠಿಣವಾಗಿಲ್ಲ. ಇಂತಹ ಪ್ರಕರಣಗಳಿಗೆ ತಕ್ಷಣವೇ ಶಿಕ್ಷೆಯಾಗುವಂತಹ ಕಾನೂನು ಜಾರಿಯಾಗಬೇಕು. ಅಂತಹ ವಿಷಯ ಚಿತ್ರದಲ್ಲಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇಲ್ಲಿ ರಕ್ತಪಾತವಿಲ್ಲ, ಅಶ್ಲೀಲತೆಯೂ ಇಲ್ಲ. ಒಂದು ಮಾಸ್ ಆಡಿಯನ್ಸ್‌ಗೆ ಬೇಕಾದ ಎಲ್ಲಾ ಅಂಶಗಳನ್ನೂ ಒಳಗೊಂಡು ಸಿನಿಮಾ ಮಾಡಿದ್ದೇವೆ. ಹೊಸಬರ ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ’ ಎಂದರು ಪ್ರದೀಪ್.
ನಾಯಕ ಕಮ್ ನಿರ್ಮಾಪಕ ಹರಿಪ್ರಸಾದ್ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ ಇದೆಯಂತೆ. ಪ್ರದೀಪ್ ಗೆಳೆಯ. ಅವರಿಗೆ ಸಿನಿಮಾ ಪ್ರೀತಿ ಇತ್ತು. ಒಳ್ಳೆಯ ಕಥೆಯೂ ಮಾಡಿಕೊಂಡಿದ್ದರು. ಕಥೆ ಈಗಿನ ವಾಸ್ತವತೆಗೆ ಹತ್ತಿರವಾಗಿದೆ. ಇಲ್ಲಿ ಭರ್ಜರಿ ಆ್ಯಕ್ಷನ್ ಕೂಡ ಇದೆ. ಅಣ್ಣ ತಂಗಿಯ ಕಥೆ ಇಲ್ಲಿ ಹೈಲೈಟ್ ಆಗಿದ್ದು, ನಾನಿಲ್ಲಿ ಫೋಟೋಗ್ರಾಫರ್ ಆಗಿ ನಟಿಸಿದ್ದೇನೆ. ಸುಮಾರು 50 ಪ್ಲಸ್ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದು ವಿವರ ಕೊಟ್ಟರು ಹರಿಪ್ರಸಾದ್.
ರವಿ ಚಿತ್ರದಲ್ಲಿ ಕಾಮಿಡಿ ಪಾತ್ರ ನಿರ್ವಹಿಸಿದ್ದಾರಂತೆ. ಅವರಿಗೆ ಇದು ಆರನೇ ಚಿತ್ರ. ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂಬ ನಂಬಿಕೆ ನನ್ನದು. ಕಥೆ ತುಂಬಾನೇ ಚೆನ್ನಾಗಿದೆ. ಈಗಿನ ಯುವಕರಿಗೆ ಅರಿವಾಗುವಂತಹ ವಿಷಯಗಳು ಇಲ್ಲಿವೆ. ಶ್ರವಣ ಬೆಳಗೊಳ, ಬೆಳಗಾವಿ, ಚೆನ್ನರಾಯಪಟ್ಟಣ ಇತರೆ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ ಎಂದರು.
ರಂಗಭೂಮಿ ಪ್ರತಿಭೆ ವಿನಯ್ ಕೂಡ ಇಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದಾರಂತೆ. ಶಿವು ಬಾಲಾಜಿ ಅವರು ಕೂಡ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಆವರಿಗೂ ಇಲ್ಲಿ ವಿಲನ್ ಪಾತ್ರವಿದ್ದು, ಹೊಸ ಬಗೆಯ ಕಥೆ ಇದ್ದರೆ, ಕನ್ನಡಿಗರು ಖಂಡಿತ ಒಪ್ಪುತ್ತಾರೆ ಎಂಬ ನಂಬಿಕೆ ನನಗಿದೆ. ಎಲ್ಲರೂ ಈ ಚಿತ್ರವನ್ನು ಪ್ರೀತಿಯಿಂದ ವೀಕ್ಷಿಸಿ, ಬೆಂಬಲಿಸಬೇಕು’ ಎಂದು ಮನವಿ ಮಾಡಿಕೊಂಡರು.
ದೀಕ್ಷಾ ಶೆಟ್ಟಿ ಅವರಿಲ್ಲಿ ಹೀರೋ ತಂಗಿ ಪಾತ್ರ ಮಾಡಿದ್ದಾರಂತೆ. ಲೋಕಿ ಚಿತ್ರಕ್ಕೆ ಸಂಗೀತ ನೀಡಿದ್ದು, ಅವರಿಗೆ ಇದು ಎಂಟನೇ ಚಿತ್ರವಂತೆ. ಒಳ್ಳೆಯ ಸಂದೇಶ ಇರುವ ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು ಅವರು. ಚಿತ್ರಕ್ಕೆ ಹರ್ಷಲ ನಾಯಕಿಯಾಗಿದ್ದು, ಮಾಲ ಪ್ರಸಾದ್ ಸಹನಿರ್ಮಾಪಕರಾಗಿದ್ದಾರೆ. ವಿನಯ್ ಸಂಕಲನವಿದೆ.