ತಾಂಬಾ: ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜಾನುವಾರು ಜಾತ್ರೆ ಜರುಗಿತು. ಕಳೆದ 5 ದಿನಗಳಿಂದ ವಿಜಯಪುರ, ಇಂಡಿ, ಸಿಂದಗಿ, ಬಸವನಬಾಗೇವಾಡಿ, ಜಮಖಂಡಿ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಮಾರಾಟ ಹಾಗೂ ಖರೀದಿಯಲ್ಲಿ ಪಾಲ್ಗೊಂಡಿದ್ದರು.
ರೈತರು ಜಾತ್ರೆಯಲ್ಲಿ ತಮ್ಮ ರಾಸುಗಳಿಗೆ ಬೇಕಾದ ಬಾರುಕೋಲು, ಮೂಗುದಾನಿ, ಗಂಟೆ, ಹಗ್ಗ, ಬಾಯಿಕಟ್ಟು ಸೇರಿದಂತೆ ನಾನಾ ಸಾಮಗ್ರಿಗಳ ಖರೀದಿಯಲ್ಲಿ ತೋಡಗಿದ್ದು ವಿಶೇಷವಾಗಿತ್ತು. 30 ಸಾವಿರದಿಂದ ಒಂದು ಲಕ್ಷಕ್ಕೂ ಮಿಗಿಲು ಬೆಲೆ ಬಾಳುವ ಜಾನುವಾರುಗಳು ರೈತನ ಮನ ತಣಿಸಿದವು. ಅಬ್ಟಾ ಎಂತಹ ಎತ್ತು ಅಲ್ಲಿ ನೋಡು, ಎಂತಹ ಆಕಳು. ಅಪ್ಪಾ ಇದೂ ಇರ್ಲಿ, ರೊಕ್ಕ ಎಷ್ಟರೆ ಹೋಗಲಿ, ಈ ಎತ್ತ ಬಾಳ್ ಛಲೋ ಅದ ನಮ್ಮ ಕೆಲಸಕ್ಕೆ ಸರಳ ಆಗತೈತಿ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ವರ್ಷ ಜಾನುವಾರು ಮಾರುವವರ ಸಂಖ್ಯೆ ಹೆಚ್ಚಿದ್ದರೆ ಕೊಳ್ಳುವವರ ಸಂಖ್ಯೆ ವಿರಳವಾಗಿತ್ತು.
ವ್ಯಾಪಾರ ಮಂದ: ಜಾತ್ರೆಯಲ್ಲಿ ದನ ಕರು ಹಾಗೂ ಆಕಳುಗಳಿಗೆ ಅಗತ್ಯವಾದ ಹಗ್ಗ ಕಣ್ಣಿ ಹಾಗೂ ನೂಲಿನ ವ್ಯಾಪಾರ ಮಂದಗತಿಯಾಗಿತ್ತು. ದನಗಳ ದಾಂಡು 25 ರೂ. ಜೋಡಿಯಿಂದ 40 ರೂ.ವರೆಗೆ, ಮಗಡ 30ರೂ.ದಿಂದ 40 ರೂ.ಗೆ ಜೋಡಿ, ತೊಗಲಿನ ಮಗಡ 80 ರೂ.ದಿಂದ 480 ರೂ. ಕೆಜಿಯಿಂದ 520 ರೂ.ವರೆಗೆ, ಗೆಜ್ಜೆ ಗುಮರಿ ಸರ 700 ರೂ.ವರೆಗೆ, ಹಣಿಕಟ್ಟು 30 ರೂ. ಜೋಡಿ ಹಿಡಿದು 50 ರೂ.ವರೆಗೆ, ಹಗ್ಗ 80 ರೂ. ಕೆಜಿಯಿಂದ 100 ರೂ. ವರೆಗೆ ಮಾರಾಟವಾದವು.
ಒಟ್ಟಿನಲ್ಲಿ ಹೋದ ವರ್ಷದ ಧಾರಣಿಗೆ ಹೋಲಿಸಿ ನೋಡಿದರೆ ಕೇವಲ 2-3 ರೂ. ಹೆಚ್ಚಿಗೆ ಕಂಡು ಬಂತು. ಆದರೂ ಹಗ್ಗದ ಅಂಗಡಿಗಳಲ್ಲಿಯೂ ಸಹ ವ್ಯಾಪಾರವು ಕುಂದಿದೆ ಎಂದು ಹಗ್ಗದ ವ್ಯಾಪಾರಿ ಸಂಗಯ್ಯ ಹಿರೇಮಠ ಪತ್ರಿಕೆಗೆ ತಿಳಿಸಿದರು.
ಮಾರಾಟ ಕಡಿಮೆ: ಕಬ್ಬಿಣದ ಎತ್ತಿನ ಗಾಡಿಗಳ ಬೆಲೆ 18 ಸಾವಿರ ರೂ.ದಿಂದ 20 ಸಾವಿರ ರೂ.ವರೆಗೆ ಎಂದು ಕೇಳಿ ರೈತರು ಖರೀದಿಸದೇ ಹಾಗೆ ತೆರಳಿದ್ದು ಕಂಡು ಬಂದಿದೆ. ಗಾಡಿ ಮಾರಾಟಕ್ಕೆ ಆಗಮಿಸಿದ ಮೌನೇಶ್ವರ ಕಂಪನಿಯವರು ಹಾಗೂ ಅಥಣಿ ತಾಲೂಕಿನ ಸಿದ್ದೇವಾಡಿ ಗ್ರಾಮದ ವಿಶ್ವಕರ್ಮ ಸ್ಟೀಲ್ ವರ್ಕ್ ಮಾಲೀಕರು ಮಾತನಾಡಿ, ರೈತರು ಬೆಲೆ ಕೇಳಿ ಹಾಗೆ ಹೋಗುತ್ತಿದ್ದು ಖರೀದಿಗೆ ಮುಂದಾಗಿಲ್ಲ ಎಂದರು.
ಲಕ್ಷ್ಮಣ ಹಿರೇಕುರುಬರ