ದೇವದುರ್ಗ: ದೇವಲೋಕ, ಮರ್ತ್ಯಲೋಕ ಬೇರಿಲ್ಲ. ಮೇಲೆ ದೇವರಿಲ್ಲ, ದೇವರಿರುವುದು ನಮ್ಮ ನಡೆ ನುಡಿ ಸಿದ್ಧಾಂತದಲ್ಲಿ ಹಾಗೂ ಆತ್ಮದಲ್ಲಿ ಎಂದು ತೋರಿಸಿಕೊಟ್ಟವರು ಬಸವಾದಿ ಶರಣರು ಎಂದು ಅರಿವಿನಮನೆಯ ಶ್ರೀ ಗುರು ಬಸವದೇವರು ಹೇಳಿದರು.
ತಾಲೂಕು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕ ಸುತ್ತೂರು ಡಾ| ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನ ಅಂಗವಾಗಿ ಶ್ರೀ ಬಸವೇಶ್ವರ
ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ವಚನ ದಿನ ಹಾಗೂ ಲಿಂ| ಸೂಗಮ್ಮ ಸಿದ್ರಾಮಯ್ಯ ಪ್ಯಾಟಿಮಠ ಸ್ಮಾರಕ, ಲಿಂ| ಅಮರಾಪುರ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ವಚನ ಸಾಹಿತ್ಯದಲ್ಲಿ ವಿಶ್ವ ಮೌಲ್ಯಗಳು ಪ್ರತಿಪಾದಿತವಾಗಿವೆ. ಬುದ್ಧ ಬೌದ್ಧ ಧರ್ಮ ಸ್ಥಾಪಿಸಿದಂತೆ, ಮಹ್ಮದ್ ಪೈಗಂಬರ್ ಇಸ್ಲಾಂ ಧರ್ಮ, ಏಸು ಕ್ರಿಸ್ತ ಕ್ರೈಸ್ತ ಧರ್ಮ ಸ್ಥಾಪಿಸಿದಂತೆ ಬಸವಣ್ಣನವರು 12ನೇ ಶತಮಾನದಲ್ಲಿ ಮೌಲಿಕವಾದ ವಚನ ಸಾಹಿತ್ಯವನ್ನು ಕೊಡುವುದರ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಧಾರ್ಮಿಕ ಕ್ರಾಂತಿ ಮಾಡಿದರು.
ಬಸವಣ್ಣನವರು ಸಮಾಜದಲ್ಲಿನ ಮೌಡ್ಯ, ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿಗಳಂತ ಅನಾಚಾರಗಳ ವಿರುದ್ಧ ಧ್ವನಿ ಎತ್ತಿ ಮೇಲು ಕೀಳುಗಳನ್ನು ಹಳಿದು ಹಾಕಿ ಆತ್ಮ ಸಾಕ್ಷಾತ್ಕಾರದಿಂದ ಬದುಕುವಂತಹ ವಚನ ಸಾಹಿತ್ಯವನ್ನು ನೀಡಿದ್ದಾರೆ ಎಂದು ನುಡಿದರು.
ವಚನ ಗಾಯನದಲ್ಲಿ ವಾಗೆವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಸಚಿನ್ ದೋಟಿಹಾಳ ಮತ್ತು ವಾರುಣಿ ಸಚಿನ್ ದೋಟಿಹಾಳ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರು. ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ದ್ರುವ ತೃತೀಯ ಬಹುಮಾನ ಪಡೆದರು. ವಿದ್ಯಾರ್ಥಿಗಳಿಗೆ ವಚನ ಪುಸ್ತಕ, ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳಂಡಿ, ಎಚ್.ದಂಡಪ್ಪ, ಲತಾ ದೇವರು, ಸವಿತಾ ದೇವರಾಜ, ಚಂದ್ರಶೇಖರ ಚಿಕ್ಕಬೂದುರು, ಬಸವೇಶ್ವರ ಹುಗ್ಗಿ, ಗಂಗಮ್ಮ, ಸಿದ್ದಣ್ಣ ಕಂಬಳಿ, ಶಿಕ್ಷಕಿ ಮಹಾದೇವಿ ಕೇಶಾಪುರ, ಹಿರಿಯ ನ್ಯಾಯವಾದಿ ಬಾಲಕೃಷ್ಣ ದೋಟಿಹಾಳ, ಶಾಮರಾವ್ ಕುಲಕರ್ಣಿ, ವಿ.ಬಸವರಾಜಪ್ಪ, ಭೋಜಣ್ಣ ಮಿಣಜಿಗಿ, ಮರಿಯಪ್ಪ ರಾಯಚೂರುಕರ್, ದೇವರಾಜ, ದಾವಲ್‌ಸಾಬ್ ಬಂಡಿ, ಚಂದಪ್ಪ, ಸತೀಶ, ಬೂದೆಪ್ಪ ಇತರರು ಇದ್ದರು.