ಬಳ್ಳಾರಿ: ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ವಿರೋಧಿಸಿ ಆನಂದ್‌ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಜಮೀನು ಪರಭಾರೆ ಮಾಡಬೇಕೆಂದು ಜಿಂದಾಲ್ ಪರ ಬ್ಯಾಟಿಂಗ್ ಮಾಡಿದ್ದ ಕೆ.ಸಿ.ಕೊಂಡಯ್ಯ ಇದೀಗ ಬಳ್ಳಾರಿ ಜಿಲ್ಲೆ ವಿಭಜನೆಯಲ್ಲಿ ಇಬ್ಬರೂ ಒಂದಾಗಿರುವುದು ಕುತೂಹಲ ಮೂಡಿಸಿದೆ.
ಹಿಂದಿನ ಕಾಂಗ್ರೆಸ್-ಜೆಡಿಎಸ್‌ಮೈತ್ರಿ ಸರ್ಕಾರದ ಆಡಳಿತಾವ ಧಿಯಲ್ಲಿ ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅಂದು ಆನಂದ್‌ಸಿಂಗ್ ಆಡಳಿತ ಪಕ್ಷದ ಶಾಸಕರಾಗಿದ್ದರೂ ಸರ್ಕಾರದ ನಿರ್ಣಯದ ವಿರುದ್ಧ ಸಿಡಿದೆದ್ದಿದ್ದರು. ಜಿಲ್ಲೆಯ ರೈತರ ಜಮೀನು ಉಳಿಯಬೇಕು. ಅಗತ್ಯವಿದ್ದರೆ ಲೀಜ್ ಮುಂದುವರಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದಿದ್ದರು.
ಇದಕ್ಕೆ ಮಾಜಿ ಶಾಸಕ ಅನಿಲ್ ಲಾಡ್ ಸಹ ಧ್ವನಿಗೂಡಿಸಿದ್ದರು. ಇಬ್ಬರೂ ಸೇರಿ ಜಿಂದಾಲ್ ಸಂಸ್ಥೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ ತಾಲೂಕಿನ ಕುಡುತಿನಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಭೂ ಸಂತ್ರಸ್ತರ ಸಮಸ್ಯೆ ಆಲಿಸಿದ್ದರು. ಅನೇಕ ಗ್ರಾಮಗಳಿಗೂ ಭೇಟಿ ನೀಡಿ ಜಿಂದಾಲ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಲುವಾಗಿ “ಭೂ ಸಂತ್ರಸ್ತರ ಹೋರಾಟ ಸಮಿತಿ’ ಹೆಸರಲ್ಲಿ ಲೋಗೋ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜಾಗೃತಿ ಮೂಡಿಸಿದ್ದರು. ಆದರೆ, ಜಿಂದಾಲ್‌ಗೆ ಜಮೀನು ಪರಭಾರೆ ವಿರೋಧ ಮತ್ತು ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆಯನ್ನೂ ನೀಡಿದ್ದರು.
ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ 16 ಶಾಸಕರು ಸಹ ರಾಜೀನಾಮೆ ನೀಡಿದ್ದು, ಜಿಂದಾಲ್ ವಿಷಯ ಮೈತ್ರಿ ಸರ್ಕಾರ ಪತನಕ್ಕೆ ಪ್ರಮುಖ ಕಾರಣವಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ವಿಷಯ ಮರೆಯಾಗಿದ್ದು, ಅನರ್ಹ ಶಾಸಕ ಆನಂದ್‌ಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಅವರ ಹೋರಾಟ ಸಹ ತೆರೆಮರೆಗೆ ಸರಿದಿದ್ದು, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವ ಬೇಡಿಕೆ ಇದೀಗ ಬಿರುಸು ಪಡೆದಿದೆ.
ಜಿಂದಾಲ್ ಪರ ಕೊಂಡಯ್ಯ: ಅನರ್ಹ ಶಾಸಕ ಆನಂದ್‌ಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಜಿಂದಾಲ್‌ಗೆ ಜಮೀನು ಪರಭಾರೆ ವಿರೋಧಿ ಸಿದ್ದರೆ, ಅದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ಜಿಂದಾಲ್ ಸಂಸ್ಥೆಗೆ ರೈತರಿಂದ ಪಡೆಯಲಾಗಿದ್ದ 3667 ಎಕರೆ ಜಮೀನು ಖರೀದಿಸುವಾಗಲೇ ಲೀಜ್ ಕಂ ಸೇಲ್ ಅಗ್ರಿಮೆಂಟ್ ಆಗಿದೆ. ಈವರೆಗೂ ಜಿಂದಾಲ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಲೀಜ್ ಅವಧಿ ಮುಗಿದಿದ್ದು, ಹಿಂದೆ ಮಾಡಿಕೊಂಡ ಒಪ್ಪಂದದಂತೆ ಜಮೀನನ್ನು ಪರಭಾರೆ ಮಾಡಬೇಕು ಎಂದು ಜಿಂದಾಲ್ ಸಂಸ್ಥೆ ಪರ ಬ್ಯಾಟಿಂಗ್ ಮಾಡಿದ್ದರು. ಅಲ್ಲದೇ, ಜಿಂದಾಲ್ ಜಮೀನು ಪರಭಾರೆ ವಿಷಯಕ್ಕೆ ಸಂಬಂಧಿ ಸಿದಂತೆ ಯಾರೇ ಬಂದು ನನ್ನನ್ನು ಪ್ರಶ್ನಿಸಿದರೂ ಉತ್ತರಿಸಲು ನಾನು ಸಿದ್ಧನಿದ್ದೇನೆಂದು ಸಮರ್ಥನೆ ಮಾಡಿಕೊಂಡಿದ್ದರು.
ಒಂದಾದ ಸಿಂಗ್-ಕೆಸಿಕೆ: ಅನರ್ಹ ಶಾಸಕ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಇದೀಗ ಬಳ್ಳಾರಿ ವಿಭಜಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಒಂದಾಗಿದ್ದಾರೆ. ವಿಜಯನಗರ ಜಿಲ್ಲೆಗಾಗಿ ಸೆ.18ರಂದು ವಿವಿಧ ಮಠಾ ಧೀಶರು, ರಾಜಕೀಯ ಮುಖಂಡರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿಗೆ ಅನರ್ಹ ಶಾಸಕ ಆನಂದ್ ಸಿಂಗ್ ತೆರಳಿದ್ದ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಸಹ ತೆರಳಿರುವುದು ಬಳ್ಳಾರಿಯಲ್ಲಿನ ಕನ್ನಡಪರ, ರೈತಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗೆ “ಶತ್ರುವಿನ ಶತ್ರು ಮಿತ್ರ’ ಎನ್ನುವಂತೆ ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬುದಕ್ಕೆ ಆನಂದ್ ಸಿಂಗ್, ಕೆ.ಸಿ.ಕೊಂಡಯ್ಯ ಅವರೇ ಉತ್ತಮ ಉದಾಹರಣೆ.
-ವೆಂಕೋಬಿ ಸಂಗನಕಲ್ಲು