Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರು ದೇಶದ್ರೋಹಿಗಳಲ್ಲ: ಸಿದ್ಧರಾಮಯ್ಯ

10:00 AM Jan 31, 2020 | Sriram |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ಮಾಡುತ್ತಿರುವವರು ದೇಶದ್ರೋಹಿಗಳಲ್ಲ ಬದಲಿಗೆ ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡಲು ಹೊರಟ ಬಿಜೆಪಿಯವರು ದೇಶದ್ರೋಹಿಗಳು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಹುತಾತ್ಮರ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸಂವಿಧಾನ ರಕ್ಷಣೆ ಎಂದು ಹೇಳಿಕೊಂಡು ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಿಜೆಪಿಯವರ ಕಪಟತನ ಬಯಲು ಮಾಡಬೇಕಿದೆ ಎಂದರು.

ಸಿಎಎ, ಎನ್‌ಆರ್‌ಸಿ, ಎಪಿಆರ್‌ ವಿರುದ್ಧದ ಹೋರಾಟಗಳಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿ ನಿಂತುಕೊಂಡು ಹೋರಾಟ ಮಾಡಿದರೆ ಬಿಜೆಪಿಯನ್ನು ಎದುರಿಸಲು ಸಾಧ್ಯ. ಇಲ್ಲದಿದ್ದರೆ ಎಲ್ಲ ಹೋರಾಟಗಳನ್ನು ಬಿಜೆಪಿ ಹತ್ತಿಕ್ಕುತ್ತದೆ. ಆದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಈ ಬಗ್ಗೆ ಸ್ಪಷ್ಟತೆ ಬೆಳೆಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

ಸಂವಿಧಾನ ಬುಡಮೇಲು ಮಾಡಿ ಅದರ ಮೂಲ ಅಶಯಗಳಿಗೆ ಎಳ್ಳು-ನೀರು ಬಿಡುವ ಕೆಲಸ ಮಾಡುತ್ತಿರುವ ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳೆಂದು ಧೈರ್ಯವಾಗಿ ಹೇಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಗಾಂಧಿ ಹತ್ಯೆಯಾದ ದಿನ ದೇಶದ ಜನರಿಗೆ ಬರಸಿಡಿಲು ಬಡಿದ ದಿನ. ಗಾಂಧಿ ವಿಚಾರಧಾರೆ ವಿರೋಧಿಸುತ್ತಿದ್ದ ಶಕ್ತಿಗಳು ಪಿತೂರಿ ನಡೆಸಿ ಅವರನ್ನು ಕೊಂದು ಹಾಕಿದರು.

Advertisement

ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಮತ್ತು ಮಾನವೀಯತೆ ಇಲ್ಲದವರು ಕ್ರೂರಿಗಳಾಗುತ್ತಾರೆ. ಹಿಟ್ಲರ್‌ ಅದೇ ರೀತಿ ಕ್ರೂರತನ ಮೆರೆದಿದ್ದ. ಈಗ ಮೋದಿ, ಅಮಿತ್‌ ಶಾ ಆದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ದೇಶದ್ರೋಹಿ, ಮತಾಂಧ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳುವುದೇ ಗಾಂಧೀಜಿಯವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ದೇಶಕ್ಕೆ ಸುಳ್ಳು ಹೇಳಿದ್ದಾರೆ
ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಪಾಕಿಸ್ಥಾನದಿಂದ ಬರುವ ಹಿಂದೂಗಳಿಗೆ ಭಾರತದಲ್ಲಿ ರಕ್ಷಣೆ ನೀಡಬೇಕು ಎಂದು ಸ್ವತಃ ಗಾಂಧೀಜಿಯವರು ಹೇಳಿದ್ದರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸುಳ್ಳು ಹೇಳಿದ್ದಾರೆ. ಗಾಂಧಿಯವರನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವ, ಆತನನ್ನು ದೇಶಭಕ್ತ ಎಂದು ಹೇಳುವವರಿಗೆ ಗೌರವ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next