ಸುಳ್ಯ: ತಿಂಗಳುಗಟ್ಟಲೇ ಹೈಕಮಾಂಡ್ ಮನವೊಲಿಸಿ ಟಿಕೆಟೇನೋ ಸಿಕ್ಕಿತ್ತು. ಬಿಸಿಲ ಬೇಗೆಯ ಸಹಿಸುತ್ತ ದಿನಗಟ್ಟಲೆ ಸುತ್ತಾಡಿ ಮತದಾರರ ಮನವೊಲಿಸಿದ್ದೂ ಆಯಿತು. ಆದರೇನಂತೆ ತಾವು ಸ್ಪರ್ಧಿಸುವ ಕ್ಷೇತ್ರದಲ್ಲೇ ಇವರಿಗೆ ಮತ ಚಲಾಯಿಸಲು ಅವಕಾಶವಿಲ್ಲ. ತಮ್ಮದೇ ಮತ ವಂಚಿತರಿವರು !
ಇದು ಒಂದಿಬ್ಬರ ಕಥೆಯಲ್ಲ. ಹಲವು ಅಭ್ಯರ್ಥಿಗಳದು ಇದೇ ಪಾಡು…! ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಕುಂತಳಾ ಟಿ. ಶೆಟ್ಟಿ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ| ಬಿ. ರಘು ಸ್ಪರ್ಧಿಸಿದ್ದರು. ವಿಶೇಷ ಅಂದರೆ ಆ ಚುನಾವಣೆಯಲ್ಲಿ ಅವರಿಗೆ ತಮ್ಮ ಮತವನ್ನು ತಮಗೇ ಹಾಕಿಕೊಳ್ಳುವ ಭಾಗ್ಯ ಲಭಿಸಿಲ್ಲ. ಕಾರಣ ಅವರು ತಾವು ಸ್ಪರ್ಧಿಸಿದ ಕ್ಷೇತ್ರದಲ್ಲಿ ಮತದಾರರಲ್ಲ.
ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಆಲಂಕಾರಿನ ಕುಂತೂರುಪದವು ಮತಗಟ್ಟೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದರೆ, ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಡಾ| ರಘು ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ನೆಕ್ಕಿಲಾಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದರು. ಹಾಗಾಗಿ ಇವರಿಬ್ಬರೂ ತಾವು ಸ್ಪರ್ಧಿಸಿದ ಕ್ಷೇತ್ರ ಬಿಟ್ಟು, ಮತದಾನದ ಹಕ್ಕು ಇರುವ ವ್ಯಾಪ್ತಿಯ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಹಾಗಾಗಿ ಅವರ ಮತ ಅವರಿಗೆ ಹಾಕುವ ಅವಕಾಶ ಸಿಗಲಿಲ್ಲ.
ಶಕುಂತಳಾ ಟಿ. ಶೆಟ್ಟಿ ಅವರು ಮೂರು ಬಾರಿ ಹಾಗೂ ಡಾ| ಬಿ. ರಘು ಅವರು ಮೂರು ಬಾರಿ ಪುತ್ತೂರು, ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮತ ಹಾಕುವ ಅವಕಾಶ ಮೂರು ಬಾರಿಯೂ ಇರಲಿಲ್ಲ. ನಾಲ್ಕನೇ ಬಾರಿ ಸ್ಪರ್ಧಿಸುವ ಉಮೇದಿನಲ್ಲಿ ಇರುವ ಇವರಿಬ್ಬರಿಗೆ ನಾಲ್ಕನೇ ಬಾರಿಯೂ ಮತ ಹಾಕಿಕೊಳ್ಳುವ ಅವಕಾಶ ದೊರೆಯುವುದಿಲ್ಲ.
ಉಳಿದಂತೆ ಕಳೆದ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ ಸುಳ್ಯ ತಾಲೂಕಿನ ದಿನೇಶ್ ಬಿ.ಎನ್., ಸುಳ್ಯ ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪುತ್ತೂರಿನ ಕುರಿಯ ನಿವಾಸಿ ಕೂಸಪ್ಪ ಅವರು ಕೂಡ ಸ್ಪರ್ಧಾ ಕ್ಷೇತ್ರದಲ್ಲಿ ಮತದಾನ ಮಾಡುವ ಅವಕಾಶ ಹೊಂದಿರಲಿಲ್ಲ. ಅವರಿಬ್ಬರು ಹಕ್ಕು ಚಲಾಯಿಸುವ ಮತಗಟ್ಟೆ ಹೊಂದಿರುವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸದೇ ಇರುವುದು ಇದಕ್ಕೆ ಕಾರಣವಾಗಿತ್ತು.
ಶಕು ಅಕ್ಕ ಮಂಗಳೂರಿನ ಮತದಾರೆ!
2018ರ ಚುನಾವಣಾ ಕದನ ಕಣದಲ್ಲಿ ಶಕುಂತಳಾ ಟಿ. ಶೆಟ್ಟಿ ಅವರು ಪುತ್ತೂರು ಕ್ಷೇತ್ರದಿಂದ ಮತ್ತು ಡಾ| ರಘು ಅವರು ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಗಳಾಗಿದ್ದು, ಟಿಕೇಟ್ ಸಿಕ್ಕರೆ ಈ ಬಾರಿಯೂ ತಮ್ಮ ಮತವನ್ನು ತಮಗೇ ಹಾಕಿಕೊಳ್ಳುವಂತಿಲ್ಲ. ಶಕುಂತಳಾ ಟಿ. ಶೆಟ್ಟಿ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಕುಂತೂರಿನ ಜಾಗ ಮಾರಾಟ ಮಾಡಿ ಮಂಗಳೂರು ಕ್ಷೇತ್ರ (ಉಳ್ಳಾಲ)ದ ವ್ಯಾಪ್ತಿಯ ನಿವಾಸಿ ಆಗಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಅವರು ಮಂಗಳೂರು ವಿಧಾನಸಭಾ ಕ್ಷೇತ್ರ (ಉಳ್ಳಾಲ)ದಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
ಡಾ| ರಘು ಅವರು ಕಳೆದ ಬಾರಿಯಂತೆ ಈ ಬಾರಿಯೂ ಪುತ್ತೂರು ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ. ಅವರ ಮತಗಟ್ಟೆ ಕ್ಷೇತ್ರ ಬದಲಾಗಿಲ್ಲ.
ಕಿರಣ್ ಪ್ರಸಾದ್ ಕುಂಡಡ್ಕ