Advertisement

Delhi Tulusiri; ಸ್ವಂತಿಕೆಯನ್ನು ಉಳಿಸಿಕೊಂಡು ಬದುಕುವವರು ತುಳುವರು: ಸದಾನಂದ ಗೌಡ

09:35 PM Aug 22, 2023 | Team Udayavani |

ಮಹಾನಗರ: ಎಲ್ಲಿ ಹೋದರೂ ಸ್ವಂತಿಕೆಯನ್ನು ಉಳಿಸಿಕೊಂಡು ಬದುಕುವವರು ತುಳುವರು. ಹಾಗಾಗಿಯೇ ನಮ್ಮ ಭಾಷೆ, ಆಚಾರ -ವಿಚಾರಗಳು ಬದಲಾಗದೇ ಮೂಲ ಸಂಸ್ಕೃತಿಯಲ್ಲಿಯೇ ಸಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ಅವರು ಲೋಧಿ ಎಸ್ಟೇಟ್‌, ಹೊಸದಿಲ್ಲಿಯ ದಿಲ್ಲಿ ಕನ್ನಡ ಶಾಲೆಯ ಹೊರಾಂಗಣದಲ್ಲಿ ಇತ್ತೀಚೆಗೆ ದಿಲ್ಲಿ ತುಳುಸಿರಿ ಅದ್ದೂರಿಯಾಗಿ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತುಳುನಾಡು ಇಡೀ ದೇಶದಲ್ಲಿ ವಿಶಿಷ್ಟ ಸಂಸ್ಕೃತಿ, ಸಂಸ್ಕಾರ ಹೊಂದಿರುವಂತಹ ಪ್ರದೇಶ. ಕಷ್ಟದ ತಿಂಗಳಾಗಿದ್ದ ಆಟಿಯಲ್ಲಿ ಕೆಲಸಕ್ಕೆ ಹೋಗಲಾರದೆ ಸಿಗುವಂತಹ ಹಲಸಿನ ಬೀಜ, ಹುಣಸೆ ಬೀಜ, ಗೇರು ಬೀಜ ಮುಂತಾದವುಗಳನ್ನು ಒಟ್ಟು ಮಾಡಿ ಹಸಿvಜಿಗಾಗಿ ತಿನ್ನುತ್ತಿದ್ದೆವು ಎಂದು ತಮ್ಮ ಬಾಲ್ಯದ ದಿನದ ನೆನಪುಗಳನ್ನು ಹಂಚಿಕೊಂಡರು.

ಕೇಂದ್ರ ಸರಕಾರದ ನೀರಾವರಿ ಆಯೋಗದ ಹಿರಿಯ ಅಧಿಕಾರಿ ಮೂಲತಃ ಮಂಗಳೂರಿನ ಕುಳಾಯಿಯವರಾದ ಭಾಗೀರಥಿ ಅವರು ಹೊರಾಂಗಣದಲ್ಲಿ ಸಿದ್ಧವಾದ ಒಲೆಯ ಮೇಲಿದ್ದ ಕುದಿಯುವ ನೀರಿಗೆ ಕುಚ್ಚಲಕ್ಕಿಯನ್ನು ಹಾಕುವ ಮೂಲಕ ಸಾಂಪ್ರಾದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳುವರ ಬದುಕಿನಲ್ಲಿ ಹಿಂದೆ ಆಟಿ ತಿಂಗಳು ಬಹಳ ಕಷ್ಟದ ದಿನಗಳಾಗಿದ್ದವು. ಕೃಷಿಯ ಚಟುವಟಿಕೆಗಳಿಲ್ಲದೆ ಮನೆಯ ಅಡುಗೆ ಕೋಣೆಯಲ್ಲಿ ಒಲೆಯನ್ನು ಉರಿಸುವುದು ಕಷ್ಟವಾಗಿತ್ತು. ಇಂದು ನಾವು ನಮ್ಮ ಹಿರಿಯರ ದುಡಿಮೆಯಿಂದ ಸಮೃದ್ಧಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದರು.

ಮಖ್ಯ ಅತಿಥಿ ಜೆಎನ್‌ಯುವಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ| ರಮೇಶ್‌ ಸಾಲ್ಯಾನ್‌ ಮಾತನಾಡಿ, ತುಳುನಾಡಿನ ಪ್ರತಿಯೊಂದು ಆಚರಣೆಗಳಲ್ಲಿ ವೈಜ್ಞಾನಿಕ ಕಾರಣವಿದ್ದು, ಆಹಾರ – ತಿನಿಸುಗಳಲ್ಲಿ ಆರೋಗ್ಯ ಗುಟ್ಟು ಅಡಗಿದೆ ಎಂದರು.

ದಿಲ್ಲಿ ತುಳುಸಿರಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, ತುಳುನಾಡಿನ ಕಲೆ, ಜಾನಪದ, ಆಹಾರ ಪದ್ದತಿ ವಿಶಿಷ್ಟವಾದುದು. ದಿಲ್ಲಿಯಲ್ಲಿದ್ದರೂ ನಮ್ಮ ಮಣ್ಣಿನ ಗುಣ, ಋಣವನ್ನು ಮರೆಯುವಂತಿಲ್ಲ. ದಿಲ್ಲಿ ತುಳುಸಿರಿಯು ತುಳು ಭಾಷೆ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಸತತವಾಗಿ ಆಯೋಜಿಸುತ್ತಾ ಬರುತ್ತಿದೆ ಎಂದರು.

Advertisement

ಕಾರ್ಯಕ್ರಮದ ಅನಂತರ ಮನೆಯಲ್ಲಿ ತಯಾರಿಸಿದ ಆಟಿ ಮಾಸದ 36 ಬಗೆಯ ವಿಶೇಷ ಖಾದ್ಯಗಳನ್ನು ಸುಮಾರು ಇನ್ನೂರಕ್ಕು ಹೆಚ್ಚು ತುಳು ಬಾಂಧವರು ಸವಿದರು. ಡಾ| ಸಾಯಿ ಪ್ರಶಾಂತಿ ಶೆಟ್ಟಿ, ಪ್ರಶಾಂತ ಶೆಟ್ಟಿ ಅವರು ಕಿರಿಯ – ಹಿರಿಯ ವಿಭಾಗದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ತುಳು ಜನಪದ ಪಂದ್ಯಾಟಗಳನ್ನು ನಡೆಸಿಕೊಟ್ಟರು.

ಶುಭಾ ದೇವಿಪ್ರಸಾದ್‌, ಪೂಜಾ ರಾವ್‌, ಸವಿತಾ, ಸವಿತಾ ನೆಲ್ಲಿ, ಮಾಲಿ ಪ್ರಹ್ಲಾದ್‌, ಅರವಿಂದ ಬಿಜೈ, ಸುನೀತಾ ಬಿಜೈ ತುಳು ಜನಪದ ಹಾಡುಗಳನ್ನು, ನಾಗರಾಜ ಎಂ. ತುಳು ಗಾದೆಗಳನ್ನು ಪ್ರಸ್ತುತ ಪಡಿಸಿದರು. ಪ್ರಕಾಶ್‌ ಶೆಟ್ಟಿ ಉಳ್ಳೆಪಾಡಿ ಸ್ವಾಗತಿಸಿ, ಆಟಿ ತಿಂಗಳ ಮಹತ್ವದ ಬಗ್ಗೆ ವಿವರಿಸಿದರು. ದಿಲ್ಲಿ ತುಳುಸಿರಿ ಕಾರ್ಯದರ್ಶಿ ಶ್ರೀಹರಿ ವಂದಿಸಿದರು. ಜತೆ ಕಾರ್ಯದರ್ಶಿ ಅರವಿಂದ ಬಿಜೈ ನಿರೂಪಿಸಿದರು. ದಿಲ್ಲಿ ತುಳುಸಿರಿಯ ಪದಾಧಿಕಾರಿಗಳಾದ ಪ್ರದೀಪ್‌ ರಾವ್‌, ಮೆಲ್ವಿನ್‌, ಕಾರ್ತಿಕ್‌ ಕಾರ್ಯಕ್ರಮ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next