ಹೊಸದಿಲ್ಲಿ : ‘ದೇಶದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕುವವರು ವಂದೇ ಮಾತರಂ ಘೋಷಣೆ ಕೂಗಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಆಗಿ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ಐತಿಹಾಸಿಕ ಶಿಕಾಗೋ ಭಾಷಣದ 125ನೇ ವರ್ಷಾಚರಣೆಯ ಪ್ರಯುಕ್ತ ಇಂದು ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
‘ರಸ್ತೆಗಳನ್ನು ಯಾರು ಸ್ವಚ್ಚವಾಗಿಟ್ಟುಕೊಳ್ಳುತ್ತಾರೋ ಅವರಿಗೆ ಮಾತ್ರವೇ ವಂದೇ ಮಾತರಂ ಘೋಷಣೆ ಹಾಕುವ ಮೊದಲ ಹಕ್ಕು ಇರುತ್ತದೆ’ ಎಂದು ಮೋದಿ ಹೇಳಿದರು.
“ನಾನಿಲ್ಲಿ ಸಭಾ ಕಾರ್ಯಕ್ರಮವನ್ನು ಪ್ರವೇಶಿಸಿದೊಡನೆಯೇ ಜನರು ವಂದೇ ಮಾತರಂ, ವಂದೇ ಮಾತರಂ ಎಂದು ಘೋಷಣೆ ಹಾಕುವುದನ್ನು ಕೇಳಿಸಿಕೊಂಡೆ. ಆಗ ನನ್ನ ಕಿವಿಯಲ್ಲಿ ದೇಶ ಪ್ರೇಮವೇ ಅನುರಣಿಸಿತು. ಆದರೆ ನಮ್ಮ ದೇಶವನ್ನು ಸ್ವಚ್ಚ ವಾಗಿಟ್ಟುಕೊಳ್ಳದ ನಮಗೆ ವಂದೇ ಮಾತರಂ ಘೋಷಣೆ ಕೂಗುವ ಹಕ್ಕೇ ಇರುವುದಿಲ್ಲ” ಎಂದು ಮೋದಿ ಹೇಳಿದರು.
“ನಾವು ನಮ್ಮ ರಸ್ತೆಗಳನ್ನು ಗುಡಿಸಿ ಸ್ವಚ್ಚಗೊಳಿಸುತ್ತೇವೋ ಇಲ್ಲವೋ ಆ ಮಾತು ಬೇರೆ; ಆದರೆ ನಮ್ಮ ಮಾತೃಭೂಮಿಯಲ್ಲಿ ಎಲ್ಲೆಂದರಲ್ಲಿ ಕಸ ರಾಶಿ ಹಾಕುವ ಹಕ್ಕು ನಮಗಿಲ್ಲ” ಎಂದು ಮೋದಿ ಹೇಳಿದರು.
‘ದೇಶದ ಯುವಕರು ದೇವಸ್ಥಾನಗಳನ್ನು ಕಟ್ಟುವ ಮುನ್ನ, ಮೊತ್ತ ಮೊದಲಾಗಿ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದು ಮೋದಿ ಕರೆ ನೀಡಿದರು.
“ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು : ಕೇವಲ ಪೂಜೆ ಪುರಸ್ಕಾಗಳು ನಮ್ಮನ್ನು ದೇವರೊಂದಿಗೆ ಬೆಸೆಯುವುದಿಲ್ಲ; ಜನ ಸೇವೆಯೇ ಪ್ರಭು ಸೇವೆ’ ಎಂದು ಮೋದಿ ಹೇಳಿದರು.