Advertisement

ವರದಿ ಬರುವ ಮುನ್ನವೇ ತೆರಳಿದವರಲ್ಲಿ ಪಾಸಿಟಿವ್‌

01:43 AM Jun 01, 2020 | Sriram |

ಮಂಗಳೂರು/ ಉಡುಪಿ: ಕ್ವಾರಂಟೈನ್‌ನಲ್ಲಿದ್ದವರನ್ನು ಸೋಂಕು ಪರೀಕ್ಷಾ ವರದಿ ಬರುವುದಕ್ಕೆ ಮೊದಲೇ ಮನೆ ಕ್ವಾರಂಟೈನ್‌ಗೆ ಕಳುಹಿಸುವ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳ ಕ್ರಮದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನರು ಅನಗತ್ಯ ಆತಂಕಕ್ಕೀಡಾಗುವಂತಾಗಿದೆ.
ಜಿಲ್ಲಾಡಳಿತ, ರಾಜ್ಯ ಸರಕಾರ ಈಗ ಸೋಂಕು ಪರೀಕ್ಷಾ ವರದಿ ಬರುವು ದಕ್ಕಿಂತ ಮೊದಲೇ ಕ್ವಾರಂಟೈನ್‌ನಲ್ಲಿದ್ದ ವರನ್ನು ಮನೆಗೆ ಕಳುಹಿಸುತ್ತಿರು ವುದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

Advertisement

ಸದ್ಯ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ನಿಯಮವಿದೆ. ಆ ಬಳಿಕ ಆ ವ್ಯಕ್ತಿ ಹೋಂ ಕ್ವಾರಂಟೈನ್‌ನಲ್ಲಿರಬೇಕು. ನಿಯಮ ಪಾಲಿಸಿದರೆ ಸಮಸ್ಯೆ ಆಗದು ಎಂಬುದು ಆರೋಗ್ಯ ಇಲಾಖೆಯ ವಾದ. ಇದು ಸಮುದಾಯ ಸೋಂಕಿಗೆ ರಹದಾರಿ ಎಂಬ ಆತಂಕ ಜನರದ್ದು. ಎರಡೂ ಜಿಲ್ಲೆಗಳಲ್ಲಿ 3 ದಿನಗಳಿಂದ ಪತ್ತೆಯಾಗುತ್ತಿರುವ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡಿವೆ. ಉಡುಪಿಯಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿಯ ವರದಿ ಬರಲು ಬಾಕಿ ಇದೆ. ಇವರೆಲ್ಲರೂ ಸಾಂಸ್ಥಿಕ ಕ್ವಾರಂಟೇನ್‌ನಿಂದ ಬಿಡುಗಡೆಗೊಂಡಿದ್ದಾರೆ. ದುರದೃಷ್ಟವಶಾತ್‌ ಇವರಲ್ಲಿ ಸೋಂಕು ಪೀಡಿತರಿದ್ದು, ಸಮುದಾಯಕ್ಕೆ ತಗಲಿದರೆ ಇದುವರೆಗೆ ಪಡೆದಿದ್ದ ಹಸುರು ಜಿಲ್ಲೆ ಮರ್ಯಾದೆ ಮೂರಾ ಬಟ್ಟೆಯಾಗಲಿದೆ.

ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ
ಸರಕಾರಿ ಅಥವಾ ಹೋಂ ಕ್ವಾರಂಟೈನ್‌
ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆಯಾಗದಿರುವುದು ಕೂಡ ಸೋಂಕು ಹೆಚ್ಚಲು ಕಾರಣವಾಗಿದೆ. ಮುಡಿಪು ಸಮೀಪದ ಬೋಳಿಯಾರು ಸಹಿತ ಉಡುಪಿ ಜಿಲ್ಲೆಯ ಕೋಟ, ಬೆಣ್ಣೆಕುದ್ರು, ಕಾರ್ಕಳದ ಇನ್ನಾ, ಮಿಯ್ನಾರು, ಮಾಳ, ಬೆಳಪು, ಪಾಂಗಾಳಗುಡ್ಡೆ ಪ್ರದೇಶಗಳಲ್ಲಿಯೂ ಇಂಥದ್ದೇ ಪ್ರಕರಣಗಳಿದ್ದು, ಸೀಲ್‌ಡೌನ್‌ ಆಗಿವೆ.

ಪರೀಕ್ಷೆಯ ಒತ್ತಡ, ವರದಿ ತಡ
ಎರಡೂ ಜಿಲ್ಲೆಗಳಲ್ಲಿ ಪರೀಕ್ಷೆಗೊಳ್ಳಬೇಕಾದ ಮಾದರಿಗಳು ಭಾರೀ ಸಂಖ್ಯೆಯಲ್ಲಿದ್ದು, ವರದಿ ಬೇಗನೆ ಕೈಸೇರುತ್ತಿಲ್ಲ. ಹಾಗೆಂದು ಜಿಲ್ಲಾಡಳಿತಗಳು ವರದಿ ಬರುವವರೆಗೂ ಕಾಯುತ್ತಿಲ್ಲ. ಏಳು ದಿನಗಳಾದ ಕೂಡಲೇ ಕ್ವಾರಂಟೈನ್‌ನಲ್ಲಿದ್ದವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಇದರಿಂದಲೇ ಸಮಸ್ಯೆ ಹೆಚ್ಚುತ್ತಿದ್ದು, ಜನರ ಟೀಕೆಗೆ ಗುರಿಯಾಗುತ್ತಿದೆ.

ಕ್ವಾರಂಟೈನ್‌; ಟೆಸ್ಟ್‌ ಕಡ್ಡಾಯವಲ್ಲ!
ಹಾಟ್‌ಸ್ಪಾಟ್‌ ಮತ್ತು ವಿದೇಶಗಳಿಂದ ಬಂದವರು 7 ದಿನ ಹೋಂ ಕ್ವಾರಂಟೈನ್‌ನಲ್ಲಿರುತ್ತಾರೆ. ಈ ವೇಳೆ ಲಕ್ಷಣ ಕಂಡುಬಾರದಿದ್ದರೆ ಸೋಂಕು ಪರೀಕ್ಷೆಗೆ ಒಳಪಡಬೇಕಿಲ್ಲ. ದೇಹದ ಉಷ್ಣಾಂಶದಲ್ಲಿ ಏರಿಳಿತ ಕಂಡುಬಂದರೆ ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದೂ ಮುಂದಿನ ದಿನಗಳಲ್ಲಿ ಇನ್ನಷ್ಟು ಆತಂಕ ಸೃಷ್ಟಿಸುವ ಸಾಧ್ಯತೆಯಿದೆ.

Advertisement

7 ಸಾವಿರ ವರದಿ ಬಾಕಿ!
ಬೇರೆ ಕಡೆಗಳಿಂದ ಉಡುಪಿ ಜಿಲ್ಲೆಗೆ 8,168 ಮಂದಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಅವರಲ್ಲಿ 4,941 ಮಂದಿ 28 ಮತ್ತು 3,869 ಮಂದಿ 14 ದಿನಗಳ ಕ್ವಾರಂಟೈನ್‌ ಪೂರೈಸಿದ್ದಾರೆ. ಇಲ್ಲಿಯವರೆಗೆ 12,502 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದ್ದು, 5,058 ಮಂದಿ ವರದಿ ನೆಗಟಿವ್‌ ಬಂದಿವೆ. ಇನ್ನೂ 7,257 ಮಂದಿಯ ವರದಿ ಬಾಕಿ ಇದೆ. ಆದರೆ ದ. ಕ.ದಲ್ಲಿ ಇಂತಹ ಸ್ಥಿತಿ ಇಲ್ಲ. ಅಲ್ಲಿ ಹೋಂ ಕ್ವಾರಂಟೈನ್‌ಗೆ ತೆರಳಿರುವ 35 ಮಂದಿಯ ವರದಿಯಷ್ಟೇ ಬರಲು ಬಾಕಿ ಇದೆ.

ಅವೈಜ್ಞಾನಿಕ ವಿಧಾನದಿಂದಲೇ ಹೆಚ್ಚಿದ ಆತಂಕ
ಸೋಂಕಿನೊಂದಿಗೆ ಬದುಕುವುದನ್ನು ಕಲಿಯಬೇಕೆಂಬ ನೀತಿ ಹೇಳಿಕೊಡಲು ಹೊರಟಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳು ಇದು ಮಕ್ಕಳಿಗೆ ಪಂಜರದಲ್ಲಿರುವ ಹುಲಿಯನ್ನು ತೋರಿಸಿ ಅಭ್ಯಾಸ ಮಾಡಿಸುವಂತೆ ಅಂದುಕೊಂಡಿವೆ. ಆದರೆ ಕೋವಿಡ್‌-19 ರಾಜಾರೋಷವಾಗಿ ಓಡಾಡುತ್ತಿರುವ ನರಭಕ್ಷಕ ಎಂಬು ದನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಇಲ್ಲವಾದರೆ 40 ದಿನ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ಉದ್ಯೋಗ, ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವ ಅಗತ್ಯವಿತ್ತೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಏಳುತ್ತಿದೆ. ಜನ ತಮ್ಮ ಸುರಕ್ಷೆಯನ್ನು ತಾವೇ ಮಾಡಿಕೊಳ್ಳಲಿ ಎಂದು ಆಡಳಿತಗಳು ವಾದಿಸುವುದಾದರೆ ಅದನ್ನೇ 40 ದಿನಗಳ ಹಿಂದೆ ಘೋಷಿಸಬಹುದಿತ್ತಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ. ಇಟಲಿ, ಅಮೆರಿಕದಲ್ಲೆಲ್ಲ ಆದದ್ದು ಇಂಥದ್ದೇ ನಿರ್ಲಕ್ಷ್ಯ. ಅದಕ್ಕೆ ಬೆಲೆ ತೆತ್ತಾಗಿದೆ. ಸರಕಾರ ಮತ್ತು ಜಿಲ್ಲಾಡಳಿತಗಳು ವೈರಸ್‌ ಬಗ್ಗೆ ತರಬೇತಾದ ಸರ್ಕಸ್‌ ರಿಂಗ್‌ಮಾಸ್ಟರ್‌ನಂತೆ ಗತ್ತಿನಿಂದ ವರ್ತಿಸುತ್ತಿದ್ದರೆ, ಜನರು ಹುಲಿ ತಮ್ಮ ಮೇಲೆ ಹಾರುವ ಭಯದಲ್ಲಿ ಮನೆಯಿಂದ ಹೊರಬರುವುದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ. ಜನರ ಭಯ ಬಿಡಿಸಬೇಕೆಂಬ ಸರಕಾರದ ಕ್ರಮ ಅವೈಜ್ಞಾನಿಕ ರೀತಿಯಲ್ಲಿ ಜಾರಿಯಾಗುತ್ತಿರುವುದು ಅದಕ್ಕೇ ಮುಳುವಾಗಲಿದೆ.

ಬೋಳಿಯಾರು ಮೂಲದ ವ್ಯಕ್ತಿಯನ್ನು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಹಿಂದಿನ ಮಾರ್ಗಸೂಚಿಯಂತೆ ಗಂಟಲ ದ್ರವ ಮಾದರಿ ತೆಗೆದು 7 ದಿನ ಬಳಿಕ ಅವರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ಬಳಿಕ ಕೋವಿಡ್‌ -19ಪಾಸಿಟಿವ್‌ ವರದಿ ಬಂದ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ.
ಡಾ| ರಾಮಚಂದ್ರ ಬಾಯರಿ,
ದ.ಕ. ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next