Advertisement

ಸಹಕಾರ ಪಡೆದವರೇ ಚೂರಿ ಹಾಕಿದರು

03:11 PM May 21, 2018 | Team Udayavani |

ಹುಣಸೂರು: ನನ್ನಿಂದ ಅಧಿಕಾರ, ಸಹಕಾರ ಪಡೆದುಕೊಂಡವರೇ ಹೆಚ್ಚು ಬೆನ್ನಿಗೆ ಚೂರಿ ಹಾಕಿದ್ದಾರೆ. ನಾನು ಸೋತಿದ್ದರೂ ಜನರ ಮನಸ್ಸನ್ನು ಗೆದ್ದಿದ್ದೇನೆಂಬ ಆತ್ಮವಿಶ್ವಾಸವಿದೆ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

Advertisement

ತಾಲೂಕು ಕಾಂಗ್ರೆಸ್‌ ಘಟಕದ ವತಿಯಿಂದ ನಗರದ ಸಲೀಂ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಮತದಾರರಿಗೆ ಅಭಿನಂದನೆ ಹಾಗೂ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಜನಾಂಗದಲ್ಲಿ ಅಲ್ಪಸಂಖ್ಯಾತನಾದ ತಮಗೆ 83 ಸಾವಿರಕ್ಕೂ ಹೆಚ್ಚು ಮತದಾರರು ಮತ ನೀಡಿರುವುದು ಸಾಮಾನ್ಯವೇನಲ್ಲ. ಅವರೆಲ್ಲರಿಗೂ ಅಭಿನಂದಿಸುವೆ. ನಾನು ಸೋಲನ್ನು ನಿರೀಕ್ಷಿಸಿರಲಿಲ್ಲ.

ಆದರೆ ತಮ್ಮ ವಿರುದ್ಧ ಅಧಿಕಾರಿಗಳ ನಿರ್ಲಕ್ಷದಿಂದಾದ  ಹನುಮ ಜಯಂತಿಯ ಘಟನೆಯನ್ನು ತಮ್ಮ ಮೇಲೆ ಹೊರಿಸಿದ್ದು,  ತಾಲೂಕಿನ ಸ್ವಾಮೀಜಿಯೊಬ್ಬರ ದ್ವಂದ್ವ ನೀತಿ, ವೀರಶೈವ-ಲಿಂಗಾಯಿತ, ಟಿಪ್ಪು ಜಯಂತಿ, ದಲಿತ ಸಿಎಂ ವಿವಾದಗಳು. ಸರಕಾರದ ವಿರುದ್ಧ ವ್ಯವಸ್ಥಿತ ಅಪಪ್ರಚಾರ, ತಾಲೂಕಿನ ಜಾತಿ ಸಮೀಕರಣ ಹೀಗೆ ಹಲವು ಕಾರಣಗಳಿಂದಾಗಿ ಸೋತಿದ್ದೇನೆಂದು ತಿಳಿಸಿದರು.

ಒಂದೆಡೆ ದಳದ ಕಾರ್ಯಕರ್ತರು ಗೆಲ್ಲಬೇಕೆಂಬ ಜಿದ್ದಿನಲ್ಲಿದ್ದರೆ, ಕಾಂಗ್ರೆಸ್‌ ಕಾರ್ಯಕರ್ತರು ಗೆದ್ದೇ ಗೆಲ್ಲುತ್ತೇವೆಂದು ಮೈಮರೆತರು. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಅಪ ಪ್ರಚಾರವನ್ನು ತಡೆಯಲು ವಿಪಲರಾದರು. ಇನ್ನೂ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಎಲ್ಲಾ ಸಾಲಮನ್ನಾ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಭರವಸೆ ಮೇರೆಗೆ ಅವರನ್ನು ಬೆಂಬಲಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ಬಿಜೆಪಿ ಅವರು ಪರೋಕ್ಷವಾಗಿ ಜೆಡಿಎಸ್‌ ಬೆಂಬಲಿಸಿದರು. ಇನ್ನು ಚಿಕ್ಕಮಾದು ಕುಟುಂಬವನ್ನು ಕಾಂಗ್ರೆಸ್‌ಗೆ ಕರೆತಂದು ಆಶ್ರಯ ಕಲ್ಪಿಸಿದರೂ ತಾಲೂಕಿನಲ್ಲಿ ಆ ಜನಾಂಗದ ವಿಶ್ವಾಸಗಳಿಸುವಲ್ಲಿ ಸಾಧ್ಯವಾಗಿಲ್ಲ. ಅಭಿವೃದ್ಧಿ ಕೆಲಸ ಮಾಡಿರುವ ಕಡೆಗಳಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ. ಮುಂದೆ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ ಎಂದು ತಿಳಿಸಿದರು.

Advertisement

ಕೆಲಸ ಮಾಡುವವನನ್ನೇ ಕಳೆದುಕೊಂಡ್ರಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸೆಂದರಿತು ಕೆಲಸ ಮಾಡಿದೆ. ನೂರಾರು ಬಡಕುಟುಂಬಗಳಿಗೆ ಆಸರೆಯಾಗಿದ್ದೆ. ಸಾವು-ನೋವು, ಮದುವೆ ಹೀಗೆ ಅನೇಕ ಸಮಸ್ಯೆ-ಸಂಭ್ರಮಗಳಿಗೆ ಸ್ಪಂದಿಸುತ್ತಿದ್ದೆ. ನೀವೀಗ ನಿಮ್ಮ ಮನೆಯ ಮಗನನ್ನು ಕಳೆದುಕೊಂಡಿದ್ದೀರಾ, ಮತ್ತೂಬ್ಬ ಮಂಜುನಾಥ್‌ ನಿಮಗೆ ಸಿಗಲ್ಲವೆಂದು ಭಾವನಾತ್ಮಕ ನುಡಿಗಳನ್ನಾಡಿದರು.

ಕುಮಾರಸ್ವಾಮಿ ಸಿಎಂ ಆಗಲಿ: ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದು, ಸಿದ್ದರಾಮಯ್ಯರ ಆಶೀರ್ವಾದದಿಂದ ಕುಮಾರಸ್ವಾಮಿ ಸಿಎಂ ಆಗಲಿ ಎಂದು ಚಾಮುಂಡೇಶ್ವರಿಯಲ್ಲಿ ಕಾರ್ಯಕರ್ತರ ಪರವಾಗಿ ಬೇಡಿಕೊಂಡಿದ್ದೇನೆ. ಕ್ಷೇತ್ರದ ನೂತನ ಶಾಸಕ ವಿಶ್ವನಾಥರನ್ನು ಅಭಿನಂದಿಸಿ, ಅವರ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವೆ. ಅವರೂ ಸಚಿವರಾಗುವ ಜೊತೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲೆಂದು ಹಾರೈಸಿದರು.

ಸಭೆಯಲ್ಲಿ ಎಪಿಎಂಸಿ ಸದಸ್ಯ ಮಂಜುನಾಥ್‌, ಮುಖಂಡರಾದ ಎ.ಪಿ.ಸ್ವಾಮಿ, ಬಿ.ಎನ್‌.ಜಯರಾಂ, ಡೇವಿಡ್‌, ತಮ್ಮಡಹಳ್ಳಿ ಮಹದೇವ್‌, ಹುಲ್ಯಾಳು ದೇವರಾಜ್‌ ಸೇರಿದಂತೆ ಅನೇಕರು ಮಾತನಾಡಿದರು. ಜಿಪಂ ಸದಸ್ಯರಾದ ಸಾವಿತ್ರಿ ಮಂಜು, ಡಾ.ಪುಷ್ಪ ಅಮರ್‌ನಾಥ್‌, ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ತಾಪಂ ಅಧ್ಯಕ್ಷೆ ಪದ್ಮಮ್ಮ, ಕಾಂಗ್ರೆಸ್‌ ಅಧ್ಯಕ್ಷರಾದ ನಾರಾಯಣ್‌, ಬಸವರಾಜೇಗೌಡ, ಶಿವಯ್ಯ, ಯುವ ಅಧ್ಯಕ್ಷ ಸ್ವಾಮಿ, ಕಾರ್ಯಾಧ್ಯಕ್ಷ ರಾಘು, ಹಂದನಹಳ್ಳಿ ಸೋಮಶೇಖರ್‌, ಚಿನ್ನವೀರಯ್ಯ, ಪುಟ್ಟಮಾದಯ್ಯ ಮತ್ತು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next