Advertisement

ಮತ ಕೇಳಲು ಬರುವವರು ನಮ್ಮ ಮಾತು ಕೇಳಲ್ಲ !

02:01 PM Apr 16, 2023 | Team Udayavani |

ಕಾರ್ಕಳ: ಪ್ರತೀ ಬಾರಿ ಚುನಾವಣೆ ಬಂದಾಗ ಎಲ್ಲ ಪಕ್ಷದವರು ಮತ ಕೇಳಲೆಂದು ಬರುತ್ತಾರೆ. ಬಂದವರೆಲ್ಲರ ಬಳಿ ನಾವು ನಮ್ಮ ಸಮಸ್ಯೆ ಹೇಳಿದರೂ ಅವರು ಯಾರೂ ನಮ್ಮ ಸಮಸ್ಯೆ ಪರಿಹರಿಸಿ ಕೊಡುತ್ತಿಲ್ಲ. ನಮ್ಮ ಮಾತು, ಸಮಸ್ಯೆ ಅದ್ಯಾವುದೂ ಅವರಿಗೆ ಬೇಡ. ಇದು ಮಾಳ ಗ್ರಾಮದ ದರ್ಗುಗುಡ್ಡೆ ಕಾಲನಿಯ ನಿವಾಸಿಗಳ ಅಳಲಾಗಿದೆ.

Advertisement

ಇಲ್ಲಿನ ಕಾಲನಿಯಲ್ಲಿ ಸಮರ್ಪಕ ಚರಂಡಿ ಇಲ್ಲದೆ ಸುಮಾರು 30ರಷ್ಟು ಪರಿಶಿಷ್ಟ ಜಾತಿ-ಪಂಗಡದ ಕಾಲನಿಯ ನಿವಾಸಿಗಳು ಮಳೆಗಾಲದಲ್ಲಿ ಸಂಕಟ ಪಡುವಂತಾಗಿದೆ. ಮಳೆ ನೀರು ತುಂಬಿ ಅಂಗಳ ಕೆರೆಯಂತಾಗುತ್ತದೆ.
ಮನೆಯಂಗಳದಲ್ಲಿ ಮಳೆ ನೀರು ಸಂಗ್ರಹ ಇನ್ನೇನು ಮಳೆಗಾಲ ಆರಂಭದ ಹೊತ್ತು; ಚರಂಡಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ಇನ್ನೂ ಕಾಲನಿಯಲ್ಲಿ ಕಲ್ಪಿಸಲಾಗಿಲ್ಲ. ಇಳಿಜಾರು ಪ್ರದೇಶದಲ್ಲಿ ಮಳೆ ನೀರು ನಿಂತು ಈ ಮನೆಗಳ ಅಂಗಳದಲ್ಲಿ ಸಂಗ್ರಹಗೊಂಡು ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಗ್ರಾ.ಪಂ.ಗೆ ಕಾಲನಿಯ ಜನರು ಹಲವು ಬಾರಿ ಗಮನ ಸೆಳೆದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಪರಿಶೀಲನೆಗೆ ಬಂದ ಅಧಿಕಾರಿಗಳು ಸಮಸ್ಯೆ ಆಲಿಸಿ ಹೋಗುತ್ತಾರೆ. ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕಾಲನಿ ನಿವಾಸಿಗಳು. ಮಳೆ ನೀರು ಕೊಳಚೆ ನೀರಿನೊಂದಿಗೆ ಸೇರಿ ಮನೆ ಅಂಗಳದಲ್ಲಿ ಹೆಚ್ಚಾದರೆ ಮನೆ ಒಳಗೂ ತುಂಬಿ ಹರಿಯುತ್ತದೆ. ಇದು ಮತ್ತಷ್ಟು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ನಿವಾಸಿಗಳು.

ಚರಂಡಿ ಸಮಸ್ಯೆಗೆ ಮುಕ್ತಿ ಸಿಗಲಿ
ಕಾಲನಿಗಳಲ್ಲಿ ಮಕ್ಕಳು, ವಯಸ್ಸಾದವರು ವಾಸವಿದ್ದು ಚರಂಡಿ ಸಮಸ್ಯೆಯಿಂದ ಇವರ ನೆಮ್ಮದಿಗೂ ಕಂಟಕವಾಗುತ್ತದೆ. ಎತ್ತರ ಪ್ರದೇಶ ದಿಂದ ಮಳೆ ನೀರಿನ ಜತೆ ಕಲ್ಲು, ಮಣ್ಣುಗಳು ಸೇರಿ ಹರಿದು ಬಂದು ಅಂಗಳದಲ್ಲಿ ಸಂಗ್ರಹವಾಗುತ್ತದೆ. ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಕಾಲನಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯ ಅಗತ್ಯವಿದೆ.

ಮಾಳ ಚೌಕಿ, ಮಲ್ಲಾರು ರಸ್ತೆ ಬದಿಯಲ್ಲಿ ಈ ಕಾಲನಿಯಿದ್ದು ರಸ್ತೆ ಬದಿಯಲ್ಲೆ ಕೆಲವು ಮನೆಗಳಿವೆ. ಈ ಕಾಲನಿಗೆ ವಿದ್ಯುತ್‌, ಕುಡಿಯುವ ನೀರು ಮೊದಲಾದ ಮೂಲ ಸೌಕರ್ಯ ತಲುಪಿವೆ. ಕೆಲವೊಂದಷ್ಟು ಮನೆಗಳು ಹಳೆಯದಾಗಿದ್ದು ಹೊಸ ಮನೆಕಟ್ಟಲು ಯೋಜನೆಗಳಿಗೆ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಕೆಲವೊಂದು ಮನೆಗಳು ಪೂರ್ಣಗೊಂಡಿವೆ. ಕಾಲನಿ ಅಭಿವೃದ್ಧಿ ಆಗಿದೆ. ಆದರೆ ಅವರನ್ನೆಲ್ಲ ಕಾಡುವ ಒಂದೇ ಒಂದು ಸಮಸ್ಯೆ ಎಂದರೆ ಮಳೆಗಾಲದಲ್ಲಿ ಅಂಗಳ, ಮನೆಗಳಿಗೆ ನುಗ್ಗುವ ಕೃತಕ ನೆರೆ.

ಗಮನಕ್ಕೆ ತರಲಾಗುವುದು
ಕಾಲನಿಯ ಚರಂಡಿ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಪಂಚಾಯತ್‌ನಿಂದ ಸಮಾಜ ಕಲ್ಯಾಣ ಇಲಾಖೆಗೆ ಬರೆದುಕೊಳ್ಳಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಗಮನಕ್ಕೆ ತರಲಾಗುವುದು.
-ರಘುನಾಥ್‌,
ಪಿಡಿಒ ಮಾಳ ಗ್ರಾ.ಪಂ.

Advertisement

ಇದುವರೆಗೂ ಸರಿಪಡಿಸಿಲ್ಲ
ಪ್ರತೀ ಬಾರಿ ಚುನಾವಣೆ ಬಂದಾಗ ಮತ ಹಾಕಿ ಬರುತ್ತೇವೆ. ಮತ ಕೇಳಲು ಬರುವವರಲ್ಲಿ ನಮ್ಮ ಸಮಸ್ಯೆ ಹೇಳುತ್ತಲೇ ಬಂದಿದ್ದೇವೆ. ಮಳೆಗಾಲದಲ್ಲಿ ಅನುಭವಿಸುವ ಸಂಕಟವನ್ನು ಅವರಲ್ಲಿ ನಿವೇದಿಸಿದ್ದೇವೆ. ಆದರೆ ಇದುವರೆಗೂ ಸರಿಪಡಿಸಿಲ್ಲ.
-ನಾದೇಲು (ವೃದ್ಧೆ)
ಕಾಲನಿ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next