ಮೈಸೂರು: ಕಾಂಗ್ರೆಸ್ ಮುಳುಗುವ ಪಕ್ಷ. ಅಭ್ಯರ್ಥಿಗಳೂ ಇಲ್ಲ, ಜನರ ಬೆಂಬಲವೂ ಇಲ್ಲ. ಬಿಜೆಪಿಯಲ್ಲಿ ತಿರಸ್ಕಾರಗೊಂಡವರು ಅಲ್ಲಿ ಪುರಸ್ಕಾರಗೊಳ್ಳುತ್ತಾರೆ. ಆದರೆ ಅಲ್ಲಿ ತಿರಸ್ಕಾರಗೊಳ್ಳುವವರು ನಮ್ಮಲ್ಲಿ ಪುರಸ್ಕಾರಗೊಳ್ಳಲ್ಲ. ಯಾಕಂದರೆ ನಮ್ಮಲ್ಲಿ ಓವರ್ ಫ್ಲೋ ಇದೆ. ನಮ್ಮಿಂದ ಯಾರು ಹೋಗುತ್ತಾರೆಂದು ಬಾಗಿಲಲ್ಲಿ ಕಾದು ಕುಳಿತಿರುತ್ತಾರೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಟ್ರಾಂಗ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಲೇವಡಿ ಮಾಡಿದರು.
ವೀಕ್ ಸಿಎಂ, ವೀಕ್ ಪಾರ್ಟಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸೌಂಡ್ ಇಲ್ಲ. ಬರೀ ಭ್ರಷ್ಟಾಚಾರ, ಲೂಟಿಯಷ್ಟೇ ನಡೆಯುತ್ತಿದೆ. ಅವರ ಪಕ್ಷದವರೇ ನಾನು ಸಿಎಂ ಆಗುತ್ತೇನೆ, ಮಂತ್ರಿಯಾಗುತ್ತೇನೆಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ನಿಯಂತ್ರಣವಿಲ್ಲ ಎಂದರು.
ಮಂಡ್ಯ ಟಿಕೆಟ್ ಮೈತ್ರಿ ಕಗ್ಗಂಟು ವಿಚಾರವಾಗಿ ಮಾತನಾಡಿ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ. ಪಕ್ಷದ ತೀರ್ಮಾನಕ್ಕೆ ಸುಮಲತಾ ಬದ್ದ ಎಂದು ಹೇಳಿದ್ದಾರೆ. ಕುಮಾರಸ್ವಾಮಿ, ದೇವೇಗೌಡರು ಮೈತ್ರಿ ಒಗ್ಗಟ್ಟಿನ ಮಾತು ಹೇಳಿದ್ದಾರೆ. ಎರಡು ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲವಿದೆ. ಟಿಕೆಟ್ ಸಿಗದಿದ್ದಾಗ ನೋವು ಬೇಸರ ಸಹಜ. ಹೀಗೆಂದು ದುಡುಕಬಾರದು, ಪಕ್ಷ ತಾಯಿ ಇದ್ದಂತೆ ಎಂದರು.
ಬಿಜೆಪಿ ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿದೆಯೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದಾರೆ. ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಕುಟುಂಬದ ಹಿಡಿತದಲ್ಲಿದೆ ಎನ್ನುವುದದು ಸುಳ್ಳು ಎಂದರು.
ಧಾರ್ಮಿಕ ದತ್ತಿ ವಿದೇಯಕ ರಾಜ್ಯಪಾಲರು ವಾಪಸ್ ಕಳುಹಿಸಿದ ವಿಚಾರಕ್ಕೆ ಮಾತನಾಡಿದ ಅಶ್ವಥ್ ನಾರಾಯಣ, ರಾಜ್ಯಪಾಲರ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ. ಆಯಾ ದೇವಸ್ಥಾನದ ಆದಾಯ ಅದೇ ದೇವಸ್ಥಾನಕ್ಕೆ ಬಳಕೆಯಾಗಲಿ. ಸರ್ಕಾರ ಉಳಿದ ದೇವಸ್ಥಾನಗಳಿಗೆ ಅನುದಾನ ನೀಡಲಿ ಎಂದರು.