Advertisement

ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ 3 ತಿಂಗಳು ಅಕ್ಕಿ

11:43 AM Apr 16, 2020 | Sriram |

 ವಿಶೇಷ ವರದಿ-ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿರಾಶ್ರಿತರು, ದುರ್ಬಲ ವರ್ಗದವರಿಗೆ ಆಹಾರ ಭದ್ರತೆ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಸರಕಾರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಆಹಾರ ಧಾನ್ಯ ವಿತರಿಸುವ ಯೋಜನೆ ಸಿದ್ಧಪಡಿಸಿಕೊಂಡಿದೆ.

Advertisement

ಬಿಪಿಎಲ್‌, ಎಪಿಎಲ್‌, ಎಎವೈ ಕುಟುಂಬಗಳ ಹೊರತಾಗಿ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಈ ವರೆಗೆ ಕಾರ್ಡ್‌ ಸಿಗದ ಕುಟುಂಬಗಳಿಗೂ ಆಹಾರ ಧಾನ್ಯ ವಿತರಿಸುವ ರಾಜ್ಯ ಸಚಿವ ಸಂಪುಟದ ತೀರ್ಮಾನದಂತೆ ಆಹಾರ ಇಲಾಖೆ ಮೂರು ತಿಂಗಳ ಮಟ್ಟಿಗೆ ಅಕ್ಕಿ ನೀಡಲು ರೂಪುರೇಷೆ ಹಾಕಿಕೊಂಡಿದೆ.

ಅದರಂತೆ, 2019ರ ನವೆಂಬರ್‌ನಿಂದ ಈ ವರೆಗೆ ಬಿಪಿಎಲ್‌ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ 1,88,152 ಅರ್ಜಿದಾರರಿಗೆ ಮತ್ತು ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ 1,09,317 ಅರ್ಜಿದಾರರ ಪೈಕಿ ಪಡಿತರ ಪಡೆಯಲು ಇಚ್ಛೆ ವ್ಯಕ್ತಪಡಿಸಿರುವ 61,233 ಅರ್ಜಿದಾರರಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ನೀಡಲು ಆಹಾರ ಇಲಾಖೆ ಎ. 11ರಂದು ಆದೇಶ ಹೊರಡಿಸಿದೆ.

ಅಕ್ಕಿ ಖರೀದಿ ಪ್ರಕ್ರಿಯೆ ಹಾಗೂ ರೇಷನ್‌ ಕಾರ್ಡ್‌ಗೆ ಸಲ್ಲಿಸಿರುವ ಅರ್ಜಿಗಳ ಆಧಾರ್‌ ದೃಢೀಕರಣ, ಇತರ ಪರಿಶೀಲನ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಈ ತಿಂಗಳ ಪಡಿತರ ವಿತರಣೆಯನ್ನು ರಾಜ್ಯಾದ್ಯಂತ ಆರಂಭಿಸಲಾಗು ವುದು ಎಂದು ಆಹಾರ ಇಲಾಖೆಯ
ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಚಾಲ್ತಿಯಲ್ಲಿರುವ ಬಿಪಿಎಲ್‌, ಎಪಿಎಲ್‌, ಎಎವೈ ಕಾರ್ಡ್‌ಗಳಿಗೆ ಕೇಂದ್ರ ಸರಕಾರದ ನಿರ್ಧಾರದಂತೆ ಎರಡು ತಿಂಗಳ ಪಡಿತರವನ್ನು ಏಕಕಾಲಕ್ಕೆ ನೀಡಲಾಗಿದೆ. ಇದಕ್ಕಾಗಿ ಬೇಕಾದ ಅಕ್ಕಿಯನ್ನು ಕೇಂದ್ರ ಸರಕಾರವೇ ಪೂರೈಕೆ ಮಾಡಿದೆ. ಆದರೆ, ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಈ ವರೆಗೆ ರೇಷನ್‌ ಕಾರ್ಡ್‌ ಸಿಗದವರಿಗೆ ಮೂರು ತಿಂಗಳು ಪಡಿತರ ಹಂಚಬೇಕು ಎಂಬುದು ರಾಜ್ಯ ಸರಕಾರದ ತೀರ್ಮಾನವಾಗಿದ್ದು, ಅದರಂತೆ ರಾಜ್ಯ ಸರಕಾರವೇ ಆಹಾರಧಾನ್ಯದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

Advertisement

ಗೋಧಿ ಇಲ್ಲ; ಅಕ್ಕಿ ಮಾತ್ರ
ಬಿಪಿಎಲ್‌ ಕಾರ್ಡ್‌ಗೆ ಅಜಿ ಸಲ್ಲಿಸಿರುವ 1,88,152 ಅರ್ಜಿದಾರರಿಗೆ ಒಂದು ಅರ್ಜಿಗೆ ಒಂದು ತಿಂಗಳಿಗೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡಲಾಗುತ್ತದೆ. ಅದೇ ರೀತಿ ಎಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ 1.09 ಲಕ್ಷ ಅರ್ಜಿದಾರರ ಪೈಕಿ ಪಡಿತರ ಪಡೆದುಕೊಳ್ಳಲು ಇಚ್ಛೆ ವ್ಯಕ್ತಪಡಿಸಿರುವ 61,233 ಅರ್ಜಿದಾರರಿಗೆ ಪ್ರತಿ ಕೆ.ಜಿ.ಗೆ 15 ರೂ. ದರದಲ್ಲಿ 10 ಕೆ.ಜಿ. ಅಕ್ಕಿ ಕೊಡಲಾಗುವುದು. ಆದರೆ ಇವರಿಗೆ ಗೋಧಿ ಕೊಡುವುದಿಲ್ಲ, ಅಕ್ಕಿ ಮಾತ್ರ ಸಿಗಲಿದೆ.

ಎ. 18ರಿಂದ ವಿತರಣೆ?
ರಾಜ್ಯ ಸರಕಾರದ ತೀರ್ಮಾನದಂತೆ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಎಪ್ರಿಲ್‌ನಿಂದ ಜೂನ್‌ವರೆಗೆ ಅಕ್ಕಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಭಾರತೀಯ ಆಹಾರ ನಿಗಮದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ’ಯಡಿ ಕೆ.ಜಿ.ಗೆ 24 ರೂ. ಕೊಟ್ಟು ಅಕ್ಕಿ ಖರೀದಿ ಮಾಡಲಾಗುತ್ತಿದೆ. ಅಂದಾಜು ತಿಂಗಳಿಗೆ 188 ಮೆಟ್ರಿಕ್‌ ಟನ್‌ ಅಕ್ಕಿ ಬೇಕಾಗುತ್ತದೆ. ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ, ಸದ್ಯಕ್ಕೆ ರಾಜ್ಯದ ದಾಸ್ತಾನು ಮಳಿಗೆಗಳಲ್ಲಿರುವ ಅಕ್ಕಿಯನ್ನು ಬಳಸಿಕೊಳ್ಳಲಾಗುತ್ತದೆ. ಸಾಫ್ಟ್ವೇರ್‌ ಸಮಸ್ಯೆ ಸರಿಪಡಿಸಿಕೊಂಡು ಆಧಾರ್‌ ದೃಢೀಕರಣ ಮುಗಿದ ಬಳಿಕ ಒಟಿಪಿ ಮೂಲಕ ಅಕ್ಕಿ ಕೊಡಲಾಗುತ್ತದೆ. ಎ. 18ರ ಅನಂತರ ಅಕ್ಕಿ ಕೊಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಆಹಾರ ಇಲಾಖೆಯ ಅಪರ ನಿರ್ದೇಶಕ ಎಂ.ಸಿ ಗಂಗಾಧರ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next