ಮೊನ್ನೆಗೆ ತುಳುವಿನಲ್ಲಿ 100 ಫಿಲ್ಮ್ ಬಂತು ಎನ್ನುವ ಮೂಲಕ ಕೋಸ್ಟಲ್‌ವುಡ್ ಶತಕದ ದಾಖಲೆ ಬರೆದಿದೆ. ತುಳು ಸಿನೆಮಾ ರಂಗ ಹೆಮ್ಮೆಯಿಂದ ಬೀಗುವ ರೀತಿಯಲ್ಲಿ 100 ಸಿನೆಮಾಗಳು ಬಂದಿದೆಯಾದರೂ, ಇದರಲ್ಲಿ ಕೆಲವು ಸಿನೆಮಾ ಗೆದ್ದು, ಇನ್ನುಳಿದವು ಸಮಾಧಾನ ಹಾಗೂ ಮತ್ತೆ ಕೆಲವು ಸೋಲನ್ನೇ ಅನುಭವಿಸಬೇಕಾಯಿತು. ಸಿನೆಮಾ ರಂಗದಲ್ಲಿ ಇವೆಲ್ಲ ಸಹಜ. ಆದರೆ, ಎಂದೆಂದಿಗೂ ಒಂದು ಸಿನೆಮಾ ಬೇರೆ ಬೇರೆ ಕಾರಣದಿಂದ ನೆನಪಿನಲ್ಲಿ ಉಳಿಯುತ್ತದೆ ಎಂಬುದು ಕೂಡ ಗಮನಾರ್ಹ ಸಂಗತಿ. ಸಿನೆಮಾದ ಕಥೆ, ಸಂಗೀತ, ಹಾಡು, ಚಿತ್ರೀಕರಣ, ನಟರು.. ಹೀಗೆ ನಾನಾ ಕಾರಣದಿಂದಾಗಿ ಕೆಲವು ಸಿನೆಮಾಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಅಂತದ್ದರಲ್ಲಿ ಹಾಡುಗಳ ಮೂಲಕವೇ ಹಲವು ಸಿನೆಮಾಗಳು ಸಾಕಷ್ಟು ನೆನಪುಗಳನ್ನು ಹೊತ್ತುತರುತ್ತದೆ ಎಂಬುದು ವಿಶೇಷ.
ತುಳುವಿನಲ್ಲಿ ಬಂದ ಸಾಕಷ್ಟು ಸಿನೆಮಾಗಳು ಹಾಡಿನ ಮೂಲಕವೇ ನೆನಪು ಮೂಡಿಸಿದೆ. ಅದರಲ್ಲೂ ಮೊದಲ ಸಿನೆಮಾದಿಂದ 50ರ ವರೆಗೆ ಬಂದ ಸಿನೆಮಾಗಳ ಪಟ್ಟಿಯನ್ನು ನೋಡಿದರೆ ಎವರ್‌ಗ್ರೀನ್ ಹಾಡುಗಳು ಕಿವಿಯನ್ನು ತಂಪಾಗಿಸುತ್ತದೆ. ಆ ಹಾಡುಗಳು ಎಂದೆಂದಿಗೂ ಮರೆಯಲಾರದ ಹಾಡುಗಳು. ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಸೇರಿದಂತೆ ಸಂಗೀತ ಶ್ರೇಷ್ಠರ ಸ್ವರ ತುಳು ಸಿನೆಮಾದಲ್ಲಿದೆ. ವಿಶೇಷವೆಂದರೆ ಆ ಹಾಡುಗಳು ಇವತ್ತಿಗೂ ಜೀವಂತಿಕೆಯಾಗಿದೆ ಎಂಬುದು ನಿಜಕ್ಕೂ ತುಳು ಸಿನೆಮಾದ ಹಾಡಿನ ಹಿರಿಮೆ.
‘ಎನ್ನ ಮಾಮಿನ ಮಗಲ್ ಮೀನನ…’ನಿಕ್ಕಾದೆ ಯಾನ್ ದುಂಬಿಯಾದ್ ಬರ್ಪೆ .. ಹೀಗೆಂದು ಹಾಡುತ್ತ ತುಳುಚಿತ್ರದಲ್ಲಿ ತನ್ನ ಸುಶ್ರಾವ್ಯ ರಾಗದ ಮೂಲಕ ಮನೆ ಮಾತಾದವರು ಪಿ.ಬಿ.ಶ್ರೀನಿವಾಸ್. ‘ಅನ್ಯಾಯನಾ.. ವಿಚಿತ್ರನಾ.. ಕಲ್ಜಿಗ ದಾನೆ’ ‘ಸಾವಿರಡೊತ್ರಿ ಸಾವಿತ್ರಿ’ ಚಿತ್ರದ ‘ಕಣ್ಣಿತ್ತ್ದ್ ಕೈ ಇತ್ತ್ದ್ ಕಲ್ಲಾಯನ’, ‘ಭಾಗ್ಯವಂತೆದಿ’ ಚಿತ್ರದ ‘ಎನ್ನ ಮಾಮಿನ ಮಗಲ್ ಮೀನನ..’ ಹಾಡುಗಳು ಎವರ್‌ಗ್ರೀನ್. ‘ಬಯ್ಯ ಮಲ್ಲಿಗೆ’ ಚಿತ್ರದ ‘ಬ್ರಹ್ಮನ ಬರವು ಮಾಜಂದೆ ಪೋಂಡ.. ಗುಮ್ಮನ ಗೊಬ್ಬು ಇನಿ ಸುರು ಆಂಡ್’ ಹಾಡು ಕ್ಲಿಕ್ ಆಗಿತ್ತು.’ಬೊಳ್ಳಿದೋಟ’ ಚಿತ್ರದ ‘ದಾನೆ ಪೊಣ್ಣೆ ನಿನ್ನ ಮನಸೆಂಕ್ ತೆರಿಯಂದೆ ಪೋಂಡಾ’, ಕೋಟಿ ಚೆನ್ನಯ ಚಿತ್ರದ ‘ಜೋಡು ನಂದಾ ದೀಪ ಬೆಳಗ್‌ಂಡ್’ ಹಾಡು ಸುಶ್ರಾವ್ಯವಾಗಿಯೇ ಮೂಡಿಬಂದಿದೆ. ಎಸ್‌ಪಿ.ಬಾಲಸುಬ್ರಹ್ಮಣ್ಯಂ ಅವರು ‘ಪಗೆತ ಪುಗೆ’ ಸಿನೆಮಾದ ಮೂಲಕ ತುಳುವಿನಲ್ಲಿ ಗಾನಸುಧೆ ಹರಿಸಿದವರು. ‘ಮೋಕೆದ ಸಿಂಗಾರಿ ಉಂತುದೆ ವೈಯ್ನಾರಿ’, ‘ಸಂಗಮ ಸಾಕ್ಷಿ’ ಚಿತ್ರದ ‘ಉಪ್ಪು ನೀರ್ ಅಂಚಿಗ್.. ಸುದೆತ ಚಪ್ಪೆ ನೀರ್ ಇಂಚಿಗ್’ ಎಂದೆಂದಿಗೂ ಎವರ್‌ಗ್ರೀನ್. ‘ಪಕ್ಕಿಲು ಮೂಜಿ ಒಂಜೇ ಗೂಡುಡು ನಲಿತೊಂದುಂಡುಗೆ’ ಸೇರಿದಂತೆ ಹಲವು ತುಳು ಹಾಡುಗಳು ಈಗಲೂ ಆಲಿಸಲು ಸುಮಧುರ. ‘ಉಡಲ್ದ ತುಡರ್’ ಚಿತ್ರದ ಮೂಲಕ ಜೇಸುದಾಸ್ ಕಂಠಸಿರಿ ನೀಡಿದ್ದಾರೆ. ಎಸ್.ಜಾನಕಿ, ವಾಣಿ ಜಯರಾಂ ಸೇರಿದಂತೆ ದೊಡ್ಡ ದಂಡೇ ತುಳುವಿನಲ್ಲಿ ಗಾನಸುಧೆ ಹರಿಸಿದೆ.
ಪಗೆತ ಪುಗೆ ಸಿನೆಮಾದಲ್ಲಿ ‘ಮೋಕೆದ ಸಿಂಗಾರಿ ಉಂತುದೆ ವೈಯಾರಿ’, ಬಿಸತ್ತಿ ಬಾಬು ಸಿನೆಮಾದ ‘ಅನ್ಯಾಯನಾ ವಿಚಿತ್ರನಾ ಕಲ್ಜಿಗ ಕಾಲ’, ಉಡರ್ದ ತುಡರ್ ಸಿನೆಮಾದಲ್ಲಿ ‘ಉಡಲ್ದ ತುಡಾರ್‌ಗ್ ಮನಸ್ ಉರ್ಕರು’ ಹಾಡುಗಳು ಇಂದಿಗೂ ಜೀವಂತವಾಗಿದೆ. ಕೋಟಿ ಚೆನ್ನಯದ ‘ಎಕ್ಕ ಸಕ ಎಕ್ಕ ಸಕ ಎಕ್ಕ ಸಕ್ಕಲಾ’ ಸೇರಿದಂತೆ ಎಲ್ಲ ಹಾಡುಗಳು ತುಳು ಭಾಷೆಯ ಸೊಗಡು ಹಾಗೂ ಗಟ್ಟಿತನವನ್ನು ಎತ್ತಿತೋರಿಸಿದೆ. ಬಯ್ಯ ಮಲ್ಲಿಗೆಯ ‘ಬ್ರಹ್ಮನ ಬರವು ಮಾಜಂದೆ ಪೋವಾ,’ ತುಳುನಾಡ ಸಿರಿ ಸಿನೆಮಾದ ‘ತಂಕರಕ್ಕನ ತಾಳಿ ಬಂದಿ’, ಬೊಳ್ಳಿದೋಟ ಸಿನೆಮಾದ ‘ಪರಶುರಾಮನ ಕುಡರಿಗ್ ಪುಟ್ಟಿನ ತುಳುನಾಡ್’, ನ್ಯಾಯೊಗು ಜಿಂದಾಬಾದ್ ಸಿನೆಮಾದ ‘ದಾನೇದೆ ಲಕ್ಷ್ಮೀ ಪಾತೆರುಜಾ ದಾನೆ’, ಸಂಗಮ ಸಾಕ್ಷಿಯ ‘ಉಪ್ಪು ನೀರ್ ಅಂಚಿಗ್ ಸುದೆತಾ ಚಪ್ಪೆ ನೀರ್ ಇಂಚಿಗ್’, ಭಾಗ್ಯವಂತೆದಿ ಸಿನೆಮಾದ ‘ಎನ್ನ ಮಾಮಿನ ಮಗಲ್ ಮೀನನ’, ದಾರೆದ ಸೀರೆ ಸಿನೆಮಾದ ‘ಸೃಷ್ಠಿ ಐತ ಆದ್ ಇನಿ ಮದಿಮಾಲೆ ರೂಪೊಡು’, ಸತ್ಯ ಓಲುಂಡು ಸಿನೆಮಾದಲ್ಲಿ ‘ಈ ಬನ್ನಗ ಅರಳು ಮಲ್ಲಿಗೆ’, ಬಂಗಾರ್ ಪಟ್ಲೆರ್ ಸಿನೆಮಾದ ‘ಗಿರಿ ಕ್ಷೇತ್ರ ತಿಮ್ಮಪ್ಪ ತಿರುಮಲೆತ’, ಕಡಲ ಮಗೆಯ ‘ಕಡಲ್‌ದ ಮಗ ನಿಕ್ಕ್ ಉಡಲ್‌ದ ಸೊಲ್ಮೆಲು’, ಒರಿಯರ್ದೊರಿ ಅಸಲ್ ಸಿನೆಮಾದಲ್ಲಿ ‘ಎನ್ನ ಪಾಲ್‌ಗೆಂದೇ ಆಯೆ ನಿನನ್ ಸೃಷ್ಟಿ ಮಲ್ತೆನಾ’, ಬರ್ಕೆ ಸಿನೆಮಾದಲ್ಲಿ ‘ಖುಷಿಯಾದ್ ರಾದ್ ರಾದ್ ಪೋಂಡು ಈ ಜೀವ’ ಹೀಗೆ ಒಂದಕ್ಕೊಂದು ಹಾಡುಗಳು ಎವರ್‌ಗ್ರೀನ್.
ಇದು 50ರ ಒಳಗಿನ ಸಿನೆಮಾದ ಹಾಡಿನ ಕಥೆಯಾದರೆ, ಆ ಬಳಿಕ ಬಂದ 50 ಸಿನೆಮಾಗಳು ಇನ್ನಷ್ಟು ಹೊಸ ಹಾಡುಗಳ ಮೂಲಕವೇ ಕೋಸ್ಟಲ್ ವುಡ್‌ನಲ್ಲಿ ಸಾಕಷ್ಟು ಗೌರವ ಪಡೆದುಕೊಂಡಿತು. ಬಹುತೇಕ ಹಾಡುಗಳು ಇಂದಿಗೂ ಮನೆಮಾತಾಗಿದೆ.