ಲಕ್ನೋ : ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದೊಂದಿಗೆ ಹಲವಾರು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳಿಗೆ “ದಿನಕ್ಕೆ 18ರಿಂದ 20 ತಾಸು ಕಾಲ ದುಡಿಯಿರಿ; ಇಲ್ಲವೇ ಬಿಟ್ಟುಹೋಗಿ’ ಎಂದು ಅಪ್ಪಣೆ ಕೊಟ್ಟಿದ್ದಾರೆ.
“ಸರಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನಷ್ಠಾನಿಸುವಲ್ಲಿ ಅಧಿಕಾರಿಗಳು ತೋರುವ ನಿರ್ಲಕ್ಷ್ಯ, ಅಸಡ್ಡೆಯನ್ನು ಎಷ್ಟು ಮಾತ್ರಕ್ಕೂ ಸಹಿಸಲಾಗುವುದಿಲ್ಲ. ದಿನಕ್ಕೆ 18ರಿಂದ 20 ತಾಸು ಕೆಲಸ ಮಾಡಲು ಸಿದ್ಧರಿರುವ ಅಧಿಕಾರಿಗಳು ಮಾತ್ರವೇ ಸರಕಾರದಲ್ಲಿ ಮುಂದುವರಿಯಬಹುದು; ಇಲ್ಲವೇ ಕೆಲಸ ಬಿಟ್ಟು ಹೋಗಲು ಅವರು ಸ್ವತಂತ್ರರಿರುತ್ತಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದಲ್ಲಿನ ತಮ್ಮ ನಿವಾಸದಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಆದ ಬಳಿಕ ನಿನ್ನೆ ಭಾನುವಾರ ಮೊದಲ ಬಾರಿಗೆ ತಮ್ಮ ಸಂಸದೀಯ ಕ್ಷೇತ್ರಕ್ಕೆ ಆದಿತ್ಯನಾಥ್ ಭೇಟಿಕೊಟ್ಟರು.
“ನಾನು ದಣಿವರಿಯದ ಕೆಲಸಗಾರ. ಅಧಿಕಾರಿಶಾಹಿ ಕೂಡ ಕಠಿನ ಪರಿಶ್ರಮದಿಂದ ದುಡಿಯಬೇಕು. ಕಠಿನವಾಗಿ ದುಡಿಯುವವರು ಸರಕಾರದೊಂದಿಗೆ ಮುಂದುವರಿಯಬಹುದು; ಕೆಲಸ ಮಾಡಲು ಬಯಸದವರು ಬಿಟ್ಟುಹೋಗಬಹುದು’ ಎಂದು ಯೋಗಿ ಹೇಳಿದರು.
ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ ಮುಖ್ಯಮಂತ್ರಿ ಆದಿತ್ಯನಾಥ್, “ನಮ್ರತೆಯಿಂದ ಕೆಲಸ ಮಾಡಿ; ನಿಮ್ಮ ಹುದ್ದೆ – ಅಧಿಕಾರವನ್ನು ದುರಪಯೋಗಿಸಬೇಡಿ’ ಎಂದು ಹೇಳಿದರು.
ಸಚಿವ ಸಂಪುಟ ಸಭೆಯನ್ನು ಇನ್ನಷ್ಟೇ ನಡೆಸಬೇಕಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಈಗಾಗಲೇ ಒಬ್ಬಂಟಿಯಗಿ ಐವತ್ತಕ್ಕೂ ಹೆಚ್ಚು ನಿರ್ಧಾರಗಳನ್ನು ತೆಗೆದುಕೊಂಡಿರವುದಾಗಿ ಮೂಲಗಳು ತಿಳಿಸಿವೆ.