Advertisement

ಮಾತಾಡದೇ ಕುಳಿತಿದ್ದ ಆ ಕ್ಷಣಗಳು…

08:04 PM Sep 08, 2020 | Suhan S |

ನಿನ್ನೊಂದಿಗೆ ವಾಟ್ಸಪ್ಪಿನಲ್ಲಿ, ಫೋನಿನಲ್ಲಿ ಪುರುಸೊತ್ತಿಲ್ಲದೆ ವಟಗುಟ್ಟುವ ನನಗೆ, ಅಂದು ನೀನು ಎದುರಿಗೆ ನಿಂತಾಗ ಮಾತುಗಳೆಲ್ಲ ಇಂಗಿ ಹೋದವೇನೋ ಎಂಬಂಥ ಅನುಭವ. ಏನೋ ಹೇಳಬೇಕು, ಏನೆಲ್ಲ ಮಾತನಾಡಬೇಕು, ಮನದಣಿಯೆ ನಿನ್ನನ್ನು ಕಾಡಬೇಕು ಎಂದೆಲ್ಲ ಲೆಕ್ಕಾಚಾರದಲ್ಲಿದ್ದ ನಾನು, ಅಂದು ಅಕ್ಷರಶಃ ಮೂಕಿಯಾಗಿದ್ದೆ. ಮಾತುಗಳೆಲ್ಲ ಮರೆತು ಹೋದಂತಾ ಗಿತ್ತು. ನಿನ್ನ ಕಣ್ಣುಗಳಲ್ಲಿನ ಆರಾಧನಾ ಭಾವಕ್ಕೆ ಎಲ್ಲಿ ಸೋತುಹೋಗುವೆನೋ ಎನ್ನುವ ಆತಂಕ ಮನೆಮಾಡಿತ್ತು. ನಕ್ಷತ್ರಗಳಂತೆ ಹೊಳೆಯುವ ಅವುಗಳ ಕಾಂತಿ, ಬೆಳದಿಂಗಳನ್ನೂ ಮೀರಿಸುವಂತಿತ್ತು.

Advertisement

ಆ ಕೋಲ್ಮಿಂಚಿಗೆ ತತ್ತರಿಸಿದ ಕಂಗಳು, ಮತ್ತೆ ನಿನ್ನನ್ನು ಕಣ್ಣೆತ್ತಿ ನೋಡುವ ಸಾಹಸಕ್ಕ ಇಳಿಯಲೇ ಇಲ್ಲ. ಇಬ್ಬರೂ ಮೌನದಿಂದ ಹಾಕುತ್ತಿದ್ದ ಹೆಜ್ಜೆಗಳು, ಮಾತಿಗಿಂತ ಹಿತಕರವಾಗಿದ್ದವು. ಹನಿಯುತ್ತಿದ್ದ ಮಳೆ ಹನಿಗಳು ಇಬ್ಬರನ್ನೂ ಸಣ್ಣಗೆ ತೋಯಿಸಿ ಒಂದು ರೀತಿಯ ಕಂಪನ, ಎದೆಯೊಳಗೊಂದು ರೋಮಾಂಚನ ಮೂಡಿಸುತ್ತಿದ್ದವು. ನನ್ನಿಷ್ಟದ ಪಾರಿಜಾತದ ಮರದ ಕೆಳಗಿನ ಹಾಸಿನ ಮೇಲೆ ಇಬ್ಬರೂ ಕುಳಿತೆವು. ಇದ್ದಕ್ಕಿದ್ದಂತೆ ನೆಲಕ್ಕೆ ಬೀಳುವ ಪಾರಿಜಾತದ ಹಾಗೆ ನಾನು ಕುಳಿತಿದ್ದರೆ, ಅದರ ಅಂದವನ್ನು ಮನದಣಿಯೇ ಕಣ್ತುಂಬಿಕೊಳ್ಳುತ್ತಿದ್ದೆ ನೀನು! ಇಬ್ಬರ ನಡುವೆ ಮಾತಿಲ್ಲ, ಕತೆಯಿಲ್ಲ. ಜಗತ್ತು ಹೀಗೆಯೇ ನಿಲ್ಲಬಾರದಾ ಎನಿಸಿದ್ದು ಸುಳ್ಳಲ್ಲ. ಮೌನ ಸಂಭಾಷಣೆಯಲ್ಲಿ ಹೊತ್ತು ಮುಳುಗಿದ್ದೇಗೊತ್ತಾಗಲಿಲ್ಲ. ವಿದಾಯಕ್ಕೂ ಮುನ್ನ ಆಡದೇ ಉಳಿದ ಮಾತುಗಳು ಅದೆಷ್ಟೋ. ಅವುಗಳಿಗೆ ದನಿಯಾಗುವ ಘಳಿಗೆಗಾಗಿ ಕಾಯುತ್ತಿದ್ದೇನೆ. ಯಾಕೋ ಮೊದಲ ಭೇಟಿ

ಅಪೂರ್ಣ ಎನಿಸಿ, ನಿನಗೆ ಕರೆ ಮಾಡಿದಾಗ ಬಿಜಿ ಟೋನ್‌ ಬೀಪ್‌ ಬೀಪ್‌ ಕೇಳುತ್ತಲೇ ಇತ್ತು. ಅದೇ ಸಮಯಕ್ಕೆ ನೀನೂ ಸಹ ನನ್ನಂತೆಯೇ ನನಗೆ ಕರೆಮಾಡುತ್ತಿದ್ದೆ ಅಂತಾ ಗೊತ್ತಾದಾಗ ಗುದ್ದಿ ಬಿಡುವಷ್ಟು ಕೋಪ, ಅತ್ತುಬಿಡುವಷ್ಟು ಪ್ರೀತಿ ಉಕ್ಕಿತ್ತು. ಮತ್ತೂಮ್ಮೆ ನಿನ್ನೊಡನೆ ದೂರದವರೆಗೆ ಮೌನಹೆಜ್ಜೆ ಹಾಕುವ ಆ ಸುಮಧುರ ಘಳಿಗೆಗಾಗಿ ಕಾಯುತ್ತಿರುವೆ.

 

-ನಳಿನಿ. ಟಿ. ಭೀಮಪ್ಪ, ಧಾರವಾಡ

Advertisement
Advertisement

Udayavani is now on Telegram. Click here to join our channel and stay updated with the latest news.

Next