Advertisement

ಬಾಲಲೀಲೆಯ ಪ್ರಸಂಗಗಳು

12:49 PM Oct 17, 2019 | mahesh |

ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ಬ್ಯಾಗ್‌ ಹಾಕಿಕೊಂಡು ಶಾಲೆಗೆ ಹೋಗುವ ಮಕ್ಕಳನ್ನು ನೋಡುವಾಗ, ನನಗೆ ನನ್ನ ಶಾಲಾ ಜೀವನದ ಆ ಸುಂದರ ಕ್ಷಣಗಳ ನೆನಪಾಗುತ್ತದೆ. ಬಾಲ್ಯದ ಆ ದಿನಗಳು ಅದೆಷ್ಟು ಬೇಗ ಕಳೆದುಹೋಯಿತಲ್ಲವೆ? “ಕಾಲವನ್ನು ತಡೆಯೋರು ಯಾರೂ ಇಲ್ಲ’ ಎಂಬ ಪದ್ಯದ ಸಾಲುಗಳು ಅಕ್ಷರಶಃ ನಿಜ. ಮತ್ತೂಮ್ಮೆ ಆ ಬಾಲ್ಯ ಜೀವನ ಬರಬಾರದೆ? ಎಂದು ಅದೆಷ್ಟೋ ಸಲ ಅನಿಸುತ್ತದೆ. ಆದರೆ ಆ ದಿನಗಳ ಮೆಲುಕು ಹಾಕುವುದೊಂದೇ ಈಗ ಸಾಧ್ಯ. ಹಾಗಾಗಿ, ಈ ಲೇಖನದ ಮೂಲಕ ನನ್ನೆಲ್ಲ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ.

Advertisement

ಸುಮಾರು 17 ವರುಷಗಳ ಹಿಂದಿನ ಮಾತು. ಜೂನ್‌ 1ರ ಶುಭದಿನ ದಂದು ನನ್ನನ್ನು ನಮ್ಮ ಬೆಳ್ಳಂಪಳ್ಳಿಯ ಜೈಹಿಂದ್‌ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸುವ ಪ್ರಸಂಗ. ನಮ್ಮ ಶಾಲೆಗೆ ಜೈಹಿಂದ್‌ ಎಂಬ ಹೆಸರು ಬರಲು ಕಾರಣ, ಸ್ವಾತಂತ್ರ್ಯ ಹೋರಾಟದ ಆ ಸಂದರ್ಭದಲ್ಲಿ ಶಾಲೆಯ ಸ್ಥಾಪನೆಯಾಗಿರುವುದರಿಂದಾಗಿ ಜೈಹಿಂದ್‌ ಎಂಬ ಹೆಸರನ್ನು ಇಡಲಾಗಿದೆ. ಈ ಸುಂದರ ಶಾಲೆಗೆ ನನ್ನನ್ನು ಸೇರಿಸುವ ಪ್ರಯುಕ್ತ ನಾಲ್ಕು ದಿನ ಮೊದಲೇ ನನ್ನ ತಂದೆ ಬ್ಯಾಗ್‌, ರೈನ್‌ಕೋಟ್‌, ಸ್ಲೇಟು, ಬಳಪ ತಂದುಕೊಟ್ಟಿದ್ದರು. ನಮ್ಮದು ಕೃಷಿ ಕುಟುಂಬ. ಜೂನ್‌ ತಿಂಗಳಾಗಿರುವುದರಿಂದಾಗಿ ನನ್ನ ತಂದೆ ಗದ್ದೆ ಯಲ್ಲಿ “ನೇಗಿಲು ಹಿಡಿದು ಹೊಲದಲಿ ಉಳುವ ಯೋಗಿಯ ನೋಡಲ್ಲಿ’ ಎಂಬಂತೆ ಕೃಷಿ ಕೆಲಸದಲ್ಲಿ ಮಗ್ನರಾಗಿದ್ದರು. ಹಾಗಾಗಿ, ನನ್ನ ಅಕ್ಕ ನನ್ನನ್ನು ಶಾಲೆಗೆ ಸೇರಿಸುವ ಕಾರ್ಯಕ್ರಮ. ಮನಸ್ಸಿಲ್ಲದ ಮನಸ್ಸಿನಿಂದ ಅಕ್ಕನೊಡನೆ ಶಾಲೆಗೆ ಹೊರಟೆ. ಶಾಲೆಯಲ್ಲಿ ಊಟ ಮಾಡು ಎಂದು ನನ್ನ ಅಮ್ಮ ಬುತ್ತಿಯನ್ನು ಕಟ್ಟಿ ಕೊಟ್ಟಿದ್ದರು.

ನನ್ನ ರೈನ್‌ಕೋಟ್‌, ಬ್ಯಾಗ್‌, ಬುತ್ತಿ ಎಲ್ಲವನ್ನೂ ನನ್ನ ಅಕ್ಕ ಹಿಡಿದುಕೊಂಡು, ನಾನು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಶಾಲೆಗೆ ಹೊರಟೆನು. ಶಾಲೆಗೆ ಸೇರಿಸಿ ಆಯಿತು, ಕ್ಲಾಸ್‌ನಲ್ಲಿ ಕುಳಿತುಕೊಳ್ಳುವಂತೆ ಅಕ್ಕನಲ್ಲಿ ಸೂಚಿಸಿದಾಗ, ನಾನು ಯಾರೋ ಜೋರಾಗಿ ಹೊಡೆದಂತೆ, ಗಟ್ಟಿಯಾಗಿ ಅಳತೊಡಗಿದೆನು. ಗಂಗೆ, ತುಂಗೆ, ಗೋದಾವರಿ ಹಾಗೂ ಎಲ್ಲ ಉಪನದಿಗಳು ಹರಿಯುವಂತೆ, ಕಣ್ಣೀರು ಧಾರಾಕಾರವಾಗಿ ಸುರಿಸಿದಾಗ, ನಮ್ಮ ಶೋಭಾ ಟೀಚರ್‌ಗೆ ಪಾಪ ಅನ್ನಿಸಿತೇನೋ? “ಸರಿ, ನಾಳೆಯಿಂದ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲಿ, ಇವತ್ತು ಮನೆಗೆ ಕರೆದುಕೊಂಡು ಹೋಗಿ’ ಅಂದರು. “ರೋಗಿ ಬಯಸುವುದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಎಂಬಂತೆ ಖುಷಿ ಖುಷಿಯಲ್ಲಿ ನಗುತ್ತ ಮನೆಗೆ ಬಂದೆನು.

ಮರುದಿನ ಮತ್ತೆ ಅಕ್ಕನೊಡನೆ ಶಾಲೆಗೆ ಹೊರಟೆನು. ಆದರೆ, ಇವತ್ತು ಕ್ಲಾಸ್‌ನಲ್ಲಿ ಕುಳಿತುಕೊಂಡೆ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ !

ನನಗೆ ಶಾಲೆಗೆ ಹೋಗಲು ಮನಸ್ಸಿಲ್ಲದೆ, ನಡೆಯಲು ಕಾಲೇ ಬರುತ್ತಿರಲಿಲ್ಲ. ಅಕ್ಕ ನನ್ನ ಪುಟ್ಟ ಕೈಯನ್ನು ಹಿಡಿದುಕೊಂಡು ನಾಯಿಮರಿಯನ್ನು ಎಳೆದುಕೊಂಡು ಹೋಗುವಂತೆ ಬಿರಬಿರನೆ ಹೊರಟರು. ಎಳೆದುಕೊಂಡು ಹೋದ ರೀತಿಯಲ್ಲಿ ಓನ್ಲಿ ಒನ್‌ ಡಿಫ‌ರೆನ್ಸ್‌, ಸರಪಳಿ ಮಾತ್ರ ಇರಲಿಲ್ಲ! ಅರ್ಧ ದಾರಿಗೆ ಬಂದಿದ್ದೆವು. ಅಷ್ಟರಲ್ಲಿ ಅದೆಲ್ಲಿತ್ತೋ, ಒಮ್ಮೆಲೇ ಗಾಳಿಮಳೆ ಪ್ರಾರಂಭವಾಯಿತು. ಅಕ್ಕ ನನ್ನ ಕೈಬಿಟ್ಟು, ಕೊಡೆ ಬಿಡಿಸಲು ಮಗ್ನರಾಗಿದ್ದರೆ, ನಾನು ಸಿಕ್ಕಿದ್ದೇ ಚಾನ್ಸ್‌ ಎಂದು, ಪಿ. ಟಿ. ಉಷಾರವರಂತೆ ಮನೆಗೆ ವಾಪಸು ಓಡಿಬಂದಿದ್ದೆ. ನನ್ನ ಬುತ್ತಿ, ಬ್ಯಾಗ್‌, ರೈನ್‌ಕೋಟ್‌ ಮತ್ತು ಕೊಡೆ ಇವೆಲ್ಲವನ್ನೂ ಕೈಯಲ್ಲಿ ಹಿಡಿದುಕೊಂಡು, ಸೋತ ಭಾವದಲ್ಲಿ ಅಕ್ಕ ಮನೆಗೆ ಬಂದರು. ಅವರಿಗೆ ಪಾಪ, ಒಂದೆಡೆ ನಗಲೂ ಆಗದೇ ಅಳಲೂ ಆಗದೇ ಹತಾಶೆಯ ಭಾವನೆಯಲ್ಲಿ ಅವರಿದ್ದರು. ಆದರೆ, ಹೀಗೆಷ್ಟು ದಿನ?

Advertisement

ಹೆಚ್ಚು ದಿನ ಸಿಗಲೇ ಇಲ್ಲ. ಮರುದಿನ ಇದಕ್ಕೆಲ್ಲ ಬ್ರೇಕ್‌ ಇತ್ತು. ತಂದೆ ನೇಗಿಲನ್ನು ಹಿಡಿದು ಗದ್ದೆಗೆ ಹೋಗುತ್ತಾರೆಂಬ ಲೆಕ್ಕಾಚಾರ ಸುಳ್ಳಾಯಿತು. ಬದಲಿಗೆ ತಂದೆಯೇ ಶಾಲೆಗೆ ಕರೆದುಕೊಂಡು ಹೋಗುವ ಮಹತ್ತರವಾದ ಕೆಲಸವನ್ನು ಶಿರಸಾ ಪಾಲಿಸುವಂತೆ ಕಂಡುಬಂದಿತು. ನನ್ನ ಕೈ ಹಿಡಿದದ್ದು ಬಿಡುವಂತೆ ತೋರಲಿಲ್ಲ. ಸರಿಯಾಗಿ ಅದಕ್ಕೆ ಆವತ್ತು ಮಳೆಯೂ ಬರಲಿಲ್ಲ. ಕೊಡೆ ಬಿಡಿಸಲು ಕೈ ಬಿಟ್ಟರೆ ಒಂದು ಚಾನ್ಸ್‌ ಸಿಗುತ್ತದೆಂಬ ಆಸೆಗೂ ಕಲ್ಲು ಬಿತ್ತು. ಹೀಗೆ ನಾಲ್ಕು ದಿನ ತಂದೆಯೇ ಶಾಲೆಗೆ ಕರೆದುಕೊಂಡು ಬಿಡುತ್ತಿದ್ದರು. ಅಕ್ಕ ಸಂಜೆ ವಾಪಸು ಕರೆದುಕೊಂಡು ಹೋಗಲು ಬರುತ್ತಿದ್ದರು. ಅಂತೂಇಂತೂ ನಾನು ಶಾಲೆಗೆ ಹಠ ಮಾಡದೇ ಹೋಗಲು ಪ್ರಾರಂಭಿಸಿದೆ.

ನಮ್ಮ ಮನೆಯ ಹತ್ತಿರ ದೊಡ್ಡ ಅಕ್ಕಂದಿರು, ಅಣ್ಣಂದಿರ ಒಂದು ಕಪಿ ಸೈನ್ಯವಿತ್ತು. 4 ದಿನದ ನಂತರ ನಾನೂ ಈ ಕಪಿ ಸೈನ್ಯದಲ್ಲಿ ಒಂದು ಬಡ ಕುರಿಮರಿಯಂತೆ ಅವರ ಜೊತೆಗೆ ಶಾಲೆಗೆ ಹೋಗತೊಡಗಿದೆ. ಈ ಗುಂಪಿನಲ್ಲಿ ಎಲ್ಲರಿಗಿಂತ ಚಿಕ್ಕವಳು ನಾನು. ಹಾಗಾಗಿ, ಯಾವಾಗಲೂ ಮೌನ ವ್ರತ ನನ್ನದು. ಹೀಗೆ ಇವರೊಂದಿಗೆ ಶಾಲೆಗೆ ಹೋಗುತ್ತ, ಕ್ರಮೇಣ ನಗುತ್ತ ಸ್ವಲ್ಪ ಸ್ವಲ್ಪ ಮಾತನಾಡುತ್ತ ಒಗ್ಗಿಕೊಂಡೆ.

ಹೀಗಿರಲು, ನಾನಾಗ 3ನೇ ತರಗತಿಯಲ್ಲಿರುವಾಗಿನ ಸಂದರ್ಭ. ಅಂದು ಶನಿವಾರವಾದ್ದರಿಂದ ಮಧ್ಯಾಹ್ನ ಶಾಲೆ ಬಿಟ್ಟಿದ್ದರು. ನಮ್ಮ ಕಪಿಸೈನ್ಯದ ಹಿರಿಮಂಡೆಗಳು “ಬೆಲ್ಲದ ಕ್ಯಾಂಡಿ’ ತೆಗೆದುಕೊಂಡಿದ್ದರು. ನನಗೂ ಒಂದು ಕ್ಯಾಂಡಿ ಸಿಕ್ಕಿತು. ಆದರೆ ಮನೆಯಲ್ಲಿ ಕ್ಯಾಂಡಿ ತಿಂದಿರುವ ವಿಷಯ ಯಾರಿಗೂ ಹೇಳಬಾರದೆಂದು ಕಟ್ಟಾಜ್ಞೆಯಲ್ಲಿ ಹೊರಡಿಸಿಯೇ ನನಗೆ ಕ್ಯಾಂಡಿ ಕೊಟ್ಟಿದ್ದರು. ಕ್ಯಾಂಡಿ ಚೀಪುತ್ತ ನಾಲ್ಕು ಹೆಜ್ಜೆಯೂ ಹೋಗಿರಲಿಲ್ಲ, ಅಷ್ಟರಲ್ಲಿ ನಮ್ಮ ಗುಂಪಿನ ಹರೀಶಣ್ಣನ ತಂದೆ ಬರುತ್ತಿರುವುದು ಕಾಣಿಸಿತು. ಎಲ್ಲರೂ ಗಾಬರಿಯಿಂದ ಕ್ಯಾಂಡಿ ಹೇಗೆ ಅಡಗಿಸಿಡುವುದು ಎಂದು ಗಲಿಬಿಲಿಗೊಂಡು ರೈನ್‌ಕೋಟ್‌, ಯೂನಿಫಾರ್ಮ್ ಸ್ಕರ್ಟ್‌ನಲ್ಲಿ ಕೈಯನ್ನು ಅಡ್ಡ ಹಿಡಿದುಕೊಂಡು ಬಚಾವಾಗಿದ್ದೆವು. ಅವರು ಅತ್ತ ಹೋದದ್ದೇ ತಡ, ಎಲ್ಲರೂ ಪುನಃ ಕ್ಯಾಂಡಿ ನೆಕ್ಕುವ ಪ್ರೋಗ್ರಾಮ್‌ ಶುರು ಹಚ್ಚಿಕೊಂಡೆವು.

ಅನುಷಾ ಎಸ್‌. ಶೆಟ್ಟಿ
ಬಿ. ಎಡ್‌ (ಪ್ರಥಮ ವರ್ಷ)
ಡಾ. ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next