ಬಾಗಿಲ ಪಕ್ಕದ ನೋಟಿಸ್ ಬೋರ್ಡ್ ನನ್ನೆಡೆಗೆ ನೋಡಿ ಇನ್ನಷ್ಟು ಸೆಳೆಯಿತು. ಅಂದು ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶದ ದಿನ. ಕೊಠಡಿಯ ಬಾಗಿಲ ಪಕ್ಕದಲ್ಲಿ ಇನ್ನೇನು ರಿಸಲ್ಟ… ಶೀಟ್’ ಅಂಟಿಸುತ್ತಲೇ, “ಮುರಳಿ, ಯಾಕೋ ಕಡಿಮೆ ಆಯ್ತಲ್ಲ, ಪಾಪ, ನಿನಗೆ ಹುಷಾರಿರಲಿಲ್ಲ ಎಕ್ಸಾಮ್ ಟೈಮಲ್ಲಿ ಎಂದಿದ್ದ ಆ ಧ್ವನಿ ಸ್ವಲ್ಪ ಮಟ್ಟಿಗೆ ಆತಂಕದ ಅಲೆಯನ್ನೇ ಸೃಷ್ಟಿಸಿ ಬಿಟ್ಟಿತು.
ಮುಗಿಲ ಸೆರಗಂಚಲಿ ಮರೆಯಾಗಲು ಹವಣಿಸುತ್ತಿದ್ದ ನೇಸರ. ಆ ಅವಕಾಶಕ್ಕಾಗಿಯೇ ಹೊಂಚು ಹಾರುತ್ತಿದೆಯೇನೋ ಎಂಬಂತೆ ಕಾದಿದ್ದ ತಂಪು ಗಾಳಿಯ ತೇರು. ಅದೇನೋ ಹೇಳಿಕೊಳ್ಳಲಾಗದ ಆತುರ, ಕರಗದ ಕಾತರ, ಅದೃಶ್ಯ ಭಯದ ಛಾಯೆ. ಹೌದು! ಇಂತಹ ವಿಚಿತ್ರ, ಅಸ್ಪಷ್ಟ, ಅನುಭೂತಿಗೆ ಸಿಗದ ತಲ್ಲಣಗಳ ಮುದ್ದಿಸಿ ಮುನ್ನಡೆವ ಅನುಭವವಾದದ್ದು ನಾನು ಬಾಲ್ಯ ಕಳೆದ ಊರಿಗೆ ಸುಮಾರು ವರ್ಷಗಳ ನಂತರ ಮೊದಲ ಸಲ ಕಾಲಿಟ್ಟ ಕ್ಷಣ.
ಈ ಅಪರೂಪದ ಅನುಭವಗಳ ಆಲಿಂಗನಕ್ಕೆ ಇನ್ನಷ್ಟು ಹೂತಳಿರ ಶೃಂಗಾರದ ಲೇಪನ ನೀಡಿದ್ದು ನನ್ನ ಬದುಕ ರೂಪಿಸಿದ ಶಾಲೆಯ ಆವರಣ. ಅಂದು ಹೇಳಿ ಕೇಳಿ ಶನಿವಾರ. ಶಾಲೆಗೆ ಅರ್ಧ ದಿನ ರಜಾ. ಹಾಗೇ ಸಂಜೆಯ ಸಮಯ ಬೇರೆ. ಶಾಲಾ ಆವರಣವೆಲ್ಲ ಮೌನದಾಭರಣದಲ್ಲಿ ರಾರಾಜಿಸುತ್ತಿತ್ತು. ತರಗತಿಯ ಕೊಠಡಿಗಳು ಮುಚ್ಚಿದ್ದವು. ಅದೇಕೊ ಭಾರವೆನಿಸುವ ಹೆಜ್ಜೆಗಳು, ಅಡಿ ಇಡಲು ತಲ್ಲಣಿಸುವ ಭಾವಗಳು, ಪ್ರತಿ ಹೆಜ್ಜೆಗೂ ತೆರೆದುಕೊಳ್ಳುವ ನೆನಪಿನ ವಿಶೇಷ ಪುಟಗಳು.ವಿಶಾಲವಾದ ಆವರಣದೊಳಗೆ ನಿಧಾನವಾಗಿ ಮುನ್ನಡೆಯುತ್ತಿದ್ದಂತೆ ಅತೀ ಉತ್ಸಾಹ, ವಾತ್ಸಲ್ಯದಿಂದ ಮಾತನಾಡಿಸಿ ನಗುತ್ತಿವೆ ಎಂಬಂತೆ ಆ ಹಸಿರ ಹೊದ್ದ ಮರಗಳ ಸಾಲು. ಆಗಲೇ, ದೂರದಿಂದ ಜೋರಾಗಿ ಬಂದ “ಏ ಅಲ್ಲಿ ಜಾಗ ಚೆನ್ನಾಗಿಲ್ಲ. ಆರೋಗ್ಯ ಸರಿಯಿಲ್ಲದ ನೀನು ಅಲ್ಲಿ ಫೀಲ್ಡಿಂಗ್ ಮಾಡೋದು ಬೇಡ. ನಿನ್ನ ಖಾಯಂ ಜಾಗಕ್ಕೆ ಬಾ’ ಎಂಬ ಸ್ನೇಹಿತನ ಕರೆ ನೆನಪಿನಂಗಳದಿಂದ ಎದ್ದು ಬಂದು ಎದೆಗಪ್ಪಿ ಮತ್ತೆ ಹಸಿರಾಗಿಸಿತ್ತು.
“ಖಾಯಂ ಜಾಗ’ ಎಂಬ ಶಬ್ಧವಂತೂ ಅಂದೊಮ್ಮೆ ಆಟವಾಡುತ್ತಿ¨ªಾಗ ಹಿಡಿದ ವಿಶೇಷ ಕ್ಯಾಚ್’,ಅಪರೂಪಕ್ಕೊಮ್ಮೆ ಬೌಲ್ ಮಾಡುವ ನಾನು ಪಡೆದ ವಿಕೆಟ್‌ಗಳು, ಸಹಪಾಠಿಗಳು ಬಂದು ನನ್ನ ಎತ್ತಿ ಸಂಭ್ರಮಿಸಿದ ನೆನಪಿನ ಸಾಗರದಲ್ಲಿ ಮತ್ತೆ ಮುಳುಗುತ್ತಿದ್ದಂತೆ ಬಡಿದೆಬ್ಬಿಸಿದ ನನ್ನ ಪುಟ್ಟ ಕಂದನ, “ಅಪ್ಪಾ ಇದೇನು?’ ಎಂಬ ಪ್ರಶ್ನೆ. ಆಕೆಯ ಕೈಲಿದ್ದ ಚಿಕ್ಕದೊಂದು ಕಲ್ಲಿನ ತುಂಡು, ಅಂದು ಕಬ್ಬಡ್ಡಿ ಆಡುವಾಗ ಬಲಗೈ ಹಸ್ತದ ನಡುವೆ ಆದ ಗಾಯ, ಸೋರುತ್ತಿದ್ದ ರಕ್ತ, “ಇದಕ್ಕೆಲ್ಲ ಭಯ ಪಡಬಾರದು, ನೀನು ಸ್ಟ್ರಾಂಗ್’ ಎಂದು ಧೈರ್ಯ ತುಂಬಿದ ತರಬೇತುದಾರ ಕೃಷ್ಣಣ್ಣನ ಮಾತು ಅಂದಿನ ಗಾಯದ ನೆನಪಿಗೆ ಔಷಧಿಯಂತಿತ್ತು. ಆದರೂ, ಅಂಗೈ ಮೇಲಿನ ಗಾಯದ ಗುರುತು ಮಾತ್ರ ಹಾಗೇ ನಗುತ್ತಿದ್ದಂತೆ ಭಾಸವಾಯಿತು.
ವಿಶಾಲವಾಗಿ ವಿಸ್ತರಿಸಲ್ಪಟ್ಟ ಶಾಲಾ ಕಟ್ಟಡ, ಅದಕ್ಕೆ ಹೊಂದಿಕೊಂಡ ಅಡುಗೆ ಮನೆ, ಆಧುನಿಕ ಶೌಚಾಲಯಗಳು ,ನೀರಿನ ಪೈಪ್‌ಗ್ಳು, ಬಾವಿ, ಕಟ್ಟಿಗೆ ಕಂಬದ ಬದಲಾಗಿ ಕಬ್ಬಿಣದ ಧ್ವಜದ ಸ್ತಂಭ, ಬದುಕಿನಲ್ಲಿ ಬದಲಾವಣೆ ಅದೆಷ್ಟು ಅನಿವಾರ್ಯ ಎಂಬುದಕ್ಕೆ ಸಾಕ್ಷಿಯಂತೆ ನಿಂತಿದ್ದವು. ಪಕ್ಕದ ಗಿಡದಿಂದ ಬಿದ್ದ ತೆಂಗಿನ ಗರಿಯೊಂದು ನನ್ನೊಳಗಿನ ನೆನಪಿನ ಕವಿತೆಗೆ ಇನ್ನೊಂದು ಹೊಸ ಚರಣವನ್ನೇ ಸೇರಿಸಿತು. ಅಂದು ಕೇವಲ ಎರಡೆಲೆ ಹೊಂದಿದ್ದ ಪುಟ್ಟ ತೆಂಗಿನ ಸಸಿಗೆ ಭಟ್ಟರ ಮನೆಯ ಬಾವಿಯಿಂದ ನೀರು ಹೊತ್ತು ತಂದು ಹಾಕುವಾಗಿನ ಸಂಭ್ರಮ, ನೀರು ತರುವ ನೆಪ ಹೇಳಿ ಒಂದು ತರಗತಿ ತಪ್ಪಿಸಿಕೊಂಡರೂ, ಅಧಿಕಾರದಿಂದ ಮರಳುತ್ತಿದ್ದ ಮಧುರವಾದ ಕಿಡಿಗೇಡಿತನ ಎಲ್ಲದಕ್ಕೂ ಸಾಕ್ಷಿ ಎಂಬಂತೆ ಬೆಳೆದು ಫಲ ತುಂಬಿ ನಿಂತ ತೆಂಗಿನ ಮರಗಳು.
ಇನ್ನೇನು ಕಟ್ಟಡದೊಳಗೆ ಕಾಲಿಡಬೇಕೆನ್ನುತ್ತಿದ್ದಂತೆ ತಲೆಬಾಗಿ ಒಮ್ಮೆ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವ ಮುನ್ನ, ತಾನಾಗಿಯೇ ಕಳಚಿಕೊಂಡಿದ್ದವು ಪಾದರಕ್ಷೆಗಳು. ನೆಲದ ಮೇಲೆ ಅಚ್ಚುಕಟ್ಟಾಗಿ ಕುಳಿತು ಕೇಳಿಸಿಕೊಳ್ಳುತ್ತಿದ್ದ ಪಾಠಗಳು, ಜಗುಲಿಯ ಮೇಲೆ ನಿಂತು ಓದುತ್ತಿದ್ದ ಶಾಲಾ ಪಂಚಾಂಗ, ದಿನದ ವಿಶೇಷ, ನುಡಿಮುತ್ತುಗಳ ಆ ಕಪ್ಪು ಬಣ್ಣದ ಡೈರಿ,ಒಂದೊಮ್ಮೆ ಮೇಲೆ ನಿಂತು ಕಮಾಂಡ್ ಕೊಡುತ್ತಿದ್ದ ಸಹಪಾಠಿಯ ತೆರೆದಿದ್ದ ಬಟನ್‌ಗಳು ಸೃಷ್ಟಿಸಿದ ಬಿಗುವಿನ ವಾತಾವರಣ ಅದೆಷ್ಟೋ ಹೇಳಲಾರದ ಕವನ ಸಂಕಲನ.
ಬೀಗ ಹಾಕಲಾದ ತರಗತಿಯ ಬಾಗಿಲ ಬಳಿ ನಿಂತಾಗ ಒಳಗಿನಿಂದ ಮತ್ತೆ ನನ್ನ ನೆನಪುಗಳ ಕಾವ್ಯ ಝೇಂಕರಿಸತೊಡಗಿತು.ಅಮ್ಮನ ಮಡಿಲು ಅಪ್ಪನ ನಿರಾಕಾರ ಪ್ರೀತಿ, ಕಡಲ ಬಿಟ್ಟಿರಲಾರದೇ ವಾರಕ್ಕೆ ಕನಿಷ್ಠ ಎರಡು ಬಾರಿ ಊರಿಗೆ ಹೋಗಿ ಬರುವಾಗ ತಡವಾದರೂ ಶಿಕ್ಷಿಸದೇ ಪ್ರೀತಿಯಿಂದ ಮಳ್ಳಿ ಮಳ್ಳಿ ಮಿಂಚುಳ್ಳಿ ಹಾಡನ್ನು ತಿರುಚಿ, ಮುಳ್ಳಿ ಮುಳ್ಳಿ ಮಿಂಚುಳ್ಳಿ’ ಎಂದು ಸ್ವಾಗತಿಸುತ್ತಿದ್ದ ಯಶವಂತ “ಸರ್, ನನ್ನ ನೆನಪಿನಂಗಳಕ್ಕೆ ಮತ್ತೆ ಹಸಿರ ಹನಿಸಿದರು. ಹಾಗೇ ಬಾಗಿಲ ಪಕ್ಕದ ನೋಟಿಸ್ ಬೋರ್ಡ್ ನನ್ನೆಡೆಗೆ ನೋಡಿ ಇನ್ನಷ್ಟು ಸೆಳೆಯಿತು. ಅಂದು ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶದ ದಿನ. ಕೊಠಡಿಯ ಬಾಗಿಲ ಪಕ್ಕದಲ್ಲಿ ಇನ್ನೇನು ರಿಸಲ್ಟ… ಶೀಟ್’ ಅಂಟಿಸುತ್ತಲೇ, “ಮುರಳಿ, ಯಾಕೋ ಕಡಿಮೆ ಆಯ್ತಲ್ಲ, ಪಾಪ, ನಿನಗೆ ಹುಷಾರಿರಲಿಲ್ಲ ಎಕ್ಸಾಮ್ ಟೈಮಲ್ಲಿ ಎಂದಿದ್ದ ಯಶವಂತ ಸರ್ ಧ್ವನಿ ಸ್ವಲ್ಪ ಮಟ್ಟಿಗೆ ಆತಂಕದ ಅಲೆಯನ್ನೇ ಸೃಷ್ಟಿಸಿ ಬಿಟ್ಟಿತು. ಇಂಥ ನೆನಪುಗಳು ತಂದ ಕಂಬನಿ ಕೆನ್ನೆಯೊಡನೆ ಪಿಸುಗುಟ್ಟಿ ಸಂಜೆಯ ಗಾಳಿಯಲ್ಲಿ ಲೀನವಾಗಿಬಿಟ್ಟಿತ್ತು.
ಭಾರವಾದ ಒಡಲ ಹೊತ್ತು, ನನ್ನನ್ನುಸಿರಾದ ಪುಟ್ಟ ಕಂದಮ್ಮಳನ್ನು ಕೈಹಿಡಿದು ಶಾಲಾ ಆವರಣಕ್ಕೆ ವಿದಾಯ ಹೇಳುವಾಗ ಅದೆಕೋ ಕಾಲು ಎಡವಿತು. ಹುಷಾರು,ಮಗುವಿನ ಕೈಹಿಡಿದು ನೀವೇ ಎಡವಿದರೆ?’ ಎಂಬ ನನ್ನವಳ ಮಾತಿಗೆ ನಸುನಕ್ಕರೂ ಸಹ ಮನ ಗುನುಗಿತು: ಬದುಕೇ ಕೆಲವೊಮ್ಮೆ ಅದೆಷ್ಟೋ ನಿಶ್ಕಲ್ಮಷ ಜೀವಗಳನ್ನ ಉಳಿಸಿಕೊಳ್ಳುವಲ್ಲಿ ಎಡವುತ್ತದೆ. ಇನ್ನು ನಾನು ಎಡವುವುದು ವಿಶೇಷವೇ ಎಂದು…
ಮುರಳೀಧರ ನಾಗೇಂದ್ರ ಹೆಗಡೆ, ಮಾವಿನಗುಂಡಿ.