ಕುಂದಾಪುರ: ಪ್ರತಿಭಾವಂತ ನಟ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೋನಾಲ್ಡ್ ಲೋಬೋ ಜತೆಯಾಗಿ ನಿರ್ದೇಶಿಸಿದ್ದ “ ಆ 90 ದಿನಗಳು” ಎಂಬ ವಿಭಿನ್ನ ಶೈಲಿಯ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
ಕೆಲವು ಚಿತ್ರಗಳಲ್ಲಿ ನಟಿಸಿ ತಮ್ಮ ಪ್ರತಿಭೆಯನ್ನು ಸಾಬೀತುಗೊಳಿಸಿದ್ದ ರತೀಕ್ ಮುರ್ಡೇಶ್ವರ್ ಆ 90 ದಿನಗಳು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಚಿತ್ರದಲ್ಲಿ ರಾಧಾ ಭಗವತಿ ನಾಯಕಿಯಾಗಿದ್ದು, ತಾಯಿಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಭವ್ಯಾ ಅವರು ನಟಿಸಿದ್ದಾರೆ. ನಟಿ ಕೃತಿಕಾ ಕೂಡಾ ತಾರಾಬಳಗದಲ್ಲಿದ್ದಾರೆ.
ಯಶಸ್ವಿ ಪ್ರದರ್ಶನ ಕಂಡಿದೆ:
ಚಿತ್ರದ ನಿರ್ದೇಶಕರಾದ ಯಾಕೂಬ್ ಖಾದರ್ ಗುಲ್ವಾಡಿ ಅವರು ಉದಯವಾಣಿ ಡಾಟ್ ಕಾಮ್ ಜೊತೆ ಮಾತನಾಡಿ, ಸಿನಿಮಾದ ಯಶಸ್ಸಿನ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಆರಂಭದಲ್ಲಿ ನಾವು ಆ 90 ದಿನಗಳು ಸಿನಿಮಾವನ್ನು ಕುಂದಾಪುರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಆಲೋಚಿಸಿದ್ದೇವು. ನಂತರ ರಾಜ್ಯಾದ್ಯಂತ ಬಿಡುಗಡೆ ಮಾಡಿದೆವು. ನಾವು ಈ ಸಿನಿಮಾವನ್ನು ಹಣ ಗಳಿಸಲು ನಿರ್ಮಿಸಿದ್ದಲ್ಲ. ಒಟ್ಟಾರೆಯಾಗಿ ನಮಗೆ ಪ್ರೇಕ್ಷಕರ ಬೆಂಬಲ ತುಂಬಾ ಖುಷಿಕೊಟ್ಟಿದೆ. ಕುಂದಾಪುರ, ಬಾಗಲಕೋಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ ಎಂಬುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಯಾಕೆಂದರೆ ಸ್ಟಾರ್ ನಟರಿಲ್ಲದೇ ಈಗ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವುದಿಲ್ಲ. ಹೀಗಾಗಿ ನಮಗೆ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ. ಅಷ್ಟೇ ಅಲ್ಲ ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ಅವರ ಬೆಂಬಲ, ಪ್ರೋತ್ಸಾಹ ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದು ಯಾಕೂಬ್ ಈ ಸಂದರ್ಭದಲ್ಲಿ ಹೇಳಿದರು.
ಆ 90 ದಿನಗಳ ಚಿತ್ರದ ನಾಯಕ ನಟ ರತಿಕ್ ಮುರ್ಡೇಶ್ವರ್ ಕೂಡಾ ಚಿತ್ರದ ಗೆಲುವಿನ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದು, ಸಿನಿಮಾ ಕುಂದಾಪುರ ಹಾಗೂ ಹಲವೆಡೆ ಉತ್ತಮ ಪ್ರದರ್ಶನ ಕಂಡಿರುವುದು ಸಂತಸವಾಗಿದೆ. ನಾಯಕನಾಗಿ ಈ ಚಿತ್ರದಲ್ಲಿ ಅಭಿನಯಿಸಿರುವುದು, ಹಿರಿಯ ನಟಿ ಭವ್ಯಾ ಅವರೊಂದಿಗೆ ನಟಿಸಿರುವುದು ಒಳ್ಳೆಯ ಅನುಭವ ನೀಡಿದೆ. ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ಚಿತ್ರಕಥೆಯಲ್ಲಿ ಅಭಿನಯಿಸುವ ಅಭಿಲಾಷೆ ರತಿಕ್ ಮುರ್ಡೇಶ್ವರದ್ದಾಗಿದೆ.
ಆ 90 ದಿನಗಳು ಸಿನಿಮಾಕ್ಕೆ ಪ್ರಮೋದ್ ಮರವಂತೆ ಸಾಹಿತ್ಯ, ರಾಧಾಕೃಷ್ಣ ಬಸ್ರೂರ್ ಸಂಗೀತ ಸಂಯೋಜಿಸಿದ್ದರು. ಗಾಯಕ ಅರ್ಫಾಜ್ ಉಳ್ಳಾಲ್ ಹಾಗೂ ಶಶಿಕಲ ಸುನೀಲ್ ಚಿತ್ರದ ಹಾಡುಗಳನ್ನು ಹಾಡಿದ್ದು, ಕಥೆ-ಚಿತ್ರಕಥೆ, ನಿರ್ಮಾಣ ರೋನಾಲ್ಡ್ ಲೋಬೋ.
ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಪುತ್ರ ರತಿಕ್ ಮುರ್ಡೇಶ್ವರ್ ನಾಯಕ ನಟರಾಗಿ ನಟಿಸಿದ್ದ ಆ 90 ದಿನಗಳು ಸಿನಿಮಾ 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021ರ ಟಾಪ್ 12 ರಲ್ಲಿ ಆಯ್ಕೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.