Advertisement

ಗ್ರಂಥಾಲಯಕ್ಕೆ ಮುಳ್ಳು ಕಂಟಿ ಹೊದಿಕೆ

11:08 AM Nov 09, 2019 | Suhan S |

ಬಾಗಲಕೊಟೆ: ಹಳ್ಳಿಗರ ಮಟ್ಟಿಗೆ ಅಲ್ಲಿನ ಗ್ರಂಥಾಲಯಗಳೇ ವಿಶ್ವ ವಿದ್ಯಾಲಯ. ಗ್ರಾಮಕ್ಕೊಂದು ಗ್ರಂಥಾಲಯ ಎಂಬ ಪರಿಕಲ್ಪನೆಯಡಿ ಆರಂಭಗೊಂಡ ಗ್ರಾಮೀಣ ಗ್ರಂಥಾಲಯಗಳು, ದಿವ್ಯ ನಿರ್ಲಕ್ಷಕ್ಕೆ ಒಳಗಾಗಿವೆ. ಬಹುತೇಕ ಗ್ರಂಥಾಲಯಗಳು, ಮುಳ್ಳು-ಕಂಟಿ ಬೆಳೆದು ಅನಾಥವಾಗಿ ನಿಂತಿದೆ.

Advertisement

ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ 19 ಶಾಖಾ ಗ್ರಂಥಾಲಯ ಹಾಗೂ 163 ಗ್ರಾ.ಪಂ. ಮಟ್ಟದ ಗ್ರಂಥಾಲಯಗಳಿವೆ. ಜಿಲ್ಲಾ ಕೇಂದ್ರ ಹಾಗೂ ಶಾಖಾ ಗ್ರಂಥಾಲಯಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ.

ಶಾಖಾ ಗ್ರಂಥಾಲಯಕ್ಕಿಲ್ಲ ಸಿಬ್ಬಂದಿ: ಒಂದು ಶಾಖಾ ಗ್ರಂಥಾಲಯಕ್ಕೆ ಗ್ರಂಥಾಲಯ ಮೇಲ್ವಿಚಾರಕ, ಗ್ರಂಥಾಲಯ ಸಹಾಯಕ, ತಾಂತ್ರಿಕ ಸಿಬ್ಬಂದಿ ಹಾಗೂ ಸಿಪಾಯಿ ಇರಬೇಕು. ಬಹುತೇಕ ಶಾಖಾ ಗ್ರಂಥಾಲಗಳು, ಗ್ರಂಥಾಲಯ ಸಹಾಯಕರಿಂದಲೇ ನಡೆಯುತ್ತಿವೆ. ಒಂದೆಡೆ ಸಿಬ್ಬಂದಿ ಕೊರತೆ ಇದ್ದರೆ, ಇನ್ನೊಂದೆಡೆ ಗ್ರಂಥಾಲಯ ಇಲಾಖೆಯೆಂದರೆ ನಿರ್ಲಕ್ಷಿತ ಇಲಾಖೆ ಎಂಬ ಹಣೆಪಟ್ಟಿಯೂ ಪಡೆದಿದೆ. ಹೀಗಾಗಿ ಯಾವುದೇ ಸಚಿವರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಈ ಇಲಾಖೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದ ಈ ಇಲಾಖೆಯ ಹಿರಿಯ-ಕಿರಿಯ ಅಧಿಕಾರಿಗಳು ಮಾಡಿದ್ದೇ ಮಾರ್ಗ ಎಂಬಂತೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ನೌಕರರಿಗೊಬ್ಬ ಸಹಾಯಕ!: ಜಿಲ್ಲೆಯ ಬಹುತೇಕ  ಗ್ರಂಥಾಲಯಗಳಲ್ಲಿ ಸರ್ಕಾರದಿಂದ ನೇಮಕಗೊಂಡ ನೌಕರರು ಕೆಲಸ ಮಾಡುವುದಿಲ್ಲ. ಬದಲಾಗಿ ತಮಗೊಂದು ಖಾಸಗಿ ಸಹಾಯಕರನ್ನು ಇಟ್ಟುಕೊಂಡು ಅವರಿಂದಲೇ ಗ್ರಂಥಾಲಯ ಮುನ್ನಡೆಸಲಾಗುತ್ತಿದೆ. ಗ್ರಾಪಂ ಮಟ್ಟದ ಗ್ರಂಥಾಲಯಗಳಿಗೆ ಒಬ್ಬ ಗ್ರಂಥಾಲಯ ಮೇಲ್ವಿಚಾರಕ ಹಾಗೂ ಓರ್ವ ಸಿಪಾಯಿ ಇರಬೇಕು. ಸಿಪಾಯಿಗೆ ವಾರ್ಷಿಕ 2 ಸಾವಿರ ಸಂಬಳ ನೀಡಲು ಅವಕಾಶವಿದೆ.

ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ 7 ಸಾವಿರ ವೇತನ ನಿಗದಿ ಪಡಿಸಲಾಗಿದೆ. ಈ ಗ್ರಂಥಾಲಯ ಮೇಲ್ವಿಚಾರಕರನ್ನು ಜಿಲ್ಲಾ ಗ್ರಂಥಾಲಯ ಅಭಿವೃದ್ಧಿ ಸಮಿತಿಯಿಂದ ಅರ್ಜಿ ಆಹ್ವಾನಿಸಿ, ಸ್ಥಳೀಯ ವಿದ್ಯಾವಂತರನ್ನು ಮೆರಿಟ್‌ ಮೂಲಕ ನೇಮಕ ಮಾಡುವುದು ಪರಂಪರೆ. ಹೀಗೆ ನೇಮಕಗೊಳ್ಳಲು ಹಲವಾರು ರೀತಿ ಪ್ರಭಾವ, ಭ್ರಷ್ಟಾಚಾರ ನಡೆಯುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತದೆ. ಆದರೆ, ಜಿಲ್ಲಾ ಗ್ರಂಥಾಲಯ ಅಭಿವೃದ್ಧಿ ಸಮಿತಿಯಿಂದ ನೇಮಕಗೊಂಡಮೇಲ್ವಿಚಾರಕರು, ಗ್ರಂಥಾಲಯಕ್ಕೆ ಹೋಗುವುದು ಕನ್ನಡ ರಾಜ್ಯೋತ್ಸವ, ಸ್ವಾತಂತ್ರೊತ್ಸವ, ಗಾಂಧಿ ಜಯಂತಿ ಇಲ್ಲವೇ ಗ್ರಾಮದಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮವಿದ್ದರೆ ಮಾತ್ರ. ಉಳಿದ ದಿನ, ಮೇಲ್ವಿಚಾರಕರೇ ನೇಮಕ ಮಾಡಿಕೊಂಡ ಖಾಸಗಿ ಸಿಬ್ಬಂದಿಗಳು,  ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇಲಾಖೆಯಿಂದ ಮಾಸಿಕ 7 ಸಾವಿರ ಸಂಬಳ ಪಡೆದು, ತಾವು ನೇಮಿಸಿಕೊಂಡ ವ್ಯಕ್ತಿಗಳಿಗೆ 1 ಸಾವಿರದಿಂದ 2 ಸಾವಿರವರೆಗೆ ಸಂಬಳ ಕೊಡುತ್ತಾರೆ ಎನ್ನಲಾಗಿದೆ.

Advertisement

ಹೊಸ ಪಂಚಾಯಿತಿಗಿಲ್ಲ ಗ್ರಂಥಾಲಯ: 2015ಕ್ಕೂ ಮುಂಚೆ ಜಿಲ್ಲೆಯಲ್ಲಿ ಜಿಲ್ಲೆಯ ಒಟ್ಟು 163 ಗ್ರಾಪಂ ಇದ್ದವು. ಆ ಎಲ್ಲ ಗ್ರಾಪಂಗೂ ಗ್ರಂಥಾಲಯ ಇವೆ. ಗ್ರಾಪಂ ಪುನರ್‌ವಿಂಗಡಣೆ ಬಳಿಕ 163 ಇದ್ದ ಗ್ರಾ.ಪಂ. ಗಳು ಈಗ 198ಕ್ಕೇರಿವೆ. ಹೊಸದಾಗಿ ಆಡಳಿತಾತ್ಮಕವಾಗಿ ಅಧಿಕಾರಕ್ಕೆ ಬಂದ 35 ಗ್ರಾಪಂಗಳಿಗೆ ಹೊಸ ಗ್ರಂಥಾಲಯ ನೀಡಿಲ್ಲ. ಕೆಲವು ಹೊಸ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲ್ಲಿನ ಗ್ರಾ.ಪಂ. ಆಡಳಿತ ಮಂಡಳಿ ವಿಶೇಷ ಮುತುವರ್ಜಿ ವಹಿಸಿ, ತಾತ್ಕಾಲಿಕವಾಗಿ ಗ್ರಂಥಾಲಯ ಆರಂಭಿಸಿವೆ. ಆದರೆ, ಅದಕ್ಕೆ ಈ ವರೆಗೆ ಅಧಿಕೃತ ಅನುಮತಿ ಸಿಕ್ಕಿಲ್ಲ. ಆದರೂ, ಗ್ರಾ.ಪಂ.ನಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.

ನಿರ್ವಹಣೆಗೆ ಹಣವಿಲ್ಲ: ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳಿಗೆ ಅಲ್ಲಿನ ಅಧಿಕಾರಿಗಳು ನಿಗದಿತ ಗುರಿಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ. ಆದರೆ, ಗ್ರಾಮೀಣ ಗ್ರಂಥಾಲಯ ನಿರ್ವಹಣೆಗೆ ಮಾಸಿಕ ಕೇವಲ 400 ರೂ. ಮಾತ್ರ ನೀಡಲಾಗುತ್ತಿದೆ. ಇದೇ 400 ಮೊತ್ತದಲ್ಲಿ ಗ್ರಾಮ ಮಟ್ಟದ ಗ್ರಂಥಾಲಯ ನಿರ್ವಹಣೆ ಮಾಡಬೇಕು. ಈ ಹಣದಲ್ಲಿ ನಾಲ್ಕು ದಿನ ಪತ್ರಿಕೆ ತರಿಸಿಕೊಳ್ಳುವುದು ಬಿಟ್ಟರೆ, ಬೇರ್ಯಾವೂ ನಿಯತಕಾಲಿಕೆ, ಸ್ಮರ್ಧಾತ್ಮಕ ಸಂಬಂಧಿತ ಪುಸ್ತಕ ಅಥವಾ ಆಯಾ ಗ್ರಾಮದ ಓದುಗರ ಇಚ್ಛಾನುಸಾರ ಪುಸ್ತಕ ಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಗ್ರಾಮೀಣ ಗ್ರಂಥಾಲಯಗಳೆಂದರೆ ಕೇವಲ ಪತ್ರಿಕೆ ಓದಲು ಮಾತ್ರ ಸೀಮಿತ ಎನ್ನುವಂತಾಗಿದೆ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next