Advertisement
ಭ್ರೂಣಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ. ವೈದ್ಯರು ಮಾತ್ರವಲ್ಲ, ದಂಪತಿಯ ವಿರುದ್ಧವೂ ಈ ಆರೋಪದಡಿ ಕಾನೂನು ಕ್ರಮ ಕೈಗೊಳ್ಳಬಹುದು. ಹೀಗಾಗಿ ಹೆಣ್ಣುಭ್ರೂಣ ಎಂದು ತಿಳಿದು, ಅವುಗಳನ್ನು ಹತ್ಯೆ (ಗರ್ಭಪಾತ) ಮಾಡಿಸಿಕೊಂಡಿದ್ದ ದಂಪತಿಗೂ ಅಷ್ಟೇ ಪ್ರಮಾಣದ ಶಿಕ್ಷೆ ಆಗಲಿದೆ.
ಮೂರು ವರ್ಷಗಳಲ್ಲಿ 900 ಹೆಣ್ಣುಭ್ರೂಣಗಳ ಲಿಂಗಪತ್ತೆ ಹಚ್ಚಿ ಗರ್ಭಪಾತ ಮಾಡಿಸಿದ ಪ್ರಕರಣದ ಕಿಂಗ್‌ಪಿನ್‌ಗಳಾದ ಮೈಸೂರಿನ ಆಯುರ್ವೇದಿಕ್ ವೈದ್ಯ ಚಂದನ್ ಬಲ್ಲಾಳ್, ಮಕ್ಕಳ ತಜ್ಞ ತುಳಸಿರಾಮ್ ಸಹಿತ 9 ಮಂದಿಯನ್ನು ಬಂಧಿಸಲಾಗಿದೆ. ಜತೆಗೆ ಭ್ರೂಣ ಲಿಂಗ ಪತ್ತೆ ಹಚ್ಚಿಸಿ, ಗರ್ಭಪಾತ ಮಾಡಿಸಿಕೊಂಡ ದಂಪತಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಚಂದನ್ ಬಲ್ಲಾಳ್‌ನ ಆಸ್ಪತ್ರೆ ಮೇಲೆ ದಾಳಿ ನಡೆಸಿದಾಗ ಅಲ್ಲಿನ ನೋಂದಣಿ ಪುಸ್ತಕ ಮತ್ತು ಕಂಪ್ಯೂಟರ್ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳಲ್ಲಿ ಅಂದಾಜು 100ಕ್ಕೂ ಅಧಿಕ ದಂಪತಿಗಳ ಮಾಹಿತಿ ದೊರಕಿದೆ. ಇನ್ನುಳಿದವರ ಮಾಹಿತಿ ಸಂಗ್ರಹಕ್ಕೆ ಪ್ರಯತ್ನ ನಡೆಯುತ್ತಿದೆ.
Related Articles
Advertisement
ಆಸ್ಪತ್ರೆಯೇ ಅಕ್ರಮಆರೋಪಿ ವೈದ್ಯ ತುಳಸಿರಾಮ್ ಮೈಸೂರಿನ ಉದಯಗಿರಿಯಲ್ಲಿದ್ದ ಲತಾ ಆಸ್ಪತ್ರೆಯನ್ನು ಚಂದನ್ ಬಲ್ಲಾಳ್‌ಗೆ ಮಾರಾಟ ಮಾಡಿದ್ದಾನೆ. ಆದರೆ ಚಂದನ್ ಬಲ್ಲಾಳ್ ಅದಕ್ಕೆ ಮಾತಾ ಆಸ್ಪತ್ರೆ ಎಂದು ಹೆಸರು ಬದಲಾಯಿಸಿದ್ದರೂ ಅದನ್ನು ಕೆಪಿಎಂಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶ್‌ಮೆಂಟ್) ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ಜತೆಗೆ ಐದು ತಿಂಗಳುಗಳಿಂದ ಈ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಾ| ಚಂದನ್ ಬಲ್ಲಾಳ್ ಈ ಆಸ್ಪತ್ರೆಯನ್ನು ಸ್ಥಗಿತಗೊಳಿಸಿ ಮೈಸೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ಮತ್ತೂಂದು ಆಯುರ್ವೇದಿಕ್ ಆಸ್ಪತ್ರೆ ತೆರೆದು ಅಕ್ರಮ ದಂಧೆ ಮುಂದುವರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.