Advertisement

ದುರಂತಕ್ಕೆ ರಾಜಕೀಯ ಬಣ್ಣ

06:00 AM May 25, 2018 | Team Udayavani |

ಹೊಸದಿಲ್ಲಿ  /ಚೆನ್ನೈ: ತಮಿಳುನಾಡಿನ ತೂತು ಕುಡಿಯಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಸಾವಿಗೀಡಾದವರ ಸಂಖ್ಯೆ ಗುರುವಾರ 13ಕ್ಕೆ ಏರಿಕೆಯಾಗಿದೆ. ಪ್ರಕರಣವೀಗ ಆಡಳಿತ ಮತ್ತು ವಿಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಘಟನೆ ಖಂಡಿಸಿ ಡಿಎಂಕೆ ನೇತೃತ್ವದಲ್ಲಿ ವಿಪಕ್ಷಗಳು ಶುಕ್ರವಾರ ಬಂದ್‌ಗೆ ಕರೆ ನೀಡಿವೆ. 

Advertisement

ವೇದಾಂತ ಕಂಪೆನಿಯ ಸ್ಟಲೈìಟ್‌ ತಾಮ್ರ ಉತ್ಪಾದನಾ ಘಟಕದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಗೋಲಿಬಾರ್‌ ಖಂಡಿಸಿ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಚೆನ್ನೈನಲ್ಲಿರುವ ಸೈಂಟ್‌ ಪೋರ್ಟ್‌ ಜಾರ್ಜ್‌ನಲ್ಲಿ ಧರಣಿ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರನ್ನು ಬಲವಂತವಾಗಿ ತೆರವುಗೊಳಿಸಿದರು. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಮತ್ತು ಪೊಲೀಸ್‌ ಮಹಾನಿರ್ದೇಶಕರನ್ನು ವಜಾ ಮಾಡಬೇಕೆಂದು ಸ್ಟಾಲಿನ್‌ ಒತ್ತಾಯಿಸಿದರು.

ಗುರುವಾರ ಘಟನೆ ಬಗ್ಗೆ ಮೌನ ಮುರಿದಿರುವ ಮುಖ್ಯ ಮಂತ್ರಿ ಪಳನಿಸ್ವಾಮಿ, ವಿಪಕ್ಷಗಳು ಹಿಂಸೆಗೆ ಪ್ರೋತ್ಸಾಹಿ ಸುತ್ತಿವೆ. ಗುಂಡು ಹಾರಾಟದಲ್ಲಿ ಜನರು ಅಸುನೀಗಿದ್ದು ದುರಂತ. ಆದರೆ ಇಂಥ ಕ್ರಮ ಕೈಗೊಳ್ಳದೆ ಬೇರೆ ದಾರಿ ಇರಲಿಲ್ಲ ಎಂದಿದ್ದಾರೆ. ಈ ನಡುವೆ ನಿಯಮ ಉಲ್ಲಂ ಸಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಎಂ.ಕೆ.ಸ್ಟಾಲಿನ್‌, ವೈಕೋ, ಕಮಲ್‌ಹಾಸನ್‌ ವಿರುದ್ಧ ಕೇಸು ದಾಖಲಿಸಲಾಗಿದೆ.

ವಿದ್ಯುತ್‌ ಕಡಿತ: ಇದೇ ವೇಳೆ ತಾಮ್ರ ಉತ್ಪಾದನಾ ಘಟಕ ಪರಿಸರ ಸಂಬಂಧಿ ನಿಯಮ ಉಲ್ಲಂಘಿಸಿದ್ದರಿಂದ ಅದಕ್ಕೆ  ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. 2018ರಿಂದ 2023ರ ಅವಧಿಯ ವರೆಗಿನ ಪರವಾನಗಿ ನವೀಕರಣ ಮನವಿ ಈಗಾಗಲೇ ತಿರಸ್ಕೃತಗೊಂಡಿದೆ ಎಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿ ತಿಳಿಸಿದೆ.

100 ಬಂಧನ: ಇದೇ ವೇಳೆ, ಕಲ್ಲು ತೂರಾಟ ಮತ್ತು ಇತರ ಘಟನೆ ಸಂಬಂಧ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ತೂತುಕುಡಿಯ ಕೆಲ ಸ್ಥಳಗಳಲ್ಲಿ ಸಣ್ಣ ಪ್ರಮಾಣ ಗಲಾಟೆಗಳು ನಡೆದಿವೆ.

Advertisement

ಪುನಾರಂಭಕ್ಕೆ ಕ್ರಮ: ತಾಮ್ರ ಉತ್ಪಾದನಾ ಘಟಕಕ್ಕೆ ಮದ್ರಾಸ್‌ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ವೇದಾಂತ ಕಂಪೆನಿಯ ಮುಖ್ಯಸ್ಥ ಅನಿಲ್‌ ಅಗರ್ವಾಲ್‌ ಶೀಘ್ರದಲ್ಲಿಯೇ ಘಟಕ ಪುನಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಜತೆಗೆ ಗುಂಡು ಹಾರಾಟ ಪ್ರಕರಣದ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ತಿಂಗಳ ಆರಂಭದಲ್ಲಿ ಟ್ವೀಟ್‌ ಮಾಡಿದ್ದ ಅನಿಲ್‌ ಅಗರ್ವಾಲ್‌, “ಕೆಲ ಸ್ಥಾಪಿತ ಹಿತಾಸಕ್ತಿಗಳು ಭಾರತ ಯಾವತ್ತೂ ಆಮದು ಮಾಡಿಕೊಂಡೇ ಇರಬೇಕು ಎಂದು ಬಯಸುತ್ತವೆ. ಹೊಸ ಉದ್ಯೋಗ ಸೃಷ್ಟಿ ಮಾಡದಂತೆ ತಡೆಯುತ್ತವೆ. ಅದರಲ್ಲಿ ಕೆಲ ವಿದೇಶಿ ಕಂಪೆನಿಗಳೂ ಕೈಜೋಡಿಸಿವೆ’ ಎಂದು ಬರೆದುಕೊಂಡಿದ್ದರು.

ನಾಟಕ ಬೇಡ; ಏಳು!
ತೂತುಕುಡಿಯಲ್ಲಿ ಪೊಲೀಸರು ಹಾರಿಸಿದ ಗುಂಡಿನಿಂ ದಾಗಿ ಕಾಳಿಯಪ್ಪನ್‌ (22) ಎಂಬ ಯುವಕ ಸಾವಿಗೀಡಾ ಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಗುಂಡು ತಾಗಿದ ಬಳಿಕ ಯುವಕ ನೆಲದ ಮೇಲೆ ಬಿದ್ದು ನರಳಾಡುತ್ತಿದ್ದ. ಅಲ್ಲಿಗೆ ಬಂದ ಪೊಲೀಸರು, “ನಾಟಕ ಮಾಡಬೇಡ. ಏಳು, ಹೋಗು’ ಎಂದು ಗದರಿರುವುದು ದಾಖಲಾಗಿದೆ. ಸ್ಥಳೀಯ ವರದಿಗಾರ ಅದನ್ನು ಚಿತ್ರೀಕರಿಸಿದ್ದು, ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಪೊಲೀಸರು ಕಾಳಿಯಪ್ಪನ್‌ನನ್ನು ಆಸ್ಪತ್ರೆಗೆ ಕರೆದೊಯ್ದಾಗ ಆತ ಅಸುನೀಗಿದ್ದಾನೆಂದು ವೈದ್ಯರು ಘೋಷಿಸಿದರು.

ತಮಿಳುನಾಡಿನ ಜನರು ಶಾಂತಿ ಕಾಪಾಡ ಬೇಕು. ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಳಿದ್ದೇವೆ. ರಾಜ್ಯ ಸರಕಾರದ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೇವೆ.
ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next