ಬ್ಯಾಂಕಾಕ್: ಬಹಳಷ್ಟು ಆತ್ಮವಿಶ್ವಾಸದಲ್ಲಿರುವ ಭಾರತೀಯ ತಂಡವು ರವಿವಾರ ನಡೆಯುವ ಥಾಮಸ್ ಕಪ್ ಕೂಟದ ಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಶ್ಯದ ಸವಾಲನ್ನು ಎದುರಿಸಲಿದೆ.
ಈಗಾಗಲೇ ಫೈನಲಿಗೇರಿ ಇತಿಹಾಸ ನಿರ್ಮಿಸಿರುವ ಭಾರತ ತಂಡವು ಇನ್ನೊಂದು ಸಲ ಇತಿಹಾಸ ಸ್ಥಾಪಿಸಲು ಎದುರು ನೋಡುತ್ತಿದೆ.
ಹಾಲಿ ಚಾಪಿಯನ್ ಆಗಿರುವ ಇಂಡೋನೇಶ್ಯ ತಂಡವು ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಒಂದು ವೇಳೆ ಭಾರತವು ಇಂಡೋನೇಶ್ಯವನ್ನು ಸೋಲಿಸಿದರೆ ಇದೊಂದು ನಂಬಲಾಗದ ಅತ್ಯದ್ಭುತ ಸಾಧನೆಯೆಂದು ಹೇಳಬಹುದು.
ಬಲಿಷ್ಠ ತಂಡಗಳಾದ ಮಲೇಶ್ಯ ಮತ್ತು ಡೆನ್ಮಾರ್ಕ್ ತಂಡವನ್ನು ಸೋಲಿಸಿದ ಭಾರತ ಇದೇ ಮೊದಲ ಬಾರಿ ಫೈನಲಿಗೇರಿದ ಸಾಧನೆ ಮಾಡಿತ್ತು. ಮಲೇಶ್ಯ ಐದು ಬಾರಿ ಮತ್ತು ಡೆನ್ಮಾರ್ಕ್ 2016ರಲ್ಲಿ ಪ್ರಶಸ್ತಿ ಜಯಿಸಿದ್ದ ಸಾಧನೆ ಮಾಡಿತ್ತು.
ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಅವರು ಸಿಂಗಲ್ಸ್‌ನಲ್ಲಿ ಭಾರತದ ಸವಾಲಿನ ನೇತೃತ್ವ ವಹಿಸಲಿದ್ದಾರೆ. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎದುರಾಳಿಗೆ ತೀವ್ರ ಸವಾಲು ನೀಡಲಿದ್ದಾರೆ.