Advertisement

ವಿವೇಕಾನಂದ ಜನ್ಮದಿನಾಚರಣೆ: ಅಬಲೆಯರಿಗೆ ಆಸರೆಯಾದ ತೋಕೂರು ಸ್ಪೋರ್ಟ್ಸ್ ಕ್ಲಬ್

02:58 PM Jan 12, 2020 | keerthan |

ಹಳೆಯಂಗಡಿ: ಯುವ ಶಕ್ತಿಗೆ ಪ್ರೇರಣೆಯಾಗಿರುವ ಸ್ವಾಮೀ ವಿವೇಕಾನಂದ ಅವರ 157ನೇ ಜನ್ಮ ದಿನಾಚರಣೆಯನ್ನು ರವಿವಾರ ಇಲ್ಲಿನ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ವಿಭಿನ್ನವಾಗಿ ಅಬಲೆಯರಿಗೆ ಆಸರೆಯಾಗಿ ಶ್ರಮದಾನದ ಮೂಲಕ ಆಚರಣೆ ನಡೆಸಿದರು.

Advertisement

ಮಂಗಳೂರಿನ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಸಹಕಾರದಲ್ಲಿ ಅಶಕ್ತರಾಗಿರುವ ಬೆಳ್ಳಾಯರು ಗ್ರಾಮದ ಕೆರೆಕಾಡುವಿನ 94 ವರ್ಷದ ಕಿಟ್ಟಿ ಮಡಿವಾಳ್ತಿ ಮತ್ತು ಅವರ ಮಗಳು ಅವಿವಿವಾಹಿತೆ 56 ವರ್ಷದ ಗಿರಿಜಾ ಮಡಿವಾಳ್ತಿ ಅವರ ಮನೆಯ ಸುತ್ತ – ಮುತ್ತ ಇದ್ದ ಕಸ ಕಡ್ಡಿ, ಗಿಡ-ಗಂಟಿಗಳನ್ನು  ತೆಗೆದು, ಮನೆಯ ಆವರಣ ಹಾಗೂ ಕೋಣೆಗಳನ್ನು ಸ್ವಚ್ಚ ಮಾಡುವ ಮೂಲಕ ವಿಶೇಷವಾಗಿ ಶ್ರಮದಾನ ನಡೆಸಿದರು.

ಪಡುಪಣಂಬೂರು ಗ್ರಾಮ ಪಂ. ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ   ಸುರೇಖಾ ಕರುಣಾಕರ ಬೆಳ್ಳಾಯರು, ಸದಸ್ಯ  ಸಂತೋಷ್ ಕುಮಾರ್ ಮಾರ್ಗದರ್ಶನ ನೀಡಿದರು.

ಕ್ಲಬ್‌ನ ಗೌರವ ಅಧ್ಯಕ್ಷ ನಾರಾಯಣ ಜಿ ಕೆ, ಅಧ್ಯಕ್ಷ ಸುರೇಶ್ ಶೆಟ್ಟಿ, ಸಂತೋಷ್ ದೇವಾಡಿಗ, ದೀಪಕ್ ಸುವರ್ಣ, ಗೌತಮ್ ಬೆಲ್ಚಡ, ಸುನಿಲ್ ಜಿ. ದೇವಾಡಿಗ, ಪ್ರಶಾಂತ್ ಕುಮಾರ್ ಬೇಕಲ್, ಗಣೇಶ್ ದೇವಾಡಿಗ, ಜಗದೀಶ್ ಕೋಟ್ಯಾನ್, ಬಾಲಕೃಷ್ಣ ಲೈಟ್ ಹೌಸ್, ಸೋಮನಾಥ್,  ಮಹೇಶ್ ಸುವರ್ಣ,  ಸಂಪತ್ ದೇವಾಡಿಗ, ರಕ್ಷಣ್ ಮತ್ತಿತರರು ಪಾಲ್ಗೊಂಡಿದ್ದರು.

Advertisement

ಕ್ಲಬ್‌ನ ಕಾರ್ಯ ಮಾದರಿ
ತೋಕೂರಿನ ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಚಟುವಟಿಕೆ ಮಾದರಿಯಾಗಿದೆ, ಹಿಂದೆ ಈ ಮನೆಯ ಮೇಲ್ಛಾವಣಿಯನ್ನು ದುರಸ್ಥಿ ಮಾಡಿಕೊಟ್ಟು, ಪಡಿತರವನ್ನು ನೀಡಿದ ಸಂಸ್ಥೆಯು ಇದೀಗ ಮನೆಯ ವಾತಾವರಣವನ್ನು ಶ್ರಮದಾನದ ಮೂಲಕ ವಯೋವೃದ್ಧರಲ್ಲಿ ಸಾಧ್ಯವಾಗದ ಕೆಲಸವನ್ನು ಮಾಡಿಕೊಟ್ಟಿರುವುದು ಶ್ಲಾಘನೀಯ, ಯುವ ಸಂಸ್ಥೆಗಳು ಇಂತಹ ಕಾರ್ಯ ನಡೆಸಿದಲ್ಲಿ ಯುವ ದಿನದ ಮಹತ್ವ ಅರಿವಾಗುತ್ತದೆ.
ಮೋಹನ್‌ದಾಸ್, ಅಧ್ಯಕ್ಷರು, ಪಡುಪಣಂಬೂರು ಗ್ರಾ. ಪಂ.

Advertisement

Udayavani is now on Telegram. Click here to join our channel and stay updated with the latest news.

Next