Advertisement

ತೊಕ್ಕೊಟ್ಟು : ಕೆಟ್ಟು ನಿಂತ ಬಸ್‌ ಸಂಚಾರ ಅಸ್ತವ್ಯಸ್ತ

11:39 AM Aug 20, 2019 | sudhir |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಜಂಕ್ಷನ್‌ ಸಂಪರ್ಕಿಸುವ ಸಹರಾ ಆಸ್ಪತ್ರೆ ಬಳಿ ಬಸ್ಸೊಂದು ನಡು ರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರಕ್ಕೆ ಅಡೆತಡೆಯಾಗಿದ್ದು ಬಳಿಕ ಸ್ಥಳೀಯರು ಸೇರಿ ಬಸ್ಸನ್ನು ಸ್ವಲ್ಪ ದೂರ ದೂಡಿ ಬೇರೆ ವಾಹನಗಳಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿದರೂ ಇಕ್ಕಟ್ಟಿನ ರಸ್ತೆಯಲ್ಲಿ ಪ್ರಯಾಸದಲ್ಲಿ ಘನ ವಾಹನಗಳು ಸಂಚರಿಸುವ ಸ್ಥಿತಿ ನಿರ್ಮಾಣವಾಯಿತು. ಹೆದ್ದಾರಿಯ ಅವೈಜ್ಞಾನಿಕ ರಸ್ತೆ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

Advertisement

ಕಲ್ಲಾಪಿನಿಂದ ತೊಕ್ಕೊಟ್ಟು ಜಂಕ್ಷನ್‌ ಸಂಪರ್ಕಿಸುವ ರಸ್ತೆ ಅತ್ಯಂತ ಕಿರಿದಾಗಿದ್ದು ಏಕಮುಖ ಸಂಚಾರದಿಂದ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಸೋಮವಾರ ರಾತ್ರಿ ಮಂಗಳೂರಿನಿಂದ ಇನೋಳಿ ಕಡೆ ಸಂಚರಿಸುವ ಖಾಸಗಿ ಬಸ್‌ ತಾಂತ್ರಿಕ ತೊಂದರೆಯಿಂದ ರಸ್ತೆ ನಡುವೆ ಕೆಟ್ಟು ನಿಂತ ಪರಿಣಾಮ ತೊಕ್ಕೊಟ್ಟು ಕಡೆ ಸಂಚರಿಸುವ ಎಲ್ಲಾ ವಾಹನಗಳಿಗೆ ತಡೆಯಾಗಿದೆ. ಸುಮಾರು ಒಂದು ಗಂಟೆ ಸ್ಥಳೀಯರು ಕೆಟ್ಟು ನಿಂತ ಬಸ್ಸನ್ನು ಮುಂದೆ ದೂಡಿದ ಬಳಿಕ ಹಿಂದೆ ಸ್ಥಗಿತವಾಗಿದ್ದ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಬಸ್‌ ಸೇರಿದಂತೆ ಘನವಾಹನಗಳು ಇಕ್ಕಟ್ಟಿನ ರಸ್ತೆಯಲ್ಲಿ ಪ್ರಯಾಸಪಟ್ಟು ಮುಂದೆ ಚಲಿಸುವಂತಾಯಿತು.

ಅವೈಜ್ಞಾನಿಕ ಕಾಮಗಾರಿ: ಮೇಲ್ಸೇತುವೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾದರೂ ಕಲ್ಲಾಪಿನಿಂದ ತೊಕ್ಕೊಟ್ಟು ಸಂಪರ್ಕಿಸುವ ಈ ಹಿಂದೆ ಇದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದೇ ಸಂಚಾರಕ್ಕೆ ತಡೆಯಾಗಲುಕಾರಣವಾಗಿದ್ದು, ರಾತ್ರಿ ವೇಳೆ ಮನೆ ತಲುಪಬೇಕಾದ ಮಹಿಳೆಯರು ಪರದಾಡುವಂತಾಯಿತು. ಕಲ್ಲಾಪಿನಿಂದ ತೊಕ್ಕೊಟ್ಟಿಗೆ ಅರ್ಧ ಕಿ.ಮೀ. ಇರುವ ಈ ಸರ್ವೀಸ್‌ ರಸ್ತೆಯನ್ನು ಅಗಲೀಕರಣಗೊಳಿಸಿದರೆ ವಾಹನ ಸಂಚಾರಕ್ಕೆ ಸುಗಮವಾಗಬಹುದು. ಈ ರಸ್ತೆ ಮುಖ್ಯವಾಗಿ ದೇರಳಕಟ್ಟೆ, ಕೊಣಾಜೆ, ತಲಪಾಡಿ, ಉಳ್ಳಾಲ ಸಂಚರಿಸುವ ಬಸ್‌ಗಳು ಸೇರಿದಂತೆ ಇತರ ವಾಹನಗಳ ನಿಬಿಡ ರಸ್ತೆಯಾಗಿದ್ದು ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆ ಈ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next