ಬಂಟ್ವಾಳ: ಫರಂಗಿಪೇಟೆ ಕಡೆಗೋಳಿ ಚೌಟ ಇಂಡೇನ್ ಗ್ಯಾಸ್ ಏಜನ್ಸಿ ಕಚೇರಿಯಲ್ಲಿ ಜ. 10ರಂದು ಕಳವು ಮಾಡಿದ್ದ ಆರೋಪಿ ಮೂಡಬಿದಿರೆ ನಿವಾಸಿ ಪ್ರಸಾದ್ ಪೂಜಾರಿ(28)ಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿ ಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಾಲ್ಯದಿಂದಲೇ ಕಳವು ಮಾಡುತ್ತಿದ್ದ ಈತ ಹಲವಾರು ಕಡೆಗಳಲ್ಲಿ ಕಳವು ನಡೆಸಿದ್ದ ಆರೋಪ ಹೊತ್ತಿದ್ದ. ಒಂದು ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.
ತೊಕ್ಕೊಟ್ಟಿನ ಲಾಡ್ಜ್ನಲ್ಲಿ ಕೆಲವು ದಿನಗಳ ಹಿಂದೆ ರೂಂ ಮಾಡಿದ್ದ ಈತ ನಾಲ್ಕೈದು ದಿನಗಳಿಂದ ರೂಮಿಗೆ ಬಂದಿರಲಿಲ್ಲ. ಈ ಕಾರಣದಿಂದ ಲಾಡ್ಜ್ ನವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಉಪಸ್ಥಿತಿಯಲ್ಲಿ ಬಾಗಿಲು ತೆರೆದು ಪರಿಶೀಲಿಸಿದಾಗ ಕೊಠಡಿಯಲ್ಲಿ ಮೊಬೈಲ್, ಪೆನ್‌ಡ್ರೈವ್‌ಗಳು ಲಭಿಸಿತ್ತು. ಇದನ್ನು ಪರಿಶೀಲಿಸಿದಾಗ ಈತ ಕಳವು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದು ತಿಳಿದು ಬಂತು.
ಕೆಲವು ದಿನ ಕಳೆದು ಈತ ಲಾಡ್ಜ್ಗೆ ಬಂದಾಗ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಧಾವಿಸಿ ಬಂದ ಕಂಕನಾಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಚೌಟ ಗ್ಯಾಸ್ ಏಜೆನ್ಸಿಯಲ್ಲಿ, ಮಂಗಳೂರು ಪಡೀಲ್‌ನ ಟೊಯೋಟಾ ಕಂಪೆನಿಯಲ್ಲಿ, ಮಂಗಳೂರು ನಗರದ ಎರಡು ಮೊಬೈಲ್ ಅಂಗಡಿಯಲ್ಲಿ ಕಳವು ನಡೆಸಿರುವುದನ್ನು ಒಪ್ಪಿಕೊಂಡ.
ಕಳವು ಮಾಡಿದ ಮೊಬೈಲನ್ನು ಆರೋಪಿಯಿಂದ ವಶಪಡಿಸಿ ಕೊಳ್ಳಲಾಗಿದೆ. ಕದ್ದಿದ್ದ ಹಣದಲ್ಲಿ ಸಾಲ ಮರುಪಾವತಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ .
ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ಯೆ ಗೌಡ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.