ಬೆಂಗಳೂರು: ಬಿಬಿಎಂಪಿಯಲ್ಲಿ ಜಾರಿಗೊಳಿಸಲಾಗಿರುವ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲೂ ಗೊಂದಲಗಳು ಸೃಷ್ಟಿಯಾಗಿದೆ. ಆನ್‌ಲೈನ್ ಆಸ್ತಿ ತೆರಿಗೆ ಪಾವತಿಯಲ್ಲಿ ಉಂಟಾಗಿರುವ ತೊಂದರೆಗಳ ಬಗ್ಗೆ ಹದಿನೈದು ದಿನಗಳಲ್ಲಿ ಬರೋಬ್ಬರಿ 3931 ದೂರುಗಳು ದಾಖಲಾಗಿವೆ.
ಹಣ ಪಾವತಿಸಿದರೂ ರಸೀದಿ ಬಂದಿಲ್ಲ. ಕಳೆದ ಬಾರಿ ಪಾವತಿಸಿದ ಆಸ್ತಿ ತೆರಿಗೆ ಅಪ್‌ಡೇಟ್ ಆಗಿಲ್ಲ, ಎರಡು ಬಾರಿ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ, ಕಳೆದ ಸಾಲಿನಲ್ಲಿ ಬಾಕಿ ತೆರಿಗೆ ಪಾವತಿಸಿದ್ದರೂ ಬಾಕಿ ಮೊತ್ತ ತೋರಿಸುತ್ತಿದೆ. ಹೀಗೆ ನಾನಾ ರೀತಿಯ ಸಮಸ್ಯೆಗಳ ಬಗ್ಗೆ ಆಸ್ತಿ ತೆರಿಗೆದಾರರು ಇ-ಮೇಲ್ ಮೂಲಕ ದೂರು ದಾಖಲಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿಯ ವೇಳೆ ಅನುಸರಿಸಬೇಕಾದ ವಿಧಾನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ.
ಪೂರ್ವ ಸಿದ್ಧತೆ ಕೈಗೊಳ್ಳದೆ ಏಕಾಏಕಿ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿ, ತೆರಿಗೆದಾರರು ತೊಂದರೆ ಅನುಭವಿಸುವಂತಾಗಿತ್ತು. ಹೀಗಾಗಿ, ಈ ಬಾರಿ ಆ ರೀತಿಯ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆನ್‌ಲೈನ್ ಆಸ್ತಿ ತೆರಿಗೆ ವ್ಯವಸ್ಥೆ ಕುರಿತು ವಾರ್ಡ್ ಕಚೇರಿಗಳು ಹಾಗೂ ಪಾಲಿಕೆಯ ಕೇಂದ್ರ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಕಡ್ಡಾಯವಾಗಿ ಒದಗಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಇ-ಮೇಲ್ ಮೂಲಕ ದೂರು: ಆನ್‌ಲೈನ್ ಆಸ್ತಿ ತೆರಿಗೆ ಪಾವತಿಯಲ್ಲಿ ಗೊಂದಲ ಅಥವಾ ತೊಂದರೆ ಉಂಟಾದರೆ ತೆರಿಗೆದಾರರು ಬಿಬಿಎಂಪಿಗೆ ಇ-ಮೇಲ್ ಮೂಲಕ ದೂರು ನೀಡಬಹುದಾಗಿದೆ. ತೆರಿಗೆದಾರರ ದೂರುಗಳನ್ನು ಪರಿಶೀಲಿಸಲಿರುವ ಅಧಿಕಾರಿಗಳು ಶೀಘ್ರ ಇತ್ಯರ್ಥಕ್ಕೆ ಮುಂದಾಗಲಿದ್ದಾರೆ. ಬಿಬಿಎಂಪಿ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಸಿಸ್ಟಂ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ರೈಸ್ ಕಂಪ್ಲೆಂಟ್ ಎಂಬಲ್ಲಿ ಆಸ್ತಿದಾರರ ವಿವರ ಮತ್ತು ಎದುರಿಸುತ್ತಿರುವ ತೊಂದರೆಗಳ ಕುರಿತು ದೂರು ನೀಡಬಹುದಾಗಿದೆ.
ಬೆಂಗಳೂರಿನಲ್ಲಿ ಆಸ್ತಿಯನ್ನು ಹೊಂದಿದ್ದು ವಿದೇಶಗಳಲ್ಲಿರುವ ನಾಗರಿಕರಿಗೆ ಆನ್‌ಲೈನ್ ಆಸ್ತಿ ತೆರಿಗೆ ಪಾವತಿಯ ವೇಳೆ ಇಂಟರ್‌ನ್ಯಾಷನಲ್ ಡೆಬಿಟ್ ಕಾರ್ಡ್ ಬಳಸಿ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಇಂಟರ್‌ನ್ಯಾಷನಲ್ ಡೆಬಿಟ್ ಕಾರ್ಡ್‌ಗಳ ಮೂಲಕವೂ ತೆರಿಗೆ ಪಾವತಿಗೆ ಅವಕಾಶ ನೀಡುವ ಕುರಿತಂತೆ ಬ್ಯಾಂಕ್‌ಗಳೊಂದಿಗೆ ಶೀಘ್ರದಲ್ಲಿಯೇ ಸಭೆ ಕರೆದು ಚರ್ಚಿಸಲು ತೀರ್ಮಾನಿಸಿದೆ.
ಕಾರಣವೇನು?: ಕಳೆದ ಸಾಲಿನಲ್ಲಿ ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಹಾಗೂ ವಲಯ ವರ್ಗೀಕರಣವನ್ನು ಮಾಡಲಾಗಿತ್ತು. ಅದರ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಎರಡುಪಟ್ಟು ಹೆಚ್ಚಾಗಿತ್ತು. ವಲಯ ವರ್ಗೀಕರಣವನ್ನು ವಿರೋಧಿಸಿ ಪ್ರತಿಪಕ್ಷ ತೀವ್ರ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ವಲಯ ವರ್ಗೀಕರಣ ಹಿಂಪಡೆಯಲಾಗಿತ್ತು. ಆದರೆ, ಆ ವೇಳೆಗಾಗಲೇ ಸಾವಿರಾರು ನಾಗರಿಕರು ತೆರಿಗೆ ಪಾವತಿಸಿದ್ದರು. ಅದರ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅವರು ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.
ಪ್ರಸಕ್ತ ಸಾಲಿನಲ್ಲಿ ನಾಗರಿಕರಿಗೆ ಆನ್‌ಲೈನ್ ತೆರಿಗೆ ಪಾವತಿಯ ವೇಳೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಕಳೆದ ಸಾಲಿನಲ್ಲಿ ಎರಡು ಬಾರಿ ತೆರಿಗೆ ಪಾವತಿಸಿರುವ ಮತ್ತು ಹೆಚ್ಚಿನ ತೆರಿಗೆ ಪಾವತಿಸಿದವರ ತೆರಿಗೆ ಪಾವತಿಯ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
* ವೆಂ.ಸುನೀಲ್ ಕುಮಾರ್