Advertisement

ಈ ವಾರ ಓಳ್‌ ಮುನ್ಸಾಮಿ ಆಟ

11:31 AM May 21, 2018 | |

“ಸದ್ಯದಲ್ಲೇ ನಿಮ್ಮೂರಿಗೆ ಬರ್ತಾ ಇದೀನಿ. ಗಂಟೆ, ಜಾಗಟೆ, ತಮಟೆ ರೆಡಿ ಮಾಡಿಕೊಳ್ಳಿ…’ ನಟ ಕಾಶಿನಾಥ್‌ ಡಬ್ಬಿಂಗ್‌ ವೇಳೆ ಈ ಡೈಲಾಗ್‌ ಹೇಳಿದ್ದರು. ಅದಾದ ಬಳಿಕ ಅವರು ಬಣ್ಣದ ಬದುಕಿಗೆ ಇತಿಶ್ರೀ ಹಾಡಿದರು. ಕಾಕತಾಳೀಯ ಎಂಬಂತೆ ಕಾಶಿನಾಥ್‌ ಡಬ್ಬಿಂಗ್‌ನಲ್ಲಿ ಈ ಮಾತುಗಳನ್ನಾಡಿದ ಕೆಲ ದಿನಗಳಲ್ಲೇ ಅವರು ಇಹಲೋಕ ತ್ಯಜಿಸಿದರು.

Advertisement

ಕಾಶಿನಾಥ್‌ ಅಭಿನಯದ 50 ನೇ ಚಿತ್ರ “ಓಳ್‌ ಮುನ್ಸಾಮಿ’. ಇದು ಅವರ ಕೊನೆಯ ಚಿತ್ರವೂ ಹೌದು. ಈ ಚಿತ್ರದ ನಿರ್ದೇಶಕ ಆನಂದಪ್ರಿಯ ಅವರಿಗೂ ಇದು ಮೊದಲ ಚಿತ್ರ. ಚಿತ್ರೀಕರಣ ಮುಗಿಸಿ, ಡಬ್ಬಿಂಗ್‌ ಕೂಡ ಮಾಡಿದ್ದ ಕಾಶಿನಾಥ್‌, ಮೇಲಿನ ಡೈಲಾಗ್‌ ಹೇಳ್ಳೋಕೆ ಸ್ವಲ್ಪ ಸಮಯ ತೆಗೆದುಕೊಂಡಿದ್ದರಂತೆ. ಎಲ್ಲಾ ಮುಗಿದ ಮೇಲೆ, ಒಂದು ಡೈಲಾಗ್‌ ಅನ್ನು ಕೊನೆಯಲ್ಲಿ ಹೇಳುವುದಾಗಿ ತಿಳಿಸಿದ್ದರಂತೆ ಕಾಶಿನಾಥ್‌.

ಕೆಲಸ ಮುಗಿಸಿಕೊಂಡು ಸಣ್ಣ ಡೈಲಾಗ್‌ ಹೇಳ್ಳೋಕೆ ಡಬ್ಬಿಂಗ್‌ ಸ್ಟುಡಿಯೋಗೆ ಬಂದ ಕಾಶಿನಾಥ್‌ ಅವರಿಗೆ ನಿರ್ದೇಶಕರು “ಕಂಟೆಂಟ್‌ ಇದ್ದ ಮೇಲೆ ಕಟೌಟ್‌ ಯಾಕೆ, ಸದ್ಯದಲ್ಲೇ ನಿಮ್ಮೂರಿಗೆ ಬರ್ತಾ ಇದೀನಿ’ ಎಂಬ ಡೈಲಾಗ್‌ ಹೇಳಬೇಕು ಅಂತ ಒಂದು ಡೈಲಾಗ್‌ ಶೀಟ್‌ ಕೊಟ್ಟರಂತೆ. ಆ ಡೈಲಾಗ್‌ ಓದಿದ ಕಾಶಿನಾಥ್‌, ಇದಕ್ಕೆ ಇನ್ನೇನೋ ಕೊರತೆ ಇದೆ.

ಅಂತ, ಕೊನೆಯಲ್ಲಿ ಅವರೇ ಒಂದು ಡೈಲಾಗ್‌ ಸೇರಿಸಿಕೊಂಡರಂತೆ. ಆ ಡೈಲಾಗೇ “ಸದ್ಯದಲ್ಲೇ ನಿಮ್ಮೂರಿಗೆ ಬರ್ತಾ ಇದೀನಿ. ಗಂಟೆ, ಜಾಗಟೆ, ತಮಟೆ ರೆಡಿ ಮಾಡಿಕೊಳ್ಳಿ’ ಎಂಬುದು. ಕಾಶಿನಾಥ್‌ ಅಭಿನಯದ 50 ನೇ ಚಿತ್ರ ನಿರ್ದೇಶಿಸಿದ್ದು ನಿರ್ದೇಶಕ ಆನಂದಪ್ರಿಯ ಅವರಿಗೆ ಒಂದು ಕಡೆ ಹೆಮ್ಮೆಯಾದರೆ, ಇನ್ನೊಂದು ಕಡೆ ದುಃಖ. “ನನ್ನ ಮೊದಲ ಚಿತ್ರವೇ ಕಾಶಿನಾಥ್‌ ಅವರ ಕೊನೆಯ ಚಿತ್ರ ಆಗಬೇಕಿತ್ತಾ’ ಎಂದು ಬೇಸರ ವ್ಯಕ್ತಪಡಿಸುವ ಆನಂದಪ್ರಿಯ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ.

ಕಾರಣ, ಸ್ಕ್ರಿಪ್ಟ್. ಒಳ್ಳೆಯ ಕಥೆ ಇರುವ ಚಿತ್ರ ಇದಾಗಿದ್ದು, ಇಡೀ ಸಮಾಜಕ್ಕೊಂದು ಸಂದೇಶ ಕೊಡುವ ಅಂಶ ಇಲ್ಲಿದೆ. ಒಬ್ಬ ಡೋಂಗಿ ಸ್ವಾಮೀಜಿ ಸುತ್ತ ನಡೆಯೋ ಕಥೆ ಇದು. ಮನುಷ್ಯ ಮಾನವೀಯತೆ ಮರೆತು ಬದುಕುತ್ತಿರುವ ಕಾಲದಲ್ಲಿ, ಅಂತಹವರಿಗೊಂದು ಜಾಗ್ರತೆ ಮೂಡಿಸುವಂತಹ ವಿಷಯಗಳು ಇಲ್ಲಿವೆ. ಕಾಶಿನಾಥ್‌ ಅಂದಾಕ್ಷಣ, ಡಬ್ಬಲ್‌ ಮೀನಿಂಗ್‌ ನೆನಪಾಗುತ್ತೆ. ಇಲ್ಲಿ ಅದ್ಯಾವುದೂ ಇಲ್ಲ.

Advertisement

ಆದರೆ, ಸ್ಟ್ರಾಂಗ್‌ ಮೆಸೇಜ್‌ ಅವರ ಮೂಲಕವೇ ಹೊರಬರಲಿದೆ. ಒಂದು ಮನರಂಜನೆ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ವಿಷಯ ಇಲ್ಲಿದೆ. ಎರಡು ಗಂಟೆ ಕಾಲ ಯಾವುದೇ ಬೋದನೆ ಇರದ, ಮನರಂಜನೆ ವಿಷಯಗಳು ಮಾತ್ರ ನೋಡುಗರನ್ನು ರಂಜಿಸಲಿವೆ ಎನ್ನುತ್ತಾರೆ ನಿರ್ದೇಶಕರು. ಟೈಟಲ್‌ ಸಾಂಗ್‌ವೊಂದರಲ್ಲಿ ಕಾಶಿನಾಥ್‌ ಅವರು ಇರಬೇಕಿತ್ತು. ಅವರಿಗಾಗಿಯೇ ಬರೆದ ಹಾಡು ಅದು.

ಆದರೆ, ಅವರೇ ಕಣ್ಮರೆಯಾದರು. ಆದರೆ, ಹಾಡು ಬಿಡದೆ, ಸಿನಿಮಾದಲ್ಲಿ ಅಳವಡಿಸಿದ್ದೇವೆ. ಅವರ ಪಾತ್ರವನ್ನು ಬಿಂಬಿಸುವ ಹಾಡು ಎನ್ನುವ ಆನಂದಪ್ರಿಯ, ಇಲ್ಲಿ ಕಾಶಿನಾಥ್‌ ಯಾರಿಗೂ ವಿಭೂತಿ ಕೊಟ್ಟು ಭವಿಷ್ಯ ನುಡಿಯಲ್ಲ. ನಮ್ಮೊಳಗಿನ ಒಬ್ಬ ಸಾಮಾನ್ಯ ಮನುಷ್ಯರಾಗಿ ಕಾಣುತ್ತಾರೆ. ಆತನ ಒಳ್ಳೆಯತನ ನೋಡಿ, ಹಳ್ಳಿಯಲ್ಲಿರುವ ಹೀರೋ, ಅವನೊಬ್ಬ ಡೋಂಗಿ ಅಂತ ಸಾಬೀತುಪಡಿಸಲು ಹೋರಾಡುತ್ತಾನೆ.

ಕ್ಲೈಮ್ಯಾಕ್ಸ್‌ನಲ್ಲಿ ಆ ಸ್ವಾಮೀಜಿ ಒಳ್ಳೆಯವನಾ, ಕೆಟ್ಟವನಾ ಅನ್ನೋದೇ ಸಸ್ಪೆನ್ಸ್‌ ಎನ್ನುತ್ತಾರೆ ನಿರ್ದೇಶಕರು. ಕುಲುಮನಾಲಿ, ಚಿಕ್ಕಮಗಳೂರು, ಮೂಡಿಗೆರೆ, ದೇವರಮನೆ ಕಾಡು ಇತರೆಡೆ ಚಿತ್ರೀಕರಿಸಲಾಗಿದೆ. ರಂಗಭೂಮಿಯ 65 ಕಲಾವಿದರು ಮೊದಲ ಸಲ ನಟಿಸಿರುವುದು ವಿಶೇಷ. ನಿರಂಜನ್‌ ಒಡೆಯರ್‌ ನಾಯಕರಾದರೆ, ಅವರಿಗೆ ಅಖೀಲಾ ನಾಯಕಿ. ಸಮೂಹ ಟಾಕೀಸ್‌ ಬ್ಯಾನರ್‌ನಲ್ಲಿ ಶೇಖರ್‌ಬಾಬು ಚಿತ್ರ ನಿರ್ಮಿಸಿದ್ದಾರೆ. ಸತೀಶ್‌ ಬಾಬು ಸಂಗೀತವಿದೆ. ನಾಗಾರ್ಜುನ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next