Advertisement

ಸ್ವಾತಂತ್ರ್ಯ ಪೂರ್ವದಿಂದಲೂ ಈ ಗ್ರಾಮಕ್ಕೆ ಬಸ್‌ ಸೌಕರ್ಯವಿಲ್ಲ!

12:45 PM Sep 19, 2017 | Team Udayavani |

ಹುಣಸೂರು: ರಸ್ತೆಗಳು ದೇಶದ ನರನಾಡಿಗಳು, ಸುಗಮ ಸಂಚಾರಕ್ಕೆ ರಸ್ತೆಗಳೇ ಸಹಕಾರಿ ಎಂಬೆಲ್ಲಾ ವಿಷಯಗಳು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಗೊತ್ತಿದ್ದರೂ ಸ್ವಾತಂತ್ರ್ಯ ಪೂರ್ವದಿಂದಲೂ ಬಸ್‌ ಸೌಕರ್ಯವಿಲ್ಲದೆ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ. ಹುಣಸೂರು ತಾಲೂಕು ಹನಗೋಡು ಹೋಬಳಿಯ ಕೂಡ್ಲೂರು ಹೊಸೂರು ರಸ್ತೆಯ ಅವ್ಯವಸ್ಥೆಯಿಂದ ಕೂಡಿದ್ದು ಬಸ್‌ ಸೌಕರ್ಯವಿಲ್ಲದೆ ಗ್ರಾಮಸ್ಥರು ಹೈರಾಣಾಗಿದ್ದಾರೆ.  

Advertisement

ಹಳ್ಳಿಯಲ್ಲಿರುವ ಒಂದೇ ಒಂದು ಸಂಪರ್ಕ ರಸ್ತೆಗೆ ಈ ಹಿಂದೆ ಹಾಕಿದ್ದ ಜಲ್ಲಿಕಲ್ಲು ಗಳು ಮೇಲೆದ್ದಿವೆ. ಅಲ್ಲಲ್ಲಿ ಗುಂಡಿಗಳಾಗಿದ್ದು, ಮಳೆ ಬಂತೆಂದರೆ ಇದು ರಸ್ತೆಯೇ ಕೆಸರು ಗದ್ದೆಯೋ ಎಂಬಂತಾಗಿದೆ. ಈ ಕುರಿತು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. 

ಕೂಡ್ಲೂರು ಮುಖ್ಯ ರಸ್ತೆಯಿಂದ  ಸುಮಾರು 2 ಕಿ.ಮೀ ದೂರವಿರುವ ಹೊಸೂರು ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಡೇರಿ ಕೇಂದ್ರವೂ ಇದೆ. ಸ್ವಾತಂತ್ರ್ಯಬಂದಂದಿನಿಂದಲೂ ಇಲ್ಲಿಗೆ ಬಸ್‌ ಸಂಪರ್ಕವೂ ಇಲ್ಲ.  

ಜಿಪಂ ರಸ್ತೆ ಇದು: ಜಿಪಂ ಎಂಜಿನಿಯರಿಂಗ್‌ ವ್ಯಾಪ್ತಿಗೆ ಸೇರಿದ ಈ ರಸ್ತೆ ಅಭಿವೃದ್ಧಿ ಕಂಡು ವರ್ಷಗಳೇ ಉರುಳಿವೆ. ಮಳೆಗಾಲ ಬಂದರಂತೂ ರಸ್ತೆಯಲ್ಲಿ ತಿರುಗಾಡುವವರಿಗೆ ತಮ್ಮೂರಿನ ರಸ್ತೆ ಅವ್ಯವಸ್ಥೆ ಅಸಹ್ಯವೆನಿಸಿದೆ. ಊರೊಳಗಿನ ರಸ್ತೆ ಸೇರಿದಂತೆ ಸಂಪರ್ಕ ರಸ್ತೆಯೂ ಗದ್ದೆ ಕೆಸರಿನಂತಾಗಿ ಓಡಾಡಲಾಗದ ಪರಿಸ್ಥಿತಿ ಇದೆ.

ಎಲ್ಲದಕ್ಕೂ ಕೆಸರು ಗದ್ದೆಯನ್ನೇ ಅವಲಂಬಿಸಬೇಕು: ಊರಿನವರು ಶಾಲೆ, ಆಸ್ಪತ್ರೆ, ಅಂಗಡಿಗೆ ಬರಲು ಈ ರಸ್ತೆಯಲ್ಲೇ ಓಡಾಡಬೇಕಿದೆ. ಶಾಲಾ ಮಕ್ಕಳಂತೂ ಪಕ್ಕದ ಕೂಡ್ಲೂರಿನ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜಿಗೆ ಬರಲು ಹರಸಾಹಸ ಪಡುತ್ತಿದ್ದಾರೆ.ಇನ್ನು ಮಳೆಗಾಲದಲ್ಲಿ ಗ್ರಾಮಸ್ಥರು ತಮ್ಮ ದ್ವಿಚಕ್ರವಾಹನ ಹಾಗೂ ಸೈಕಲ್‌ಗ‌ಳನ್ನು ಮನೆಯಿಂದಾಚೆ ತೆಗೆಯಲಾರದ ಸ್ಥಿತಿ ಇಲ್ಲಿದೆ.

Advertisement

ಕೂಡ್ಲೂರು ಡೇರಿಗೆ ಹಾಲು ಹಾಕಲು ತೆರಳದಂತಾಗಿದ್ದು ಸಂಕಷ್ಟ ಎದುರಿಸುತ್ತಿದ್ದಾರೆ. ತಂಬಾಕು ಬೆಳೆಗಾರರು ಜಮೀನಿಗೆ ತೆರಳಲು ಹಾಗೂ ಸೌದೆ ವಾಹನಗಳು ಗ್ರಾಮದೊಳಕ್ಕೆ ಬರಲು ಹಿಂಜರಿಯುತ್ತಿವೆ. ಕನಿಷ್ಟ ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡಬೇಕಾದ ಜಿಪಂ ಎಂಜಿನಿಯರಿಂಗ್‌ ವಿಭಾಗವೂ ಕಣ್ಮುಚ್ಚಿ ಕುಳಿತಿದೆ.

ಪರ್ಯಾಯ ರಸ್ತೆಯೂ ಮುಚ್ಚಿದೆ: ಈ ಗ್ರಾಮಕ್ಕೆ ಇದೊಂದೇ ರಸ್ತೆ ಇದ್ದರೆ, ಹಾರಂಗಿ ನಾಲಾ ಏರಿ ಮೇಲೆ ಪರ್ಯಾಯವಾಗಿ ಓಡಾಡುತ್ತಿದ್ದರೂ ಅದು ಕೂಡ ಗುಂಡಿ ಬಿದ್ದಿದೆ. ಇತ್ತೀಚೆಗೆ ಮರವೊಂದು ಬಿದ್ದು ಹೋಗಿದ್ದು, ಆ ರಸ್ತೆಯೂ ಬಂದಾಗಿದೆ. ಈ ರಸ್ತೆ ಅಭಿವೃದ್ಧಿಗೆ ಶಾಸಕ ಮಂಜುನಾಥ್‌ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೂ ಅನೇಕ ಬಾರಿ ಮನವಿ ಮಾಡಿದರೂ ಫ‌ಲ ನೀಡುತ್ತಿಲ್ಲ. 

ನಮ್ಮೂರು ಕುಗ್ರಾಮವಾಗಿದ್ದು, ಎಲ್ಲದಕ್ಕೂ ಕೂಡ್ಲೂರು ಹಾಗೂ ಹುಣಸೂರನ್ನೇ ಅವಲಂಬಿಸಲಾಗಿದೆ. ರಸ್ತೆ ಅವ್ಯವಸ್ಥೆಯಿಂದ ನೊಂದು-ಬೆಂದು ಹೋಗಿದ್ದೇವೆ. ಗ್ರಾಮದಿಂದ ಶಾಲೆಗೆ ಹೋಗಲಾರದ ಸ್ಥಿತಿ ಇದೆ. ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಎನ್ನುವ ಶಾಸಕರಿಗೆ ನಮ್ಮೂರ ರಸ್ತೆಯ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ಈಗಲಾದರೂ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಿ ಎಂದು ಐದನೇ ತರಗತಿ ಬಾಲಕಿ ಪೂಜಾ ಮನವಿ ಮಾಡಿದ್ದಾಳೆ.

ಈ ಪುಟ್ಟ ಹಳ್ಳಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಕೂಡ್ಲೂರು ಹಾಗೂ ಹುಣಸೂರಿಗೆ ಶಾಲಾ-ಕಾಲೇಜಿಗೆ ಬರುತ್ತಾರೆ. ಜಮೀನುಗಳಿಗೆ ತೆರಳುವ ರೈತರ ಸ್ಥಿತಿ ಆಯೋಮಯವಾಗಿದೆ. ಇಷ್ಟೆಲ್ಲಾ ಸಮಸ್ಯೆ ಇರುವ ನಮ್ಮ ಹಳ್ಳಿಯ ಸರ್ವಾಗೀಣ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಲಿ.
-ಶ್ವೇತಪ್ರಿಯಾ, ಹೊಸೂರು ಉಪನ್ಯಾಸಕಿ

ಊರಿನ ರಸ್ತೆ ಸಮಸ್ಯೆ ಬಗ್ಗೆ ಅರಿವಿದೆ. ರಸ್ತೆ ಅಭಿವೃದ್ಧಿಗೊಳಿಸುವಷ್ಟು ಜಿಪಂ ಕ್ಷೇತ್ರಕ್ಕೆ ಅನುದಾನ ಸಿಗಲ್ಲ. ಹೀಗಾಗಿ ಶಾಸಕರ ಮೇಲೆ ಒತ್ತಡ ಹಾಕಿ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ.
-ಜಯಲಕ್ಷ್ಮೀ, ಜಿಪಂ ಸದಸ್ಯೆ

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next