Advertisement

ಈ ಮರ, ಅಜರಾಮರ

03:27 PM Jan 13, 2018 | Team Udayavani |

ನಗರದಲ್ಲಿ ಮಳೆ-ಗಾಳಿಗೆ ಪ್ರತಿವರ್ಷವೂ ನೂರಾರು ಮರಗಳು ಧರೆಗುರುಳುತ್ತವೆ. ಅವುಗಳಲ್ಲಿ ಬೃಹತ್‌ ಗಾತ್ರದ, ನೂರು-ಇನ್ನೂರು ವರ್ಷ ಹಳೆಯ ಮರಗಳೂ ಇರುತ್ತವೆ. ಹಾಗೆ ಉರುಳಿದ ಮರಗಳನ್ನು ಟೆಂಡರ್‌ ಕರೆದು ಮಾರುವುದು ವಾಡಿಕೆ. ಹೀಗೆ ಲಕ್ಷಾಂತರ ಬೆಲೆಬಾಳುವ ಮರಗಳು ಬಹಳ ಕಡಿಮೆ ಬೆಲೆಗೆ ಮಾರಾಟವಾಗಿ, ಉರುವಲಾಗಿ  ಹೋಗುತ್ತವೆ. 

Advertisement

ಲಾಲ್‌ಬಾಗ್‌ನಲ್ಲಿಯೂ ಕಳೆದ ಮಳೆಗಾಲದಲ್ಲಿ ಇನ್ನೂರೈವತ್ತು ವರ್ಷಗಳಷ್ಟು ಹಳೆಯ ಮರಗಳು ಉರುಳಿಬಿದ್ದಿದ್ದವು. ಈ ಬಾರಿ ಮರಗಳನ್ನು ಮಾರದೆ, ಅವುಗಳನ್ನು ಇನ್ನೂ ನೂರಾರು ವರ್ಷಗಳ ಕಾಲ ಉಳಿಸಿಕೊಳ್ಳುವ ಪ್ರಯತ್ನವೊಂದು ನಡೆಯುತ್ತಿದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ, 15 ದಿನಗಳ  “ರಾಷ್ಟ್ರೀಯ ಸಮಕಾಲೀನ ಜನಪರ ಮರಕೆತ್ತನೆ’ ಶಿಬಿರ ಆಯೋಜನೆಯಾಗಿದೆ.

ಹಳೆಯ ಮರಗಳನ್ನು ಸಂರಕ್ಷಿಸುವುದು ಹಾಗೂ ಜನರಲ್ಲಿ ಪರಿಸರ ಕಾಳಜಿ ಮೂಡಿಸುವುದು ಈ ಶಿಬಿರದ ಉದ್ದೇಶ. ಶಿಬಿರ ಮುಗಿದ ನಂತರ ಲಾಲ್‌ಬಾಗ್‌ನಲ್ಲಿಯೇ ಈ ಶಿಲ್ಪಗಳ ಮ್ಯೂಸಿಯಂ ಮಾಡಿ ಪ್ರದರ್ಶನಕ್ಕಿಡಲಾಗುವುದು. ಒಂದುಕಾಲದಲ್ಲಿ ಜೀವಂತವಾಗಿದ್ದ ಮರಗಳನ್ನು ಶಿಲ್ಪಗಳ ಮೂಲಕ ಉಳಿಸಿಕೊಳ್ಳುವ ಪ್ರಯತ್ನವಿದು. 

ಶಿಲ್ಪಕಲಾ ಅಕಾಡೆಮಿಯ 45 ಶಿಲ್ಪಿಗಳು ಸೇರಿದಂತೆ, ಗುಜರಾತ್‌, ಕಾಶ್ಮೀರ,  ಹೈದರಾಬಾದ್‌, ಕೋಲ್ಕತ್ತಾ, ಮುಂಬೈನ 70ಕ್ಕೂ ಹೆಚ್ಚು ಕಲಾವಿದರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ರಾಮನಗರದ ಶಿವಪ್ರಸಾದ್‌ ಅವರು ಈ ಶಿಬಿರದ ನಿರ್ದೇಶಕರು. ಆಸಕ್ತರಿಗೆ ಕೆತ್ತನೆ ಕೆಲಸದ ಸೂಕ್ಷ್ಮಗಳನ್ನು ತಿಳಿಸಿಕೊಡಲಾಗುವುದು. ನಿರ್ಜೀವ ಮರದ ತುಂಡುಗಳಿಂದ ಸುಂದರ ಶಿಲ್ಪಗಳು ಮೂಡುವ ಸೋಜಿಗವನ್ನು, ಶಿಲ್ಪಿಗಳ ಕೈಚಳಕವನ್ನು ಕಣ್ತುಂಬಿಸಿಕೊಳ್ಳಲು ಲಾಲ್‌ಬಾಗ್‌ಗೆ ಬನ್ನಿ.

ಎಲ್ಲಿ?: ಗಾಜಿನಮನೆ ಹಿಂಭಾಗದ ಆವರಣ, ಲಾಲ್‌ಬಾಗ್‌
ಯಾವಾಗ?: ಜ. 13 ರಿಂದ 27ರವರೆಗೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next