Advertisement

ಪುತ್ತೂರಿನಲ್ಲಿ ಈ ಬಾರಿ ಬ್ಯಾನರ್‌ ರಹಿತ ಚುನಾವಣೆ

11:58 AM Apr 01, 2018 | Team Udayavani |

ಪುತ್ತೂರು: ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಸಿದ್ಧತೆ ಒಂದೆಡೆಯಾದರೆ, ಇನ್ನೊಂದೆಡೆ ಚುನಾವಣೆ ಸಂಬಂಧಿ ಅಧಿಕಾರಿಗಳು ಚುರುಕಿನ ಸಿದ್ಧತೆ ನಡೆಸುತ್ತಿದ್ದಾರೆ. 206 ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಲ್ಲಿ ಜಾರಿ ಗೊಳಿಸಲು ನಿರ್ಧರಿಸಿದ್ದಾರೆ.

Advertisement

ಪಾರದರ್ಶಕ ಚುನಾವಣೆಯ ಹಿನ್ನೆಲೆಯಲ್ಲಿ ಈ ಹಿಂದೆ ನಡೆದ ಚುನಾವಣೆಗಳಿಗಿಂತಲೂ ಈ ಬಾರಿ ಹೆಚ್ಚಿನ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಾಜಕೀಯ ಪ್ರೇರಿತ ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಗಡಿಗಳಲ್ಲಿ ಚೆಕ್‌ಪೋಸ್ಟ್‌
ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಗಡಿ ಭಾಗಗಳಲ್ಲಿ ವಿಶೇಷವಾಗಿ ಚೆಕ್‌ ಪೋಸ್ಟ್‌ ಗಳನ್ನು ತೆರೆದು ವಾಹನಗಳ ತಪಾಸಣೆ ಆರಂಭಿಸಲಾಗಿದೆ. ಕೇರಳ – ಕರ್ನಾಟಕ ಗಡಿ ಭಾಗಗಳಾದ ಈಶ್ವರಮಂಗಲ, ಪಾಣಾಜೆ, ಸ್ವರ್ಗ, ಕಬಕ, ಸಾರಡ್ಕ ಮೊದಲಾದ ಕಡೆಗಳಲ್ಲಿ ಚೆಕ್ಕಿಂಗ್‌ ವಿಭಾಗ ತೆರೆಯಲಾಗಿದೆ. ಪರಿವೀಕ್ಷಣ ತಂಡ ಸಮೀಕ್ಷೆ ನಡೆಸಲಿದೆ.

ಬ್ಯಾನರ್‌ ರಹಿತ ಚುನಾವಣೆ
ಸಾರ್ವಜನಿಕ, ಖಾಸಗಿ ಜಾಗಗಳಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆಯದೆ ಬಂಟಿಂಗ್ಸ್‌, ಬ್ಯಾನರ್‌ಗಳನ್ನು ಅಳವಡಿಸಲು ಅವಕಾಶ ನಿರಾಕರಿಸಲಾಗಿದೆ. ಪುತ್ತೂರಿನಲ್ಲಿ ಬ್ಯಾನರ್‌ ರಹಿತ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಅತಿ ಮುಖ್ಯ ಕಾರ್ಯಕ್ರಮಗಳಿದ್ದರೆ ಒಂದು ದಿನಕ್ಕೆ ಬ್ಯಾನರ್‌ ಅಳವಡಿಸಲು ಅವಕಾಶ ನೀಡಲಾಗುತ್ತದೆ. ಉಳಿದಂತೆ ತೆರವು ಮಾಡುವುದು ಕಡ್ಡಾಯಗೊಳಿಸಲಾಗಿದೆ.

ಗೊಂದಲ ಬೇಡ
ಮಾಮೂಲಾಗಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಇಂತಹ ಕಾರ್ಯಕ್ರಮಗಳ ಮೂಲಕ ರಾಜಕೀಯ ಪ್ರೇರಿತವಾಗಿ ಊಟ ಹಾಕುವುದು, ಬ್ಯಾನರ್‌ ಅಳವಡಿಸುವುದು, ವ್ಯವಸ್ಥೆಗಳನ್ನು ಪ್ರಾಯೋಜಿಸುವುದು ಇತ್ಯಾದಿಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಆಮಿಷ ಒಡ್ಡುವ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ಕಾರ್ಯಕ್ರಮಗಳ ಕುರಿತು ಗಮನಕ್ಕೆ ತರುವುದು ಉತ್ತಮ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Advertisement

ಅನುಮತಿಗೆ ವ್ಯವಸ್ಥೆ
ಕಾರ್ಯಕ್ರಮಗಳ ಅನುಮತಿಗಾಗಿ ಕೇಂದ್ರಿತ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮಗಳನ್ನು ಆಯೋಜಿಸುವವರು ಎಸಿ ಕಚೇರಿಗೆ ಬಂದು ಈ ವ್ಯವಸ್ಥೆಯ ಮೂಲಕ ಅನುಮತಿ ಪಡೆದುಕೊಳ್ಳಬಹುದು. ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಇಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಆ ಮೂಲಕ ಒಂದು ದಿನದೊಳಗೆ ಅನುಮತಿ ಕೊಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪಾರದರ್ಶಕ ಚುನಾವಣೆಗೆ ಎಲ್ಲರೂ ಸಹಕರಿಸಿ
ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ನಮಗೂ ಜವಾಬ್ದಾರಿ ಮತ್ತು ಭಯ ಇರುತ್ತದೆ. ಯಾವುದೇ ಅಹಿತಕರ ವಿಚಾರಗಳು ನಡೆಯದಂತೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಚುನಾವಣೆ ನಡೆಯುವವರೆಗೂ ವಿಜೃಂಭಣೆಯ ಕಾರ್ಯಕ್ರಮಗಳ ಆಯೋಜನೆ ಬೇಡ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಾವು ಬದ್ಧರಿದ್ದೇವೆ.
– ಎಚ್‌.ಕೆ. ಕೃಷ್ಣಮೂರ್ತಿ
ಚುನಾವಣಾಧಿಕಾರಿ ಹಾಗೂ ಸಹಾಯಕ
ಕಮಿಷನರ್‌, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next