ನಂಜನಗೂಡು: ಇಲ್ಲಿನ ಉಪ ಚುನಾವಣೆಯ ಪ್ರಚಾರ ತಾರಕಕ್ಕೇರಿದ್ದು ಈ ಮಧ್ಯೆ ಹೊಸ ಸಂವತ್ಸರಕ್ಕೆ ಜನತೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೀವನದಲ್ಲಿ ಸಿಹಿ ಕಹಿಗಳೆರಡನ್ನು ಸಮವಾಗಿ ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳೆ ಬೇಕೆಂಬ ಸದಾಶಯ ಬೀರುವ ಉದ್ದೇಶದಿಂದಲೆ ಬೇವು ಬೆಲ್ಲ ತಿನ್ನುವ ಪದ್ಧತಿ ನಮ್ಮಲ್ಲಿ ನಡೆದುಕೊಂಡು ಬಂದಿದೆ.
ಇಂತಹ ಬೇವು ಬೆಲ್ಲ ಸವಿಯುವ ಸಂದರ್ಭದಲ್ಲೀಗ ಪಟ್ಟಣದಲ್ಲಿ ಉಪ ಚುನಾವಣೆ ಆರ್ಭಟ ಜೋರಾಗಿದೆ. ವಿಷವನ್ನೇಲ್ಲ ತಾನು ಉಂಡು ಅಮೃತ ವನ್ನು ಮಾತ್ರ ಜಗತ್ತಿಗೆ ನೀಡಿದ ವಿಷಕಂಠನ ಸನ್ನಿಧಿಯ 2 ಲಕ್ಷದ 4 ಸಾವಿರ ಮತದಾರು ಈಗ ಯಾರಿಗೆ ಬೇವು, ಯಾರಿಗೆ ಬೆಲ್ಲ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
65 ವರ್ಷಗಳ ಇತಿಹಾಸವಿರುವ ನಂಜನಗೂಡಿನ ಚುನಾವಣೆಯಲ್ಲಿ 9 ಜನ ಶಾಸಕರು ಆಯ್ಕೆಯಾಗಿದ್ದಾರೆ. ಮಾಜಿ ಸಚಿವರಾದ ಎಂ.ಮಹದೇವು ಹಾಗೂ ಡಿ.ಟಿ. ಜಯಕುಮಾರ ಮಾತ್ರ ಇಲ್ಲಿ ಒಬ್ಬರಾದ ಮೇಲೊಬ್ಬರಂತೆ ಆಯ್ಕೆ ಯಾಗಿ ತಲಾ ಮೂರು ಬಾರಿ ಅಧಿಕಾರದ ಚುಕಾಣಿ ಹಿಡಿದಿದ್ದಾರೆ.
ಉಳಿದಂತೆ ಸತತವಾಗಿ ಎರಡನೇ ಬಾರಿಗೆ ಮಾಜಿ ಸಚಿವ ಕೆ.ಬಿ ಶಿವಯ್ಯ ಹಾಗೂ ವಿ.ಶ್ರೀನಿವಾಸ ಪ್ರಸಾದರು ಆಯ್ಕೆ ಯಾಗಿದ್ದಾರೆ. ಸತತವಾಗಿ ಎರಡು ಬಾರಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಶಿವಯ್ಯಗೆ ಎಂ. ಮಹದೇವು ಅವರಿಂದಾಗಿ ಮೂರನೇ ಬಾರಿಗೆ ಸ್ಪರ್ಧೆಗಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಉಳಿದವರಾರು ಒಮ್ಮೆ ಗೆದ್ದವರು ಮತ್ತೂಮ್ಮೆ ಸ್ಪರ್ಧೆಗಿಳಿದಿಲ್ಲ.
ಸ್ವತಂತ್ರ ಭಾರತದ ಪ್ರಥಮ ಚುನಾವಣೆಯಲ್ಲಿ ರಾಜ್ಯದ ಎಲ್ಲಡೆ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಲ್ಲಿನ ಮತದಾರರು ಮಣೆ ಹಾಕಿದ್ದು ಕಾಂಗ್ರೆಸ್‌ಗಲ್ಲ ಎಂಬುದು ಗಮನಾರ್ಹ. ಆಗ ಇಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಹೆಜ್ಜಿಗೆ ಲಿಂಗಣ್ಣ ಹಾಗೂ ಸಿದ್ದಯ್ಯ ಅವರನ್ನು ಗೆಲ್ಲಿಸಿದ್ದರು. ನಂತರವೂ ಮತದಾರರು ಯಾವುದೇ ಪಕ್ಷಕ್ಕೆ ಜೋತು ಬೀಳದೆ ಪ್ರತಿ ಚುನಾವಣೆಗೂ ವ್ಯಕ್ತಿ ಹಾಗೂ ಪಕ್ಷ ಬದಲಾಯಿಸಿಯೇ ಆಯ್ಕೆ ಮಾಡಿ ಕಳುಹಿಸುತ್ತಿದ್ದರು.
1952ರಿಂದಲೂ ಇದೇ ಪದ್ಧತಿ ಅನುಸರಿಸುತ್ತಿದ್ದ ಮತದಾರರು 1972 ಹಾಗೂ 1978ರಲ್ಲಿ ಮಾತ್ರ ಕಾಂಗ್ರೆಸ್‌ನ ಕೆ.ಬಿ ಶಿವಯ್ಯರ ಗೆಲುವಿಗೆ ಕಾರಣ ರಾಗಿದ್ದರು. ನಂತರ 2008 ಹಾಗೂ 2013ರಲ್ಲಿ ವಿ. ಶ್ರೀನಿವಾಸ್ ಪ್ರಸಾದ ಸತತವಾಗಿ ಕಾಂಗ್ರೆಸ್‌ನಿಂದಲೇ ಗೆಲುವು ಪಡೆದರು.
ಇಲ್ಲಿನ ಜನತೆ ಈ ಬಾರಿಯೂ ಪ್ರಸಾದರನ್ನು ಗೆಲ್ಲಿಸಿದ್ದೆ ಆದರೆ ಹ್ಯಾಟ್ರಿಕ್ ಗೆಲವು. ಮೊದಲನೇ ಬಾರಿಗೆ ತಾವರೆ ಹೂವನ್ನು ಅರಳಿಸಿದ ಕೀರ್ತಿ ಪ್ರಸಾದ್ ಸಂಪಾದಿಸಲಿದ್ದಾರೆ. ಇಲ್ಲಿನ ಮತದಾರ ಈಗ ತನ್ನ ಮತ ಚಲಾವಣೆಯ ಮೂಲಕ ಯಾರಿಗೆ ಬೇವು ಯಾರಿಗೆ ಬೆಲ್ಲ ನೀಡಿ ಆಶೀರ್ವಾದಿಸಲಿದ್ದಾರೆಂದು ನೋಡಲು ಚುನಾವಣಾ ಎಣಿಕೆಯವರಿಗೂ ಕಾಯಬೇಕಿದೆ.
* ಶ್ರೀಧರ ಆರ್ ಭಟ್