Advertisement

ಕ್ರೇಜಿ ಟಾಕ್‌…ಈ ಸಲ ಜಾಕ್‌ಪಾಟ್ ಹೊಡಿತೀನಿ

06:45 AM Jan 31, 2019 | Sharanya Alva |

ರವಿಚಂದ್ರನ್‌ ಮಾತಿಗೆ ಸಿಗುವುದು ಅಪರೂಪ. ಅವರು ಹಾಗೊಮ್ಮೆ ಮಾತಿಗೆ ಸಿಕ್ಕರಂತೂ ರಾಶಿ ರಾಶಿ ವಿಷಯಗಳು ಹೊರ ಬರುತ್ತವೆ. ಬಹಳ ಸಮಯದ ಬಳಿಕ ಪತ್ರಕರ್ತರ ಜೊತೆ ಮಾತಿಗೆ ಸಿಕ್ಕ ರವಿಚಂದ್ರನ್‌, ತಮ್ಮ ಸಿನಿಮಾ, ಅವುಗಳ ಚಟುವಟಿಕೆಗಳು ಸೇರಿದಂತೆ ಮತ್ತಿತರ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತಾ ಹೋದರು. ರವಿಚಂದ್ರನ್‌ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಅವರ ಮಾತಲ್ಲೇ ಓದಿ.

Advertisement

ಎಲ್ಲೇ ಹೋದರು, ಯಾರೇ ಸಿಕ್ಕರೂ ‘ರಾಜೇಂದ್ರ ಪೊನ್ನಪ್ಪ’ ಬಗ್ಗೆ ಕೇಳುತ್ತಾರೆ. ಇನ್ನು, ಶೇ. 50 ರಷ್ಟು ಚಿತ್ರೀಕರಣ ಬಾಕಿ ಇದೆ. ಈಗ ರಾಧಿಕಾ ಕುಮಾರಸ್ವಾಮಿ ಅವರ ಭಾಗ ಮುಗಿದಿದೆ.

ಉಳಿದಂತೆ ಚಿತ್ರೀಕರಣ ಬಹಳ ಇದೆ. ಸಿನಿಮಾದ ಮುಖ್ಯಭಾಗವನ್ನು ಮುಟ್ಟೇ ಇಲ್ಲ. ಈ ಇಂಡಸ್ಟ್ರಿಯಲ್ಲಿ ಆಗಾಗ ಏನೇನೊ ಬದಲಾವಣೆಗಳು ಆಗುತ್ತಿರುತ್ತಲ್ಲ, ಅದರ ಪ್ರಕಾರ ತಲೆನೂ ಅವಾಗವಾಗ ತಿರುಗುತ್ತಿರುತ್ತೆ. ಕೆಲವು ಸಲ ನಾವೆಲ್ಲೋ ಎಡುವುತ್ತಿದ್ದೇವಾ..? ಇನ್ನೇನ್ನಾದರೂ ಹೊಸದು ಬೇಕಾ..? ಟ್ರೆಂಡ್‌ ಚೇಂಜ್‌ ಆಗ್ತಿದ್ಯಾ..? ಹೀಗೆ ಏನೇನೋ ಯೋಚನೆಗಳು ಬರೋದಕ್ಕೆ ಶುರುವಾಗುತ್ತವೆ. ಏನಾದ್ರು ಹೊಸ ಟ್ರೆಂಡ್‌ ಮಾಡಬೇಕು ಅನ್ನೋ ಯೋಚನೆ ಬಂದಿದ್ದರಿಂದಲೇ ‘ರಾಜೇಂದ್ರ ಪೊನ್ನಪ್ಪ’ ಸ್ವಲ್ಪ ಮುಂದಕ್ಕೆ ಹೋಯ್ತು.

ಏನಾದರೂ ಹೊಸ ಟ್ರೆಂಡ್‌ ಮಾಡಬೇಕು. ಆದರೆ, ಅದಕ್ಕೂ ಮೊದಲು ಕಮರ್ಷಿಯಲ್‌ ಆಗಿ ಗೆಲ್ಲಬೇಕು. ಏನೇ ಕಮರ್ಷಿಯಲ್‌ ಅಂತ ಮಾಡೋಕೆ ಹೋದರೂ ನನ್ನ ಚಿತ್ರಗಳಲ್ಲಿ ಒಂದಷ್ಟು ಪ್ರಯೋಗ ಇದ್ದೇ ಇರುತ್ತದೆ. ಹಾಗಾಗಿ ತಡವಾಗುತ್ತಿದೆ. ಸುಮ್ಮನೆ ಏನೋ ಇಟ್ಟುಕೊಂಡು ಸಿನಿಮಾ ಮಾಡೋಕಾಗಲ್ಲ. ಅದರಲ್ಲಿ ಏನೋ ಹೊಸ ವಿಷಯ ಹೇಳಬೇಕು.ಅಂತ ಆಸೆ ತುಂಬ ಕಾಡುತ್ತೆ. ಹಾಗಾಗಿ ಈಗ ಅದನ್ನು ಹೇಳುವ ವಿಧಾನ ಬದಲಾಯಿಸಿದ್ದೀನಿ ಅಷ್ಟೇ.

ಇದೇ ಥರ ನನಗೆ ‘ಮಲ್ಲ’ ಚಿತ್ರ ಕೂಡ ಆಗಿತ್ತು. 2003ರಲ್ಲಿ ‘ಮಲ್ಲ’ ಚಿತ್ರಕ್ಕೆ ಶೂಟಿಂಗ್‌ ಮಾಡಿ, ಆಮೇಲೆ ಏನೂ ಸರಿ ಇಲ್ಲ ಅಂತ ಸುಮ್ಮನೆ ಆರು ತಿಂಗಳು ಮನೆಯಲ್ಲಿ ಕೂತಿದ್ದೆ. ಆರು ತಿಂಗಳಾದ ಮೇಲೆ ಒಂದೇ ಒಂದು ಪಾಯಿಂಟ್ ತಲೆಗೆ ಹೊಳೆಯಿತು.

Advertisement

ಅದನ್ನು ಇಟ್ಟುಕೊಂಡು ರಿವರ್ಸ್‌ ಆರ್ಡರ್‌ ಸ್ಕ್ರೀನ್‌ ಪ್ಲೇನಲ್ಲಿ ಸಿನಿಮಾ ರೆಡಿ ಮಾಡಿ ಹೊರಗೆ ಬಿಟ್ಟೆ. ಆಮೇಲೆ ಏನಾಯ್ತು ಅಂತ ಎಲ್ಲರಿಗೂ ಗೊತ್ತು. ನಿಮಗೂ ಗೊತ್ತಿರಬಹುದು, ಈಗ ಬರುತ್ತಿರುವ ತುಂಬ ಚಿತ್ರಗಳು ಅದೇ ಆರ್ಡರ್‌ನ ಫಾಲೋ ಮಾಡಿಕೊಂಡು ಬರುತ್ತಿವೆ. ಅದೇ ರೀತಿ ‘ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲೂ ಆಗುತ್ತಿದೆ. ಇದರಲ್ಲಿ ಮತ್ತೇನೋ ಹೊಸದು ಮಾಡಬೇಕು ಅಂತಿದ್ದೇನೆ. ಸಿನಿಮಾದಲ್ಲಿ ಎಲ್ಲದೂ ಇರಬೇಕು ಅನ್ನೋ ಆಸೆಯಿಂದ ಮೊದಲೇ ತುಂಬ ಬರೆದುಕೊಂಡು ಬಿಡ್ತೀನಿ. ಅದೆಲ್ಲವನ್ನೂ ಪ್ರತಿ ಸೀನ್‌ನಲ್ಲೂ ಹಾಕುತ್ತಾ ಹೋದಾಗ ಸಿನಿಮಾ ದೊಡ್ಡದಾಗುತ್ತ ಹೋಗುತ್ತೆ. ಹಾಗಾಗಿ ಈ ಬಾರಿ ಬೇರೆ ಬದಲಾವಣೆ ಮಾಡುತ್ತಿದ್ದೇನೆ.

ಈ ಸಲ ಹೊಡೆದ್ರೆ ಜಾಕ್‌ಪಾಟೇ ಹೊಡಿತೀನಿ…

ಇವತ್ತು ನೇರವಾಗಿ ಹೇಳಿದರೆ, ಜನಕ್ಕೆ ಇಷ್ಟ ಆಗುತ್ತಿಲ್ಲ. ಜನರ ಮೂಡ್‌ ಬದಲಾಗುತ್ತಿದೆ. ಹೇಳುವ ಟೆಂಪೊ ಸ್ಲೋ ಆಗುತ್ತಿದೆ. ಹಾಗಾಗಿ ಹೇಳುವ ವಿಧಾನವನ್ನು ಬದಲಾಯಿಸಬೇಕು. ಮೊದಲು ಆಡಿಯನ್ಸ್‌ಗೆ ಸಿನಿಮಾ ಮಾಡುತ್ತಿದ್ದೆವು. ಆದರೆ ಈಗ ಜರ್ನಲಿಸ್ಟ್‌ಗೆ ಸಿನಿಮಾ ಮಾಡುತ್ತಿದ್ದೇವೆ. ಜನ ಥಿಯೇಟರ್‌ನಲ್ಲಿ ಕೂತಿರುವಲ್ಲೆ, ಸಿನಿಮಾದ ವಿಮರ್ಶೆ ಮಾಡುತ್ತಾರೆ. ನಮಗೆ ಆಗೋರು, ಆಗದೇ ಇರೋರು ಎಲ್ಲರೂ ಅದರ ಬಗ್ಗೆ ಮಾತಾಡುತ್ತಾರೆ. ಯಾವುದು ತಪ್ಪು, ಸರಿ ಅಂತ ಗೊತ್ತಾಗೋದು ಕಷ್ಟ.

ನಾವು ಎಲ್ಲಿ ಎಡವುತ್ತಿದ್ದೇವೆ ಅಂತ ಕೆಲವೊಮ್ಮೆ ಗೊತ್ತಾಗೋದೆ ಇಲ್ಲ. ಹಾಗಾಗಿ ಇದೆಲ್ಲವನ್ನೂ ಮೀರಿ ಸಿನಿಮಾ ಮಾಡಬೇಕು. ಅದಕ್ಕಾಗಿಯೇ ‘ರಾಜೇಂದ್ರ ಪೊನ್ನಪ್ಪ’ಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಈ ಸಾರಿ ಹೊಡೆದ್ರೆ ಜಾಕ್‌ಪಾಟೇ ಹೊಡಿತೀನಿ… ತುಂಬಾ ಸರ್ಕಸ್‌ ಮಾಡಿದ್ದೀನಿ. ಈಗ ಸರ್ಕಸ್‌ ಮಾಡೋ ಮೂಡ್‌ ಇಲ್ಲ. ಒಟ್ಟಿನಲ್ಲಿ ಆಡಿಯನ್ಸ್‌ಗೆ ಸಿನಿಮಾದಲ್ಲಿ ಫ‌ನ್‌ ಇರುತ್ತೆ, ಎಂಜಾಯ್‌ಮೆಂಟ್ ಇರುತ್ತೆ ಮತ್ತೂಂದು ‘ಮಲ್ಲ’ ಥರ!

ರಿಯಾಲಿಟಿ ಶೋ ಬದಲಾವಣೆ ಜೊತೆ ಕಾಸು ಕೊಡುತ್ತೆ

ಹಿರಿತೆರೆಯಲ್ಲಿ ತಾನಾಯಿತು, ತನ್ನ ಸಿನಿಮಾವಾಯಿತು ಅಂತ ಬ್ಯುಸಿಯಾಗಿದ್ದ ರವಿಚಂದ್ರನ್‌, ಯಾರೂ ನಿರೀಕ್ಷಿಸದ ರೀತಿ ಕಿರು ತೆರೆಗೆ ಎಂಟ್ರಿಯಾಗಿದ್ದರು. ಕಿರುತೆರೆಯಲ್ಲಿ ಸಕ್ರಿಯವಾದ ಮೇಲೆ ರವಿಚಂದ್ರನ್‌ ಅವರನ್ನು ಥಿಯೇಟರ್‌ನಲ್ಲಿ ನೋಡುವುದು ಅಪರೂಪವಾಯಿತು ಎನ್ನುವುದು ಅಭಿಮಾನಿಗಳ ಮಾತು. ಇದರ ಬಗ್ಗೆ ಮಾತನಾಡುವ ರವಿಚಂದ್ರನ್‌, ‘ನಾನು ಯಾವಾಗಲೂ ನನ್ನ ಸಿನಿಮಾದ ಬಗ್ಗೆ ಜಾಗೃತನಾಗಿಯೇ ಇರುತ್ತೇನೆ. ಟಿವಿ, ರಿಯಾಲಿಟಿ ಶೋಗಳು ಯಾವುದೂ ನನ್ನ ಕೆಲಸಕ್ಕೆ ಅಡ್ಡಿ ಮಾಡಲಾರವು. ಇನ್ನು ಜೇಬಿಗೂ, ಖರ್ಚಿಗೂ ದುಡ್ಡು ಬೇಕಲ್ಲ…! ಹಾಗಾಗಿ ಇವು ನನಗೊಂದು ಬದಲಾವಣೆ ಇದ್ದಂತೆ. ನನ್ನ ಮೂಡ್‌ ಅನ್ನು ಯಾರೂ ಡಿಸ್ಟರ್ಬ್ ಮಾಡಲಾಗುವುದಿಲ್ಲ. ನಾನೂ ಎಲ್ಲೇ ಇದ್ದರೂ ಮಾಡಬೇಕಾಗಿರುವುದರ ಕಡೆಗೆ ನನ್ನ ಗಮನ ಇದ್ದೇ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next