Advertisement

ಮತದಾನದಲ್ಲಿ ಜಿಲ್ಲೆ ಈ ಬಾರಿ ದೇಶಕ್ಕೆ ಮಾದರಿಯಾಗಲಿ

02:01 PM Apr 03, 2019 | Lakshmi GovindaRaju |

ಕೋಲಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕನಿಷ್ಠ ಶೇ.85ಕ್ಕೇರುವ ಮೂಲಕ ದೇಶಕ್ಕೆ ಜಿಲ್ಲೆಯಲ್ಲಿ ಮತದಾರರು ಜಾಗೃತರಾಗಿದ್ದಾರೆ ಎಂಬುದನ್ನು ತೋರಿಸಬೇಕು ಎಂದು ಜಿಪಂ ಸಿಇಒ ಜಿ.ಜಗದೀಶ್‌ ಮನವಿ ಮಾಡಿದರು.

Advertisement

ಜಿಲ್ಲಾಡಳಿತ, ಸ್ವೀಪ್‌ ಸಮಿತಿ, ಆಟೋ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಅವರು, ಕಳೆದ ವರ್ಷ ಶೇ.74 ಮತದಾನವಾಗಿತ್ತು. ಅದು ಈ ಬಾರಿ ಕನಿಷ್ಠ 85 ಮೀರಬೇಕು ಎಂದು ತಿಳಿಸಿದರು.

ಆಟೋಗಳಿಗೆ ಮತದಾನ ಜಾಗೃತಿಯ ಸ್ಟಿಕ್ಕರ್‌ಗಳನ್ನು ನಾವೇ ಮುದ್ರಿಸಿಕೊಡಬೇಕಿತ್ತು. ಆದರೆ, ಸಂಘದಿಂದಲೇ ಮುದ್ರಿಸಿಕೊಂಡು ನಮ್ಮ ಜತೆ ಕೈಜೋಡಿಸಿ ಮತದಾನ ಜಾಗೃತಿಗೆ ಮುಂದಾಗಿರುವುದು ಶ್ಲಾಘನೀಯ ಮತ್ತು ಇತರರಿಗೂ ಮಾದರಿಯಾಗಿದ್ದು, ಏ.18ರ ಮತದಾನವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ ಎಂದು ಹೇಳಿದರು.

ಮತದಾನ ಮರೆಯಬೇಡಿ: ದೇಶದ ಭದ್ರ ಬುನಾದಿಗೆ ಇಟ್ಟಿಗೆಯನ್ನು ಹಾಕುವುದಕ್ಕೆ ಚುನಾವಣೆ, ಮತದಾನವೇ ಅಸ್ತ್ರಗಳು. ಆ ದಿನಂದು ಯಾವುದೇ ಕಾರಣಕ್ಕೂ ಆಸೆ, ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಹೆಚ್ಚು ಮತದಾನ ಮಾಡಬೇಕು ಎಂದು ಹೇಳಿದ ಅವರು, ರಜೆ ಇರುತ್ತದೆ ಎಂದು ಮೋಜು ಮಸ್ತಿಗೆ ಒಳಗಾಗುವುದು ಬೇಡ ಎಂದು ಸಲಹೆ ನೀಡಿದರು.

ಉಚಿತ ಆಟೋ ಸೇವೆ: ಆಟೋ ಚಾಲಕರ ಮತ್ತು ಮಾಲಿಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌, ಏ.18ರ ಮತದಾನ ದಿನದಂದು ಜಿಲ್ಲೆಯಲ್ಲಿ ಅಶಕ್ತರು, ವೃದ್ಧರು ಮತ್ತು ಅಂಗವಿಕಲರಿಗೆ ಆಟೋ ಸೇವೆ ಉಚಿತವಾಗಿ ನೀಡಲು ನಿರ್ಧರಿಸಲಾಗಿರುವುದಾಗಿ ತಿಳಿಸಿದರು.

Advertisement

ರಾಜಕೀಯ ಸೋಂಕಿಲ್ಲದ ಶ್ರಮಿಕ ವರ್ಗಕ್ಕೆ ಆಟೋ ಚಾಲಕರು ಸೇರಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ನಮ್ಮಿಂದಾಗುವ ಸೇವೆಯನ್ನು ನಿರಂತರ ಮಾಡಿಕೊಂಡು ಬರುತ್ತಿದ್ದೇವೆ. ಹೀಗಾಗಿ ಅಂದು ಅಶಕ್ತರು, ವೃದ್ಧರು ಹಾಗೂ ಅಂಗವಿಕಲರಿಗೆ ಉಚಿತ ಆಟೋ ಸೇವೆಯನ್ನು ನೀಡುವುದಾಗಿ ಘೋಷಿಸಿದರು.

ಸ್ವೀಪ್‌ ಸಮಿತಿಯ ಎಂ.ಸೌಮ್ಯಾ ಮತದಾನದ ಪ್ರತಿಜ್ಞಾವಿಧಿ  ಬೋಧಿ ಸಿದರು. ಪ್ರತಿ ಆಟೋಗಳಿಗೂ ಮತದಾನ ಜಾಗೃತಿಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಯಿತು. ಡೂಂವೈಟ್‌ ವೃತ್ತದಿಂದ ಆರಂಭಗೊಂಡ ಮತದಾನ ಜಾಗೃತಿ ಆಟೋ ಜಾಥಾದಲ್ಲಿ ಸ್ವತಃ ಚಾಲನೆ ಮಾಡಿ ಕ್ಲಾಕ್‌ಟವರ್‌, ಬಸ್‌ನಿಲ್ದಾಣ, ಎಂ.ಬಿ.ರಸ್ತೆ, ಮೆಕ್ಕೆ ವೃತ್ತ, ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದಲ್ಲಿ ಸಂಚರಿಸಲಾಯಿತು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್‌.ಗೀತಾ, ಜಿಪಂ ಅ ಧಿಕಾರಿ ಗೋವಿಂದಗೌಡ, ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್‌, ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next