ಬೆಂಗಳೂರು: ಪಾಲಿಕೆಯ ಶಾಲೆ, ಕಾಲೇಜುಗಳಲ್ಲಿ ಮಕ್ಕಳು ದಾಖಲಾಗಲು ಹಿಂದೇಟು ಹಾಕುತ್ತಾರೆಂಬ ಅಪವಾದಗಳ ನಡುವೆಯೂ, ಬಿಬಿಎಂಪಿ ಶಾಲೆಯಲ್ಲೇ ಕಲಿಯಲು ಒಲವು ತೋರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಕಲಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕೊಳೆಗೇರಿಗಳ ಭೇಟಿ, ಶಿಕ್ಷಕರು ಮತ್ತು ಪ್ರಾಂಶುಪಾಲರ ಸಂವಾದ ಸಭೆಗಳ ಯಶಸ್ಸಿನ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷ ಪಾಲಿಕೆ ಶಾಲೆ, ಕಾಲೇಜುಗಳಿಗೆ 17,446 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ 16,462 ವಿದ್ಯಾರ್ಥಿಗಳು ದಾಖಲಾಗಿದ್ದು, ದಾಖಲಾತಿಯಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯ ಏರಿಕೆ ಕಂಡುಬಂದಿದೆ. ಈ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಣ್ಣುಮಕ್ಕಳೇ ಹೆಚ್ಚು: ಪ್ರತಿ ವರ್ಷ ಪಾಲಿಕೆ ಶಾಲೆ, ಕಾಲೇಜುಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,804 ವಿದ್ಯಾರ್ಥಿನಿಯರು, 6,642 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟಾರೆ ದಾಖಲಾತಿ ಪ್ರಮಾಣದಲ್ಲಿ ಶೇ.61ರಷ್ಟು ಹೆಣ್ಣುಮಕ್ಕಳೇ ಇದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 91 ಶಿಶುವಿಹಾರ, 15 ಪ್ರಾಥಮಿಕ ಶಾಲೆಗಳು, 32 ಪ್ರೌಢಶಾಲೆಗಳು, 15 ಪದವಿ ಪೂರ್ವ ಕಾಲೇಜುಗಳು, 4 ಪದವಿ ಕಾಲೇಜುಗಳು, 2 ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿ ಒಟ್ಟಾರೆ 159 ಶಾಲೆ, ಕಾಲೇಜುಗಳಿವೆ.
ಕೊಳೆಗೇರಿಗಳಲ್ಲಿ ಜಾಗೃತಿ: ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಪಾಲಿಕೆ ವ್ಯಾಪ್ತಿಯ ಶಾಲೆ, ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿತ್ತು. ವಿಶೇಷವಾಗಿ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವ ಜನರಿಗೆ ಜಾಗೃತಿ ಮೂಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.
ಪಾಲಿಕೆಯ ಶಾಲೆ, ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದು, ಜನರು ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ. ರೋಶಿನಿ ಯೋಜನೆ ಮೂಲಕ ಪಾಲಿಕೆ ಶಾಲೆ, ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲಾಗುವುದು.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್
ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದ್ದರ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 17,446 ಮಕ್ಕಳು ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ದಾಖಲಾಗಿದ್ದಾರೆ. ಪ್ರಸಕ್ತ ವರ್ಷ ಮಕ್ಕಳ ದಾಖಲಾತಿ 18 ಸಾವಿರ ಗಡಿ ದಾಟುವ ನಿರೀಕ್ಷೆ ಇದೆ.
-ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ)
ವಿಭಾಗಗಳು ಹೆಣ್ಣು ಗಂಡು ಒಟ್ಟು
ಶಿಶುವಿಹಾರ 2114 2036 4150
ಪ್ರಾಥಮಿಕ ಶಾಲೆ 1015 1003 2018
ಪ್ರೌಢಶಾಲೆ 3555 1760 5315
ಪದವಿ ಪೂರ್ವ ಕಾಲೇಜು 3054 825 3879
ಪದವಿ ಕಾಲೇಜು 1046 1007 2053
ಸ್ನಾತಕೋತ್ತರ ಪದವಿ 20 11 31
ಒಟ್ಟು 10804 6642 17446
ವರ್ಷ ಮಕ್ಕಳ ಸಂಖ್ಯೆ
2015-16 16,961
2016-17 16,814
2017-18 15,530
2018 -19 16,462
2019 -20 17,446
* ಮಂಜುನಾಥ ಗಂಗಾವತಿ