Advertisement

ಈ ಬಾರಿಯೂ ಜೆಡಿಎಸ್‌ಗೆ ಶಿವಮೊಗ್ಗ ಕ್ಷೇತ್ರ

10:50 AM Feb 26, 2019 | |

ಶಿವಮೊಗ್ಗ: ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ ಪಾಲಾಗಿದ್ದ ಶಿವಮೊಗ್ಗ ಕ್ಷೇತ್ರವನ್ನೂ ಮುಂಬರಲಿರುವ ಚುನಾವಣೆ ಉಳಿಸಿಕೊಳ್ಳುವಲ್ಲಿ ಜೆಡಿಎಸ್‌ ಯಶಸ್ವಿಯಾಗಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಧುಬಂಗಾರಪ್ಪ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಅಧಿಕೃತವಾಗಗಿ ಇದನ್ನು ಘೋಷಿಸಿದ್ದಾರೆ.

Advertisement

 ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಧುಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಹೀಗಾಗಿ ಈ ಬಾರಿಯೂ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡಬಹುದೆಂಬ ಲೆಕ್ಕಾಚಾರ ನಡೆದಿತ್ತು.  ಈಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜಾತ್ಯತೀತ ಜನತಾದಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕಳೆದ ಬಾರಿ ಮೈತ್ರಿಕೂಟದಿಂದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ದೀರ್ಘ‌ ಚರ್ಚೆ ನಡೆದು ನಾಮಪತ್ರ ಸಲ್ಲಿಕೆ ಎರಡು ದಿನ ಮುಂಚೆ ಮಧು ಬಂಗಾರಪ್ಪ ಅವರನ್ನು ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ತಡವಾಗಿ ಫೀಲ್ಡ್‌ಗೆ ಬಂದರೂ ಉತ್ತಮ ಮತ ಪಡೆಯುವಲ್ಲಿ ಕೂಡ ಅವರು ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಮೊದಲೇ ಅಭ್ಯರ್ಥಿ ಘೋಷಿಸುವ ಮೂಲಕ ಗೆಲುವು ಸಾಧಿಸಿ ಕ್ಷೇತ್ರವನ್ನು ಬಿಜೆಪಿ ಮುಕ್ತ ಮಾಡಲು ಪ್ರಯತ್ನ ನಡೆದಿದೆ.

ಜೆಡಿಎಸ್‌ಗೆ ಪಕ್ಕಾ: ರಾಜ್ಯಮಟ್ಟದ ನಾಯಕರು ಇನ್ನೂ ಕ್ಷೇತ್ರ ಹಂಚಿಕೆ ಕುರಿತಂತೆ ಮಾತುಕತೆ ನಡೆಸುತ್ತಿದ್ದರೂ ಶಿವಮೊಗ್ಗ ಕ್ಷೇತ್ರ ಮಾತ್ರ ಜೆಡಿಎಸ್‌ ಪಾಲಾಗಲಿದೆ ಎಂದೇ ಹೇಳಲಾಗಿತ್ತು. ಜೆಡಿಎಸ್‌ ನಿಂದ ಅಭ್ಯರ್ಥಿ ಘೋಷಿಸದಿದ್ದರೆ ಮಾತ್ರ ಕಾಂಗ್ರೆಸ್‌ನಿಂದ ಅಭ್ಯರ್ಥಿ ಇಳಿಸಲು ಕಾಂಗ್ರೆಸ್‌ನ ಜಿಲ್ಲಾ ಘಟಕ ತೀರ್ಮಾನಿಸಿತ್ತು. ಅಲ್ಲದೇ ಈ ಬಗ್ಗೆ ಗೊಂದಲದ ಹೇಳಿಕೆ ಕೊಡದಂತೆ ಮುಖಂಡರು ಮೊದಲೇ ಕಡಿವಾಣ ಹಾಕಿದ್ದರು. ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದು, ಅಲ್ಲದೇ ಉತ್ತಮ ಪೈಪೋಟಿ ನೀಡಿದ್ದ ಕಾರಣ ಈ ಬಾರಿಯೂ ಕ್ಷೇತ್ರ ಜೆಡಿಎಸ್‌ ಪಾಲಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಜಿಲ್ಲಾ ಘಟಕ ತಟಸ್ಥವಾಗಿತ್ತು.

ಉಪ ಚುನಾವಣೆಯಲ್ಲಿ ಬಹಳ ತಡವಾಗಿ ರಂಗ ಪ್ರವೇಶ ಮಾಡಿ ಕೇವಲ 50 ಸಾವಿರ ಮತಗಳ ಅಂತರದಿಂದ ಸೋಲುಕಂಡ ಮಧು ಬಂಗಾರಪ್ಪ ಅವರಿಂದ ಮಾತ್ರ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ಪಕ್ಷದ ಸಭೆಯಲ್ಲಿ ಶಿವಮೊಗ್ಗದ ಮುಖಂಡರು ಸಲಹೆ ನೀಡಿದರು.

ಮತ್ತೂಮ್ಮೆ ಮೋದಿ ಮಂತ್ರ ಜಪಿಸುತ್ತಿರುವ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದೇ ಗುರಿ ಎಂದು ಹೇಳುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕೆಂದರೆ ಶಿವಮೊಗ್ಗದಲ್ಲೇ ಅದಕ್ಕೆ ಹೆಚ್ಚು ಪೆಟ್ಟು ಕೊಡಬೇಕು. ಅದಕ್ಕಾಗಿ ಈ ಬಾರಿ ಶಿವಮೊಗ್ಗ ಚುನಾವಣೆ ಉಸ್ತುವಾರಿಯನ್ನು ಸ್ವತಃ ತಾವೆ ನೋಡಿಕೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

Advertisement

ಈ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್‌. ಎಂ.ಮಂಜುನಾಥಗೌಡ, ಮಾಜಿ ಶಾಸಕರಾದ ಎಂ.ಜೆ. ಅಪ್ಪಾಜಿ, ಶಾರದಾ ಪೂರ್ಯನಾಯ್ಕ, ಮುಖಂಡರಾದ ಎಂ. ಶ್ರೀಕಾಂತ್‌, ಜಿ.ಡಿ. ಮಂಜುನಾಥ್‌, ಕಾಂತರಾಜ್‌, ಆನಂದ್‌, ತಾಲೂಕು ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. 

ರೈತರ ಸಮಾವೇಶ ಶಿವಮೊಗ್ಗದಲ್ಲಿ ರೈತರ ಬೃಹತ್‌ ಸಮಾವೇಶ ಸಂಘಟಿಸುವಂತೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ. ಮಂಜುನಾಥಗೌಡರಿಗೆ ಸೂಚನೆ ನೀಡಲಾಗಿದ್ದು, ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು ಘೋಷಿಸಲಾಗಿದೆ. ಎರಡು ಪಕ್ಷಗಳ ಮುಖಂಡರ ಚರ್ಚೆ ನಂತರ ಅಧಿಕೃತವಾಗಿ ಮೈತ್ರಿ ಅಭ್ಯರ್ಥಿ ನಿರ್ಧಾರವಾಗಲಿದೆ. ಕಳೆದ ಬಾರಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ
ಈ ಬಾರಿಯೂ ಬಿಟ್ಟುಕೊಡುವ ವಿಶ್ವಾಸವಿದೆ. ಮಾರ್ಚ್‌ ಮೊದಲ ವಾರದಲ್ಲಿ ಶಿವಮೊಗ್ಗದಲ್ಲಿ ರೈತರ ಬೃಹತ್‌ ಸಮಾವೇಶ ಏರ್ಪಡಿಸಲಾಗುವುದು. ಒಂದೆರೆಡು ದಿನದಲ್ಲಿ ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಿದರು.

ದೇವೇಗೌಡರ ಭೇಟಿ ಲೋಕಸಭೆ ಚುನಾವಣೆ ಸಿದ್ಧತೆಗೆ ಸಂಬಂಧಿ ಸಿದಂತೆ ಕರೆಯಲಾದ ಮುಖಂಡರ ಸಭೆಗೆ ಮಧುಬಂಗಾರಪ್ಪ ಅವರೇ ಗೈರಾಗಿದ್ದರು. ಸೋಮವಾರ ಖುದ್ದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರೇ ಬೆಂಗಳೂರಿನಲ್ಲಿರುವ ಮಧು ಬಂಗಾರಪ್ಪ ಅವರ ಮನೆಗೆ ಭೇಟಿ ನೀಡಿದ್ದು, ಲೋಕಸಭೆ ಚುನಾವಣೆಗೆ ಅಣಿಯಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next