Advertisement

ಈ ಬಾರಿಯೂ ಸಹೋದರರ ಸವಾಲ್‌!

12:53 PM Apr 06, 2018 | |

ಸೊರಬ: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಸೊರಬ ಕ್ಷೇತ್ರವೂ ಒಂದು. ಮಲೆನಾಡು, ಬಯಲುಸೀಮೆ ಎರಡರ ಸಮ್ಮಿಶ್ರಣ ಪ್ರದೇಶ. ಕೃಷಿ ಇಲ್ಲಿನ ಜನರ ಆಧಾರ. ಮೂಲಸೌಲಭ್ಯ, ನೀರು ಸೇರಿದಂತೆ ಹಲವು ಸಮಸ್ಯೆಗಳೇ ಹೆಚ್ಚಿರುವ ಈ ಕ್ಷೇತ್ರ ರಾಜಕೀಯವಾಗಿ ಮಾತ್ರ ಇಡೀ ರಾಜ್ಯದಲ್ಲೇ ಗುರುತಿಸಿಕೊಂಡಿದೆ. ಸೋಲಿಲ್ಲದ ಸರದಾರ ಎಂದು ಹೆಸರು ಪಡೆದು, ಇಡೀ ಕ್ಷೇತ್ರವನ್ನು ಸುಮಾರು 4 ದಶಕಗಳ ಕಾಲ ತಮ್ಮ ಕೈ ಮುಷ್ಟಿಯಲ್ಲಿ ಇಟ್ಟುಕೊಂಡು ರಾಜಕೀಯವಾಗಿ ಎತ್ತರಕ್ಕೆ ಏರಿದ ಎಸ್‌. ಬಂಗಾರಪ್ಪ ಅವರ ರಾಜಕೀಯ ಕರ್ಮ ಭೂಮಿ ಇದು. ಇದೀಗ ಬದಲಾದ ರಾಜಕೀಯ ಸ್ಥಿತಿಯಲ್ಲಿ ಬಂಗಾರಪ್ಪ ಕುಟುಂಬದ ವಿರುದ್ಧ ರಾಜಕೀಯ ಶಕ್ತಿಗಳ ಮೇಲಾಟ ನಡೆದಿದೆ. ಅಭಿವೃದ್ಧಿಗಿಂತ ಕುಟುಂಬದ ವರ್ಚಸ್ಸನ್ನು ಪಣಕ್ಕಿಡುವ ಪ್ರಯತ್ನ ಹೆಚ್ಚು ನಡೆದಿದೆ. ಈ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಖಚಿತ.

Advertisement

ರಾಜಕೀಯವಾಗಿ ಗುರುತಿಸಿಕೊಂಡಿದ್ದರೂ ಅಭಿವೃದ್ಧಿ ದೃಷ್ಟಿಯಿಂದ ಹೈದರಾಬಾದ್‌ ಕರ್ನಾಟಕದ ಜೇವರ್ಗಿ ನಂತರ ಸೊರಬ ಅತ್ಯಂತ ಹಿಂದುಳಿದ ತಾಲೂಕೆಂದು ಗುರುತಿಸಿಕೊಂಡಿರುವುದು ವಿಪರ್ಯಾಸ. ಸಹೋದರರ ಸವಾಲ್‌ ನಡುವೆ ನುಸುಳಿ ಬಂದ ಎಚ್‌. ಹಾಲಪ್ಪ ಮೊದಲಿಗೆ ಅಭಿವೃದ್ಧಿ ಮಂತ್ರ ಜಪಿಸಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಹಿಂದಿನವರಂತೆಯೇ ಮುಂದುವರಿದರು. ನಂತರ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋತು ಮೂರನೇ ಬಾರಿ ಕಣಕ್ಕಿಳಿದ ಮಧು ಬಂಗಾರಪ್ಪ ಗೆಲ್ಲುವ ಮೂಲಕ ಕೈ ತಪ್ಪಿ ಹೋಗಿದ್ದ ಎಸ್‌. ಬಂಗಾರಪ್ಪನವರ ಕುಟುಂಬ ರಾಜಕಾರಣವನ್ನು ಪುನಃ ತನ್ನ ವಶಕ್ಕೆ ಪಡೆದರು.

1967ರಿಂದ 1994ರವರೆಗೆ ಬಂಗಾರಪ್ಪನವರು ಇಲ್ಲಿ ಅಧಿಪತ್ಯ ಸಾಧಿಸಿದರೆ, ಬಳಿಕ ಎರಡು ಅವಧಿಗೆ ತಮ್ಮ ಹಿರಿಯ ಪುತ್ರ ಕುಮಾರ್‌ ಬಂಗಾರಪ್ಪ ಅವರನ್ನು ಗೆಲ್ಲುವಂತೆ ನೋಡಿಕೊಂಡರು. 2004 ರಲ್ಲಿ ಮೊದಲ ಬಾರಿಗೆ ಬಂಗಾರಪ್ಪನವರಿಗೆ ಇಲ್ಲಿ ಸೋಲು ಎಂಬುದು ಎದುರಾಗಿತ್ತು. ತಮ್ಮ ಹಿರಿಯ ಪುತ್ರನ ಎದುರೇ ಎರಡನೇ ಪುತ್ರನನ್ನು ಚುನಾವಣಾ ಕಣಕ್ಕೆ ಇಳಿಸಿದರು. ಆದರೆ ಕುಮಾರ್‌ ಬಂಗಾರಪ್ಪ ತಮ್ಮ ತಂದೆಯ ಶಕ್ತಿಯ ವಿರುದ್ಧವೇ ಗೆದ್ದರು. 2008 ರಲ್ಲಿ ಅಣ್ಣ-ತಮ್ಮ ಇಬ್ಬರನ್ನು ಸೋಲಿಸಿ ಮೊದಲ ಬಾರಿಗೆ ಬಂಗಾರಪ್ಪ ಕುಟುಂಬದಿಂದ ಅಧಿಕಾರ ಕಸಿದುಕೊಂಡವರು ಬಿಜೆಪಿಯ ಹರತಾಳು ಹಾಲಪ್ಪ. 

ದಂಡಾವತಿ ಅಣೆಕಟ್ಟು ನಿರ್ಮಾಣದ ಹೆಸರಿನಲ್ಲಿ ಗೆದ್ದ ಹಾಲಪ್ಪನವರಿಗೆ ಆಗ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ಸಾಥ್‌ ನೀಡಿ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಬಜೆಟ್‌ನಲ್ಲಿ ದಂಡಾವತಿ ಯೋಜನೆಗಾಗಿ 272 ಕೋಟಿ ರೂ.ಗಳನ್ನು ಕಾಯ್ದಿರಿಸಿದರು. ಯೋಜನೆ ಶಂಕುಸ್ಥಾಪನೆ ಕೂಡಾ ನಡೆಯಿತು. ಇದಾಗಿ ಹದಿನೈದು ವರ್ಷ ಕಳೆದಿದೆ. ಆದರೆ ಈ ವರೆಗೂ ಕಾಮಗಾರಿ ಮಾತ್ರ ಪ್ರಾರಂಭವಾಗಲೇ ಇಲ್ಲ. ಈಗಾಗಲೇ ಸರ್ವೇಗಾಗಿ 66 ಕೋಟಿ ರೂ. ವಿನಿಯೋಗಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಸಹೋದರರ ಮಧ್ಯೆ ಹಣಾಹಣಿ ನಡೆಯೋದು ಪಕ್ಕಾ. ಕಾಂಗ್ರೆಸ್‌ನಿಂದ ಕಮಲ ಪಾಳಯಕ್ಕೆ ಬಂದ ಕುಮಾರ್‌ ಬಂಗಾರಪ್ಪ ಅವರಿಗೆ ಟಿಕೆಟ್‌ ಸಿಗಲಿದೆ ಎನ್ನಲಾಗುತ್ತಿದ್ದರೂ ಇನ್ನೂ ಘೋಷಣೆಯಾಗಿಲ್ಲ. ಜೆಡಿಎಸ್‌ ನಿಂದ ಮಧು ಬಂಗಾರಪ್ಪ ಅವರಿಗೆ ಟಿಕೆಟ್‌ ಘೋಷಿಸಿ ಈಗಾಗಲೇ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಎಂಬುದು ಇನ್ನೂ ಫೈನಲ್‌ ಆಗಿಲ್ಲ.

ಕ್ಷೇತ್ರದ ದೊಡ್ಡ  ಸಮಸ್ಯೆ?
ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಎಂದರೆ 850 ಕೆರೆ ಹೊಂದಿದ್ದರೂ ಕೆರೆ ಅಭಿವೃದ್ಧಿ ಸಾಧ್ಯವಾಗಿಯೇ ಇಲ್ಲ. ಮುಗಿದಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಉದ್ಘಾಟನೆಯಾಗಿಲ್ಲ. ಸುಮಾರು 500 ಮೀ. ಮುಖ್ಯರಸ್ತೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದರೂ, ಉಳಿದ 200 ಮೀ. ರಸ್ತೆ ಅಗಲೀಕರಣಕ್ಕೆ ಚಾಲನೆಯೇ ದೊರತಿಲ್ಲ. ದಂಡಾವತಿ ಯೋಜನೆ ಶಂಕುಸ್ಥಾಪನೆಯಾಗಿದ್ದರೂ ಕಾಮಗಾರಿ ಮುಂದುವರಿದಿಲ್ಲ.

Advertisement

ಕ್ಷೇತ್ರದ ಬೆಸ್ಟ್‌ ಏನು?
ಪಟ್ಟಣದ ಸರ್ವೆ ನಂ. 113ರಲ್ಲಿ ವಾಸಿಸುವ ಕಟುಂಬಗಳಿಗೆ ಹಕ್ಕುಪತ್ರ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿರುವುದು. ಮಾಜಿ ಸಚಿವ ಎಚ್‌. ಹಾಲಪ್ಪನವರ ಅವಧಿಯಲ್ಲಿ ಮಂಜೂರಾದ ರಂಗಮಂದಿರ, ಖಾಸಗಿ ಬಸ್‌ ನಿಲ್ದಾಣಗಳು ಉದ್ಘಾಟನೆಗೊಂಡು ಸಾರ್ವಜನಿಕ ಸೇವೆಯಲ್ಲಿವೆ.

ಶಾಸಕರು ಏನಂತಾರೆ?
ಹಿಂದಿನ ಮಾಜಿ ಸಚಿವರು ಮಾಡಲಾಗದ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿ ತೋರಿಸಿದ್ದೇನೆ. ಕಳೆದ 60, 70 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಬಡ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಮೂಲಕ ಅವರ ಬದುಕಿಗೆ ನೆರವಾಗಿದ್ದೇನೆ. ಇದಿಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸಿದ್ದೇನೆ. ನನ್ನ ಅವಧಿಯ ಐದು ವರ್ಷಗಳಲ್ಲಿ ಜನತೆಗೆ ಮೋಸ ಮಾಡದೇ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿ ನನಗಿದೆ. 
ಮಧು ಬಂಗಾರಪ್ಪ, ಶಾಸಕ

ಕ್ಷೇತ್ರ ಮಹಿಮೆ
ಏಷ್ಯಾದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿದ ಹೆಗ್ಗಳಿಕೆ ಇಲ್ಲಿಯದು. ಗುಡವಿ ಪಕ್ಷಿಧಾಮ ಇಲ್ಲಿನ ಮತ್ತೂಂದು ಆಕರ್ಷಣೆ. ಬೆತ್ತಲೆ ಸೇವೆಯ ಮೂಲಕ ಇಡೀ ದೇಶದ ಗಮನ ಸೆಳೆದು, ಬಳಿಕ ಅದೇ ಕಾರಣಕ್ಕೆ ದೊಡ್ಡ ಗಲಾಟೆಯಾಗಿ, ಇದೀಗ ಬೆತ್ತಲೆ ಸೇವೆ ನಿಷೇಧಿಸಲ್ಪಟ್ಟಿರುವ ಚಂದ್ರಗುತ್ತಿ ಜಾತ್ರೆ ಮತ್ತು ದೇವಸ್ಥಾನ ಪ್ರವಾಸಿಗರ ದೊಡ್ಡ ಆಕರ್ಷಣೆ

ತಾಲೂಕಿನ ಸೊರಬ-ಉದ್ರಿ, ಸೊರಬ-ಚಂದ್ರಗುತ್ತಿ, ಸೊರಬ-ಸಿದ್ದಾಪುರ ಮಾರ್ಗವಾಗಿ ಹೆಚ್ಚಿನ ಬಸ್‌ ಸಂಚಾರವಿಲ್ಲದೇ ಪ್ರತಿ ದಿನ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಯಾತನೆ ಪಡುವಂತಾಗಿದೆ. ಬಗರ್‌ ಹುಕುಂ ವಿಷಯದಲ್ಲಿ ಶಾಸಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕಳಪೆ ಗುಣಮಟ್ಟದ ಕಾಮಗಾರಿಗಳು ಸರ್ಕಾರದ ಯೋಜನೆಗಳ ರೂಪದಲ್ಲಿ ಬರುವ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇಂದು ರಾಜಕಾರಣಿ ಭ್ರಷ್ಟನಲ್ಲ. ನೋಟು ಪಡೆದು ಓಟು ಹಾಕುವ ಮತದಾರರ ಭ್ರಷ್ಟನಾಗುತ್ತಿದ್ದಾನೆ.
ಎಲ್‌.ಜಿ. ಗುಡ್ಡಪ್ಪ ಜೆ. ಮರೂರು

ಕಾಂಗ್ರೆಸ್‌ ಸರ್ಕಾರ ಭಾಗ್ಯ ಯೋಜನೆಗಳ ಮೂಲಕ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶ ನೀಡಿದೆ. ಬಗರ್‌ಹುಕುಂ ಹಕ್ಕುಪತ್ರ ವಿತರಣೆ ಕಾಂಗ್ರೆಸ್‌ ಸರ್ಕಾರದ ಸಾಧನೆಯಾಗಿದ್ದು, ಇದನ್ನು ಶಾಸಕರು ತಮ್ಮ ಹೋರಾಟ ಫಲವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರನ್ನು ಎಂದಿಗೂ ಮರೆಯುವಂತಿಲ್ಲ.
ಜೆ. ಶಿವಾನಂದಪ್ಪ

ಅರೆ ಮಲೆನಾಡು ಎಂದೇ ಗುರುತಿಸಿಕೊಂಡಿರುವ ಸೊರಬ ತಾಲೂಕಿನಲ್ಲಿ ರೈತರಿಗಾಗಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ರೈತರು ಮಳೆಗಾಲ ಮುಗಿದು ಬೇಸಿಗೆ ಬಂತೆಂದರೆ ಉದ್ಯೋಗ ಅರಸಿ ಕಾಫಿ ನಾಡಿಗೆ ಗುಳೆ ಹೋಗುತ್ತಾರೆ. ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳು ನಡೆದಿಲ್ಲ. ಕೆರೆಗಳ ಹೂಳು ತೆಗೆಸುವ ಮೂಲಕ ನೀರಾವರಿ ಒದಗಿಸಬಹುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಚಿಂತಿಸಬೇಕಿದೆ. 
ಜೆ.ಎಸ್‌. ಚಿದಾನಂದಗೌಡ

ತಾಲ್ಲೂಕಿನಲ್ಲಿ ಉದ್ಯೋಗ ಸೃಷ್ಟಿ ಮಾಡುವಂತಹ ಯಾವುದೇ ಉದ್ಯಮಗಳಿಲ್ಲ. ಹಾಗಾಗಿ ಉದ್ಯೋಗ ಅರಸಿ ಯುವಕರು ಬೆಂಗಳೂರಿನಂತಹ ಬೃಹತ್‌ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿಂದ ಗೆದ್ದು ಹೋಗುವ ಜನಪ್ರತಿನಿಧಿಗಳು ಬೆಂಗಳೂರು ಅಥವಾ ಇನ್ಯಾವುದೋ ನಗರಗಳಲ್ಲಿ ಉದ್ಯಮವನ್ನು ತೆರೆಯುವುದು ಸರಿಯಲ್ಲ. ಹಾಗಾಗಿ ತಾಲೂಕಿನಲ್ಲಿಯೇ ಉದ್ಯೋಗ ಸೃಷ್ಟಿಯಾಗುವಂತ
ಕಾರ್ಖಾನೆ, ವಿವಿಧ ಉದ್ಯಮಗಳನ್ನು ಸ್ಥಾಪಿಸಬೇಕಿದೆ.
ಎನ್‌.ಎಸ್‌. ವೀಣಾ, ಗೃಹಿಣಿ

ಎಚ್‌.ಕೆ.ಬಿ. ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next