Advertisement

ಈ ಬಾರಿ ಎಲ್ಲೆಡೆ ಸರಳ ನವರಾತ್ರಿ

12:44 AM Oct 16, 2020 | mahesh |

ದಿನೇದಿನೆ ಹೆಚ್ಚುತ್ತಿರುವ ಕೋವಿಡ್‌-19 ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮತ್ತು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸರಕಾರದ ಮಾರ್ಗಸೂಚಿಯೊಂದಿಗೆ ಸರಳ ನವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ. ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಿ, ವಿಶೇಷ ಅಲಂಕಾರ, ಪೂಜಾ ಕಾರ್ಯಗಳು ಎಂದಿನಂತೆ ನೆರವೇರಲಿವೆ.

Advertisement

ಶೃಂಗೇರಿಯಲ್ಲಿ ಅಡ್ಡಪಲ್ಲಕ್ಕಿ ಇಲ್ಲ
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಈ ಬಾರಿ ಶರನ್ನವರಾತ್ರಿ ಉತ್ಸವ ಸರಳವಾಗಿ ನಡೆಯಲಿದೆ. ಪ್ರತೀ ವರ್ಷ ವೈಭವದಿಂದ ನಡೆಯುತ್ತಿದ್ದ ನವರಾತ್ರಿ ಉತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪ್ರತೀ ವರ್ಷ­ದಂತೆ ಈ ಬಾರಿಯೂ ಶ್ರೀಮಠದ ಸಂಪ್ರದಾಯದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದರೆ ಅಡ್ಡಪಲ್ಲಕ್ಕಿ ಉತ್ಸವ ಇರುವುದಿಲ್ಲ, ಹೆಚ್ಚಿನ ಭಕ್ತರು ಪಾಲ್ಗೊಳ್ಳಲು ಅವಕಾಶವಿಲ್ಲ.

ಹೊರನಾಡಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದು
ಆದಿಶಕ್ತಾತ್ಮಕ ಹೊರನಾಡು ಶ್ರೀ ಅನ್ನಪೂರ್ಣೆàಶ್ವರಿ ದೇವಸ್ಥಾನ ದಲ್ಲಿ ಸರಳ ನವರಾತ್ರಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಲಾಗುವುದು. ಪ್ರತಿ ದಿನ ಪೂಜೆ, ಹೋಮ, ಹವನ, ಪಾರಾಯಣ, ಪ್ರವಚನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯ­ಕ್ರಮ, ಸಭೆ ನಡೆಯುವುದಿಲ್ಲ, ಮಾರ್ಗಸೂಚಿಯಂತೆ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರಿಗಿಲ್ಲ ಕೊಲ್ಲಾಪುರದ ಮಹಾಲಕ್ಷ್ಮೀ ದರ್ಶನ
ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸರಳವಾಗಿ ನಡೆಯಲಿದೆ. ಭಕ್ತರ ದರ್ಶನಕ್ಕೆ ನಿಷೇಧ ಜಾರಿ ಮಾಡಿರುವ ದೇವಸ್ಥಾನದ ಆಡಳಿತ ಮಂಡಳಿಯು ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ನವರಾತ್ರಿ ವೇಳೆ ದಿನಕ್ಕೊಂದು ಅಲಂಕಾರಭೂಷಿತ ಲಕ್ಷ್ಮೀ ದೇವಿಯನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅಂತಹ ಭಾಗ್ಯ ಭಕ್ತರಿಗೆ ಇಲ್ಲ.

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮತ್ತು ಜಿಲ್ಲಾ
ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ದಸರಾ ಸಮಿತಿ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದರು. ಈ ಬಾರಿ ಸರಳವಾಗಿ ದಸರಾ ಆಚರಿಸಬೇಕಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ .

Advertisement

ಉಪ್ಪಿನಬೆಟಗೇರಿ ಗ್ರಾಮಕ್ಕೆ ಭಕ್ತರ ದಂಡು
ಧಾರವಾಡ: ಉಪ್ಪಿನಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಮಾದರಿಯಲ್ಲಿಯೇ ಸವದತ್ತಿ ದೇವಸ್ಥಾನ ನಿರ್ಮಾಣ ಆಗಿದೆ ಎಂಬುದು ಪ್ರತೀತಿ. ಈ ದೇವಿ ದರ್ಶನ ಪಡೆದ ಬಳಿಕವೇ ಸವದತ್ತಿ ದೇವಿ ದರ್ಶನಕ್ಕೆ ಹೋಗುವ ಸಂಪ್ರದಾ ಯವಿದೆ. ಸದ್ಯ ಸವದತ್ತಿ ಯಲ್ಲಮ್ಮ ದೇವಿಯ ಸಾರ್ವಜನಿಕ ದರ್ಶನಕ್ಕೆ ಅಕ್ಟೋಬರ್‌ ಅಂತ್ಯ­ದವರೆಗೆ ನಿಷೇಧ ಇರುವ ಕಾರಣ ಉಪ್ಪಿನಬೆಟಗೇರಿ ಗ್ರಾಮಕ್ಕೆ ಭಕ್ತರು ಹರಿದು ಬರುವ ನಿರೀಕ್ಷೆ ಇದೆ.

ಶ್ರೀಕೃಷ್ಣಮಠದ ಪಾರ್ಕಿಂಗ್‌ ಜಾಗದಲ್ಲಿ ಉಡುಪಿ ದಸರಾ
ಉಡುಪಿ: ಉಡುಪಿಯಲ್ಲಿ ಕಳೆದ ಐದು ವರ್ಷಗಳಿಂದ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿಯು “ಉಡುಪಿ ದಸರಾ’ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ಶ್ರೀಕೃಷ್ಣಮಠದ ವಾಹನ ಪಾರ್ಕಿಂಗ್‌ ಪ್ರದೇಶದಲ್ಲಿ ಉತ್ಸವವನ್ನು ಅ. 21ರಿಂದ 24ರ ವರೆಗೆ ಆಚರಿಸಲಾಗುತ್ತಿದೆ. ಐದನೆಯ ವರ್ಷವಾದ ಕಾರಣ ಅದ್ದೂರಿಯಾಗಿ ಆಚರಿಸಬೇಕೆಂದಿ­ದ್ದರೂ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸುತ್ತಿದ್ದೇವೆ. ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತ­ವಾಗಿರಿಸಿಕೊಂಡು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದೇವೆ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಅವರು.

ಶಿರಸಿಯಲ್ಲಿ ಸರಳ ನವರಾತ್ರಿಗೆ ಸಿದ್ಧತೆ
ರಾಜ್ಯದ ಶಕ್ತಿ ಮಾತೆ ಎಂದೇ ಹೆಸರಾದ ಶಿರಸಿ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ| ವೆಂಕಟೇಶ ನಾಯ್ಕ ತಿಳಿಸಿದ್ದಾರೆ. ಈ ಮೊದಲು ನಡೆಸುತ್ತಿದ್ದ ಸಾಂಸ್ಕೃತಿಕ, ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ. ಕಳೆದೆರಡು ವರ್ಷಗಳಿಂದ ನಡೆಸಲಾಗುತ್ತಿದ್ದ ಕೆಸರುಗದ್ದೆ ಓಟ ಕೂಡ ಈ ಬಾರಿ ಇಲ್ಲ ಎಂದು ವಿವರಿಸಿದ್ದಾರೆ.

ಸೋಂದಾ, ಸ್ವರ್ಣವಲ್ಲಿ: ಭಕ್ತರಿಗೆ ನಿರ್ಬಂಧ
ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿಯೂ ಇದೇ ಪ್ರಥಮ ಬಾರಿಗೆ ಸರಳವಾಗಿ ಶರನ್ನವರಾತ್ರಿ ಉತ್ಸವ ಆಚರಣೆ ಮಾಡಲಾ­ಗು­ತ್ತಿದೆ. ಮಠದಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು, ಸಪ್ತಶತಿ ಪಾರಾಯಣಗಳು ಮಾತ್ರ ನಡೆಯಲಿವೆ. ಭಕ್ತರು ಗುಂಪಾಗಿ ಬರುವದನ್ನೂ ಮಠದಲ್ಲಿ ನಿರ್ಬಂಧಿಸಲಾಗಿದೆ. ಈ ಮಧ್ಯೆ ಕಳೆದ ಹಲವು ವರ್ಷಗಳಿಂದ ಜಂಬೂ ಸವಾರಿ ಮೂಲಕ ಸೀಮೋಲಂಘನ, ವಿಜಯ ದಶಮಿ ಆಚರಣೆ ಮಾಡುತ್ತಿದ್ದ ಸೋಂದಾ ಜೈನ ಮಠದಲ್ಲೂ ಈ ಬಾರಿ ಸರಳ ಆಚರಣೆ ನಡೆಯಲಿದೆ. ತಾಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯ, ದಾನಂದಿಯ ಭುವನೇಶ್ವರಿ ದೇವಾಲಯದಲ್ಲಿ ಕೂಡ ಸರಳ ಆಚರಣೆ ನಡೆಯಲಿದೆ.

ಮಂಗಳೂರಲ್ಲಿ “ನಮ್ಮ ದಸರಾ ನಮ್ಮ ಸುರಕ್ಷೆ’ ಘೋಷಣೆ
ಮಂಗಳೂರು: ಮಂಗಳೂರು ದಸರಾ ಮಹೋತ್ಸವ ವಿಶ್ವವಿಖ್ಯಾತ. ಇದನ್ನು ಕೊರೊನಾ ಕಾರಣದಿಂದ ನಿಲ್ಲಿಸುವ ಬದಲು, ಸಂಪ್ರದಾಯ ಪ್ರಕಾರವಾಗಿ ನಡೆಸಲೇಬೇಕು ಎಂಬ ಆಗ್ರಹ ಭಕ್ತರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವವನ್ನು “ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದೊಂದಿಗೆ ಆಚರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ-ಸಂಘಟಕರು ನಿರ್ಧರಿಸಿದ್ದಾರೆ. ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಉತ್ಸವ ಆಚರಣೆ ನಡೆಯಲಿದೆ. ಆದರೆ ಈ ಬಾರಿ ದಸರಾ ಮೆರವಣಿಗೆ ಇರುವುದಿಲ್ಲ ಎಂದು ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ತಿಳಿಸಿದ್ದಾರೆ.

ಸಾಮಾಜಿಕ ಅಂತರದೊಂದಿಗೆ ದೇವರ ದರ್ಶನ
ಈ ಬಾರಿ ಶ್ರೀರಂಗಪಟ್ಟಣದಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು ಸಾಂಪ್ರದಾಯಿಕ ಮೆರವಣಿಗೆ, ದೀಪಾಲಂಕಾರಕ್ಕೆ ಸಿದ್ಧತೆ ನಡೆದಿದೆ.

ಬೀದರ್‌ನ ಸಾಯಿ ಆದರ್ಶ ಶಾಲಾವರಣದಲ್ಲಿ 38 ಅಡಿ ಎತ್ತರದ ರಾವಣ, 25 ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥನ ಮೂರ್ತಿ ದಹನ ಮಾಡಲಾಗುತ್ತದೆ.

ಬಾಗಲಕೋಟೆಯ ರಾಂಪೂರದ ಸೀತಾಚಲವಾಸ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ರದ್ದು ಪಡಿಸಲಾಗಿದೆ. ಪೂಜೆ, ಘಟಸ್ಥಾಪನೆ ಮಾತ್ರ ನೆರವೇರಿಸಲಾಗುತ್ತದೆ.

ಬನಶಂಕರಿ ದೇವಿಗೆ ನವರಾತ್ರಿಯಲ್ಲಿ ಸಾಂಕೇತಿಕ ಪೂಜೆ ನೆರವೇರಲಿದೆ. ಸಾಮಾಜಿಕ ಅಂತರದೊಂದಿಗೆ ದೇವಿಯ ದರ್ಶನ ಪಡೆಯಬಹುದು.

ಗದಗದ ಜಗದಂಬಾ ದೇವಸ್ಥಾನದಿಂದ ನಡೆಯುತ್ತಿದ್ದ ಆನೆ ಅಂಬಾರಿ, ಕಾಕಡಾರತಿ ಮೆರವಣಿಗೆ ಕೈಬಿಡಲು ಸಮಿತಿ ನಿರ್ಧರಿಸಿದೆ. ಕಾಕಡಾರತಿ, ಸಂಜೆಯ ವಿಶೇಷ ಪೂಜೆಯನ್ನು 50 ಜನರಿಗೆ ಮಿತಿಗೊಳಿಸಲಾಗಿದೆ.

ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ಎಲ್ಲ ಆಚರಣೆಗಳೂ ಸರಳವಾಗಿ ನಡೆಯಲಿವೆ. ನಿಗದಿತ ಜನರಿಂದಲೇ ಪಲ್ಲಕ್ಕಿ ಉತ್ಸವ ಆಚರಿಸಲಾಗುವುದು.

ಯಾದಗಿರಿಯ ಹಿಂದೂ ಸೇವಾ ಸಮಿತಿ, ಗುರು ಮಠಕಲ್‌ ಭವಾನಿ ದೇವಸ್ಥಾನ, ಶಹಾಪುರ ಭವಾನಿ ದೇವಸ್ಥಾನದಲ್ಲಿ ಸರಳ ಆಚರಣೆಗೆ ನಿರ್ಧರಿಸಲಾಗಿದೆ. ದೀಪಾಲಂಕಾರ ಕೈಬಿಡಲಾಗಿದೆ.

ದಾವಣಗೆರೆಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸರಳ ದಸರಾ ಮಹೋತ್ಸವ ನಡೆಯಲಿದೆ. ಸಂಪ್ರದಾಯದಂತೆ ಪೂಜಾ ಕಾರ್ಯ ನೆರವೇರಲಿದೆೆ.

ಚಿಕ್ಕಮಗಳೂರಿನ ಬೀಕನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾದ್ಯಗೋಷ್ಠಿ, ಸಿಡಿಮದ್ದು ಪ್ರದರ್ಶನ ರದ್ದುಪಡಿಸಲಾಗಿದೆ.

ರಾಯಬಾಗದ ಚಿಂಚಲಿಯ ಕೃಷ್ಣಾನದಿ ದಡದಲ್ಲಿನ ಮಾಯಕ್ಕಾ ದೇವಿಯ ದರ್ಶನಕ್ಕೆ ಅವಕಾಶ ಇಲ್ಲ. ದೇವಸ್ಥಾನಕ್ಕೆ ಸೀಮಿತವಾಗಿ ಪೂಜೆ ನಡೆಯಲಿದೆ.

ಶಿವಮೊಗ್ಗದ ರಿಪ್ಪನ್‌ಪೇಟೆಯ ಹುಂಚ ಪದ್ಮಾವತಿ ದೇವಾಲಯವು ಈ ಬಾರಿ ದಸರಾ ಉತ್ಸವದ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿಲ್ಲ. ಕೋಟೆ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿದ್ದು, ಪ್ರಸಾದ ವಿನಿಯೋಗ, ಹೋಮ-ಹವನ ನಡೆಯಲ್ಲ.

ಕಲಬುರಗಿ: ತುಳಜಾಪುರ ಅಂಬಾ ಭವಾನಿ ದೇವಾಲಯ ಬಾಗಿಲು ಬಂದ್‌ ಇರುವುದರಿಂದ ಯಾರಿಗೂ ದರ್ಶನ ಭಾಗ್ಯ ಇಲ್ಲ. ಕಲಬುರಗಿಯಲ್ಲೂ ಸಾರ್ವಜನಿಕವಾಗಿ ದೇವಿಯ ನೈವೇದ್ಯ, ಕಾಯಿ-ಕರ್ಪೂರದ ಅವಕಾಶಕ್ಕೆ ನಿರ್ಬಂಧ ಹೇರಲಾಗಿದೆ.

ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ. ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಸರಳ ಹಬ್ಬ ಆಚರಣೆಗೆ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next