Advertisement
ಬಿತ್ತನೆ ಆರಂಭವೇ ಆಗಿಲ್ಲ: ಜುಲೈ ಅಂತ್ಯದ ವೇಳೆಗೆ ಶೇ.80ರಷ್ಟು ಪೂರ್ಣವಾಗಬೇಕಾದ ಬಿತ್ತನೆ ಕಾರ್ಯ ಪ್ರಸ್ತುತ ಶೇ.10ರಷ್ಟು ಮಾತ್ರ ನಡೆದಿದ್ದು, ನೀರಾವರಿ ಪ್ರದೇಶದಲ್ಲಿ ಭತ್ತ ಹಾಗೂ ರಾಗಿ ಬಿತ್ತನೆಯಾಗಿರುವುದು ಹೊರತುಪಡಿಸಿದರೆ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ.
Related Articles
Advertisement
ವ್ಯರ್ಥವಾದ ಬಿತ್ತನೆ ಬೀಜ: ಮಳೆಯಾಶ್ರಿತ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುವ ರಾಗಿ ಬೀಜವನ್ನು ಈಗಾಗಲೇ ರೈತರಿಗೆ ವಿತರಣೆ ಮಾಡಲಾಗಿದ್ದು, ಎಂ.ಆರ್.1 ತಳಿಯ 95 ಕ್ವಿಂಟಲ್ ರಾಗಿ ಬೀಜ ವಿತರಿಸಲಾಗಿದೆ. ಜುಲೈ ಕೊನೆಯ ವಾರದೊಳಗೆ ಇದನ್ನು ಬಿತ್ತನೆ ಮಾಡಬೇಕಿದ್ದು, ಆಗಸ್ಟ್‌ನಲ್ಲಿ ಬಿತ್ತನೆ ಮಾಡಬೇಕಾದರೆ ರೈತರು ಕಡಿಮೆ ಅವಧಿಯ ರಾಗಿಯನ್ನು ಬಿತ್ತನೆ ಮಾಡಬೇಕಿದೆ.
ಬಿತ್ತನೆ ಮಾಡದಿದ್ದರೆ ಬೀಜ ವ್ಯರ್ಥ: ಬಿತ್ತನೆ ಅವಧಿ ಮುಗಿಯುತ್ತಿರುವುದರಿಂದ ಎಂ.ಆರ್.1 ಹಾಗೂ ಎಂ.ಆರ್ 6 ತಳಿಯ ರಾಗಿ ಬೀಜ ನೀಡುವುದನ್ನು ಸ್ಥಗಿತಗೊಳಿಸಿದ್ದು, ಕಡಿಮೆ ಅವಧಿಯ ಜಿಪುಯು 28, ಜಿಪಿಯು 26 ಹಾಗೂ ಜಿಪಿಯು 48, ಜಿಪಿಯು 66 ತಳಿಯ ರಾಗಿ ಬೀಜ ವಿತರಿಸಲು ಕೃಷಿ ಇಲಾಖೆ ಮುಂದಾಗಿದೆ. ಆಗಸ್ಟ್ ಎರಡನೇ ವಾರದ ಅಂತ್ಯದೊಳಗೆ ಇವುಗಳನ್ನು ಬಿತ್ತನೆ ಮಾಡಬೇಕಿದ್ದು, ಅಷ್ಟರಲ್ಲಿ ಬಿತ್ತನೆಯಾಗದಿದ್ದರೆ ಇವುಗಳೂ ಸಹ ವ್ಯರ್ಥವಾಗಲಿವೆ. ಎಂ.ಆರ್ 1 ತಳಿ ನಾಲ್ಕುವರೆ ತಿಂಗಳ ಬೆಳೆಯಾಗಿದ್ದು, ಜಿಪಿಯು 26 ಮೂರುವರೆ ತಿಂಗಳಲ್ಲಿ ಕಟಾವಿಗೆ ಬರುವುದರಿಂದ ಈ ತಳಿಯನ್ನೇ ಬಿತ್ತನೆಮಾಡುವಂತೆ ಕೃಷಿ ಇಲಾಖೆ ರೈತರಿಗೆ ಮನವರಿಕೆ ಮಾಡುವ ಕಾರ್ಯ ಮಾಡುತ್ತಿದೆ.
ದ್ವಿದಳ ಧಾನ್ಯಗಳದ್ದೂ ಇದೇ ಸ್ಥಿತಿ: ಇನ್ನು ರಾಗಿ ಹೊರತುಪಡಿಸಿ ತೊಗರಿ, ನೆಲಗಡಲೆ, ಅವರೆ ಸೇರಿದಂತೆ ಯಾವ ದ್ವಿದಳ ಧಾನ್ಯಗಳೂ ಸಹ ಬಿತ್ತನೆಯಾಗಿಲ್ಲ. ಹಿಂಗಾರು ಮಳೆಗೆ ಬಿತ್ತನೆ ಮಾಡಿದ್ದ ಎಳ್ಳು ಕಟಾವಿಗೆ ಬಂದಿದ್ದು, ನೀರಾವರಿ ಪ್ರದೇಶದಲ್ಲಿ ನೆಲಗಡಲೆ, ತೊಗರಿ ಹೊರತುಪಡಿಸಿದರೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆಯಾಗಿಲ್ಲ.
ದಾಸ್ತಾನಿದ್ದರೂ ಕೇಳುವರಿಲ್ಲ: ಇನ್ನು ಬಿತ್ತನೆ ಕಾಲದಲ್ಲಿ ಅವಶ್ಯವಾಗಿ ಬೇಕಾಗಿರುವ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದರೂ ಬಿತ್ತನೆಯಾಗದಿರು ವುದರಿಂದ ಕೇಳುವರಿಲ್ಲದಂತಾಗಿದೆ. ಖಾಸಗಿ ವ್ಯಕ್ತಿಗಳೂ ಸಹ ರಸಗೊಬ್ಬರವನ್ನು ದಾಸ್ತಾನು ಮಾಡಿದ್ದು ಮಳೆ ಬಿದ್ದರೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ ಮೂರು ವರ್ಷಗಳಿಂದ ನಿರಂತರವಾಗಿ ಬರಗಾಲ ಎದುರಿಸುತ್ತಾ ಶೇ.50ರಷ್ಟು ಇಳುವರಿ ಕಳೆದುಕೊಳ್ಳುತ್ತಾ ಬಂದಿರುವ ತಾಲೂಕು ಈ ಬಾರಿಯೂ ಅದೇ ಪರಿಸ್ಥಿತಿ ಎದುರಿಸುವ ಭೀತಿಯಲ್ಲಿದ್ದು, ಮಳೆರಾಯ ಇನ್ನೆರಡು ವಾರದಲ್ಲಿ ಕರುಣೆ ತೋರದಿದ್ದರೆ ಬರದ ಛಾಯೆ ಈ ಬಾರಿಯೂ ತಾಲೂಕನ್ನು ಆವರಿಸಲಿದೆ.
● ಎಂ.ಶಿವಮಾಧು