ಬೆಂಗಳೂರು: ಖ್ಯಾತ ಸಾಹಿತಿ, ಕಾದಂಬರಿಗಾರ ಡಾ.ಎಸ್.ಎಲ್.ಭೈರಪ್ಪ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರವಾಹ , ಬರ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡುವುದು ಸೂಕ್ತ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಸಲಹೆ ನೀಡಿದರು.
ಆದರೆ, ಸರಳ ಎಂದರೆ ಪ್ರವಾಸಿಗರು ಬರುವುದಿಲ್ಲ ಎಂದು ಇತರ ಶಾಸಕರು ಹೇಳಿದ್ದರಿಂದ ಎಂದಿನಂತೆ ವಿಜೃಂಭಣೆಯಿಂದ ಆಚರಿಸಿ. ದುಂದು ವೆಚ್ಚ ಮಾಡಬೇಡಿ ಎಂದು ಸಿಎಂ ಸಲಹೆ ನೀಡಿದರು. ಸೆ.29ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅ. 8ಕ್ಕೆ ಜಂಬೂ ಸವಾರಿ ನಡೆಯಲಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ದಸರಾ ಉದ್ಘಾಟನೆಗೆ ಎಸ್.ಎಲ್.ಭೈರಪ್ಪ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಅಲ್ಲದೆ, ದಸರಾ ಆಚರಣೆಗೆ 20.50 ಕೋಟಿ ರೂ.ಬಿಡುಗಡೆಗೂ ಒಪ್ಪಿಗೆ ನೀಡಲಾಯಿತು ಎಂದರು. ಸಂಸದರಾದ ಪ್ರತಾಪ್‌ಸಿಂಹ, ವಿ.ಶ್ರೀನಿವಾಸಪ್ರಸಾದ್, ಶಾಸಕರಾದ ತನ್ವೀರ್ ಸೇಠ್, ರವೀಂದ್ರ ಶ್ರೀಕಂಠಯ್ಯ, ಎಸ್.ಎ. ರಾಮದಾಸ್ ಉಪಸ್ಥಿತರಿದ್ದರು.
ದಸರಾ ಉನ್ನತ ಮಟ್ಟದ ಸಮಿತಿ ರಚನೆ: ಸಂಪುಟ ವಿಸ್ತರಣೆ ನಂತರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ದಸರಾ ಉನ್ನತ ಮಟ್ಟದ ಸಮಿತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಸಂಸದರು, ಮೈಸೂರು ರಾಜವಂಶಸ್ಥರು, ಮೈಸೂರು ಮೇಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸೇರಿ 24 ಮಂದಿ ಸದಸ್ಯರಿರುತ್ತಾರೆ.
ದಸರಾ ಸಂದರ್ಭದಲ್ಲಿ ರಾಜರ್ಷಿ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವವನ್ನು ಸರ್ಕಾರದಿಂದ ಆಚರಿಸಲು ನಿರ್ಧರಿಸಲಾಗಿದೆ. ವಿಜಯದಶಮಿ ದಿವಸ ಅರಮನೆ ಆವರಣದಲ್ಲಿ ನಡೆಯುವ ಜಂಬೂಸವಾರಿ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯುವ ಕಾರ್ಯಕ್ರಮ ವೀಕ್ಷಿಸಲು ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ವ್ಯವಸ್ಥೆ ಕಲ್ಪಿಸಲು, ಗಣ್ಯರಿಗೆ ಅಗತ್ಯಕ್ಕೆ ತಕ್ಕಂತೆ ಪಾಸುಗಳ ವಿತರಣೆಗೆ ಕ್ರಮ ಕೈಗೊಳ್ಳಲು, ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ವ್ಯಾಪಕ ಪ್ರಚಾರಕ್ಕೆ ಯೋಜನೆ: ದಸರಾ ಉತ್ಸವವನ್ನು ಜನಾಕರ್ಷಣೀಯವಾಗಿಸಲು ವ್ಯಾಪಕ ಪ್ರಚಾರ ನೀಡಲಾಗುವುದು. ಮಾಹಿತಿ ಕಿಯೋಸ್ಕ್ ತೆರೆಯುವುದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಇಲಾಖೆಯಿಂದ ಪ್ರಚಾರ ಕೈಗೊಳ್ಳುವುದು, ಪ್ರವಾಸೊದ್ಯಮ ಇಲಾಖೆಯಿಂದ ವಿಶೇಷ ಪ್ಯಾಕೇಜ್ ಟೂರ್ ಆಯೋಜಿಸುವುದು. ಮುಂಬೈ, ದೆಹಲಿ, ಕೋಲ್ಕತ್ತಾ, ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಚಾರ ಮಾಡುವುದು,
ರಾಜ್ಯ ರಸ್ತೆ ಸಾರಿಗೆ ನಿಗಮ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಾಹನಗಳಲ್ಲಿ ಪ್ರಚಾರ ಫಲಕ ಅಳವಡಿಸುವುದು, ರೈಲ್ವೆ ಇಲಾಖೆಯ ಅನುಮತಿ ಪಡೆದು ರಾಷ್ಟ್ರದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಚಾರ ಫಲಕ ಅಳವಡಿಸುವುದು, ಗಾಲಿಗಳ ಮೇಲೆ ಅರಮನೆ ಮಾದರಿಯಲ್ಲಿ ಮ್ಯೂಸಿಯಂ ಆನ್ ವೀಲ್ಸ್ ಆಯೋಜಿಸುವುದು, ದಸರಾಗೆ ಒಂದು ತಿಂಗಳು ಮುಂಚಿತವಾಗಿ ನಂತರ ಹತ್ತು ದಿನಗಳು ಹೊರ ರಾಜ್ಯಗಳ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.